ಸಿಎಂ ವಿಜಯ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ...ದಳಪತಿ ಕ್ಯಾಬಿನೆಟ್‌ನಲ್ಲಿ ಯಾರಿಗೆ ಯಾವ ಪವರ್..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ | Tamil Nadu Cabinet

Tamil Nadu Cabinet | ಸಿಎಂ ವಿಜಯ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ
Tamil Nadu Cabinet | ಸಿಎಂ ವಿಜಯ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ
Published on
ಚೆನ್ನೈ: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ನೂತನ ಸಂಪುಟದ ಸಚಿವರಿಗೆ ಖಾತೆಗಳನ್ನು (Tamil Nadu Cabinet) ಹಂಚಿಕೆ ಮಾಡಲಾಗಿದ್ದು, ವಿಜಯ್ ಅವರು ಗೃಹ, ಪೊಲೀಸ್ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸೇರಿದಂತೆ ಪ್ರಮುಖ ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಖಾತೆ ಹಂಚಿಕೆ ಪಟ್ಟಿಯ ಪ್ರಕಾರ, ಮುಖ್ಯಮಂತ್ರಿ ಜೋಸೆಫ್ ವಿಜಯ್ ಸಾರ್ವಜನಿಕ ಇಲಾಖೆ, ಸಾಮಾನ್ಯ ಆಡಳಿತ, ಗೃಹ, ಜಿಲ್ಲಾ ಕಂದಾಯ ಅಧಿಕಾರಿಗಳು, ಪೊಲೀಸ್, ವಿಶೇಷ ಕಾರ್ಯಕ್ರಮ ಅನುಷ್ಠಾನ, ಮಹಿಳಾ ಕಲ್ಯಾಣ, ಯುವಜನ ಕಲ್ಯಾಣ, ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣ, ಪೌರಾಡಳಿತ, ನಗರಾಭಿವೃದ್ಧಿ ಹಾಗೂ ನೀರು ಸರಬರಾಜು ಇಲಾಖೆಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ.
ಸಂಪುಟದ ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್​ಗೆ ಪ್ರಮುಖವಾದ ಹಣಕಾಸು ಖಾತೆಯನ್ನು ನೀಡಲಾಗಿದೆ. ಅವರು ನೂತನ ಸರ್ಕಾರದಲ್ಲಿ ಹಣಕಾಸು, ಪಿಂಚಣಿ ಮತ್ತು ಪಿಂಚಣಿ ಭತ್ಯೆಗಳ ಇಲಾಖೆಗಳನ್ನು ನಿಭಾಯಿಸಲಿದ್ದಾರೆ.
ಸಂಪುಟದ ಅತ್ಯಂತ ಕಿರಿಯ ಸಚಿವೆಯಾದ ಸೆಲ್ವಿ ಎಸ್. ಕೀರ್ತನಾ ಅವರಿಗೆ ಕೈಗಾರಿಕಾ ಇಲಾಖೆಯ ಜವಾಬ್ದಾರಿ ನೀಡಲಾಗಿದ್ದು, ಇದರೊಂದಿಗೆ ಅವರು ಹೂಡಿಕೆ ಉತ್ತೇಜನ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಳ್ಳಲಿದ್ದಾರೆ. ಮಹಿಳಾ ಸಚಿವೆಯೊಬ್ಬರಿಗೆ ಇಷ್ಟು ದೊಡ್ಡ ಇಲಾಖೆಯನ್ನು ಹಂಚಿಕೆ ಮಾಡಿರುವುದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಎನ್. ಆನಂದ್ ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು, ಅವರ ಇಲಾಖೆಗಳಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ಮತ್ತು ಪಂಚಾಯತ್ ಒಕ್ಕೂಟ, ಬಡತನ ನಿರ್ಮೂಲನೆ ಕಾರ್ಯಕ್ರಮ, ಗ್ರಾಮೀಣ ಸಾಲದ ವಿನಾಯಿತಿ ಮತ್ತು ಸಣ್ಣ ನೀರಾವರಿ ಸೇರಿದಂತೆ ನೀರಾವರಿ ಯೋಜನೆಗಳು ಸೇರಿವೆ.
ಸಿಎಂ ವಿಜಯ್​ ಆಪ್ತ ಆಧವ್ ಅರ್ಜುನ, ಲೋಕೋಪಯೋಗಿ ಮತ್ತು ಕ್ರೀಡಾ ಸಚಿವರಾಗಿದ್ದಾರೆ. ಅವರು ಕಟ್ಟಡಗಳು, ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳು ಸೇರಿದಂತೆ ಲೋಕೋಪಯೋಗಿ ಇಲಾಖೆ ಹಾಗೂ ಕ್ರೀಡಾ ಅಭಿವೃದ್ಧಿ ಇಲಾಖೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಡಾ. ಕೆ.ಜಿ. ಅರುಣ್‌ರಾಜ್​ಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಪಿ. ವೆಂಕಟರಮಣನ್ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದು, ಗ್ರಾಹಕ ರಕ್ಷಣೆ ಮತ್ತು ಬೆಲೆ ನಿಯಂತ್ರಣ ಇಲಾಖೆಗಳನ್ನು ನಿಭಾಯಿಸಲಿದ್ದಾರೆ.
ಆರ್. ನಿರ್ಮಲ್‌ಕುಮಾರ್​ಗೆ ಇಂಧನ ಸಂಪನ್ಮೂಲ ಮತ್ತು ಕಾನೂನು ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಅವರ ಇಲಾಖೆಗಳಲ್ಲಿ ವಿದ್ಯುತ್ ಮತ್ತು ಸಾಂಪ್ರದಾಯಿಕೇತರ ಇಂಧನ ಅಭಿವೃದ್ಧಿ, ಕಾನೂನು, ನ್ಯಾಯಾಲಯಗಳು, ಜೈಲುಗಳು ಮತ್ತು ಭ್ರಷ್ಟಾಚಾರ ತಡೆಗಟ್ಟುವಿಕೆ, ಶಾಸನಸಭೆ, ರಾಜ್ಯಪಾಲರು, ಚುನಾವಣೆಗಳು ಮತ್ತು ಪಾಸ್‌ಪೋರ್ಟ್ ಇಲಾಖೆಗಳು ಸೇರಿವೆ.
ರಾಜ್‌ಮೋಹನ್​​ಗೆ ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ ಸಚಿವರಾಗಿ ಜವಾಬ್ದಾರಿ ನೀಡಲಾಗಿದೆ. ಅವರು ಪುರಾತತ್ವ ಶಾಸ್ತ್ರ, ತಮಿಳು ಅಧಿಕೃತ ಭಾಷೆ ಮತ್ತು ತಮಿಳು ಸಂಸ್ಕೃತಿ, ಚಲನಚಿತ್ರ ತಂತ್ರಜ್ಞಾನ ಮತ್ತು ಚಲನಚಿತ್ರ ಕಾಯ್ದೆ, ಸುದ್ದಿ ಕಾಗದ ನಿಯಂತ್ರಣ, ಲೇಖನ ಸಾಮಗ್ರಿ ಮತ್ತು ಮುದ್ರಣ ಹಾಗೂ ಸರ್ಕಾರಿ ಮುದ್ರಣಾಲಯ ಇಲಾಖೆಗಳ ಉಸ್ತುವಾರಿಯನ್ನೂ ನೋಡಿಕೊಳ್ಳಲಿದ್ದಾರೆ.
ಡಾ. ಟಿ.ಕೆ. ಪ್ರಭುಗೆ ನೈಸರ್ಗಿಕ ಸಂಪನ್ಮೂಲ ಖಾತೆಯನ್ನು ಹಂಚಿಕೆ ಮಾಡಲಾಗಿದ್ದು, ಅವರು ಖನಿಜಗಳು ಮತ್ತು ಗಣಿ ಇಲಾಖೆಗಳನ್ನು ನಿಭಾಯಿಸಲಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net