ತಮಿಳುನಾಡಿನಲ್ಲಿ 'ಡಿಲಿಮಿಟೇಷನ್' ಫೈಟ್!...ಸಿಎಂ ವಿಜಯ್ ಕರೆದ ಸಭೆಗೆ ಡಿಎಂಕೆ ಬಹಿಷ್ಕಾರ, ಕಾಂಗ್ರೆಸ್ ಬೆಂಬಲ | CM Vijay Meeting

CM Vijay Meeting | ಸಿಎಂ ವಿಜಯ್ ಕರೆದ ಸಭೆಗೆ ಡಿಎಂಕೆ ಬಹಿಷ್ಕಾರ
CM Vijay Meeting | ಸಿಎಂ ವಿಜಯ್ ಕರೆದ ಸಭೆಗೆ ಡಿಎಂಕೆ ಬಹಿಷ್ಕಾರ
Published on

ಚೆನ್ನೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ರಾಜ್ಯದ ಸಂಸದರ ಸಭೆ (CM Vijay Meeting) ಕರೆದಿದ್ದು, ಅದರಲ್ಲಿ ಭಾಗವಹಿಸದೆ ಬಹಿಷ್ಕರಿಸಲು ಡಿಎಂಕೆ ಪಕ್ಷದ ಸಂಸದರು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರದ ಈ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಹಾಗೂ ರಾಜ್ಯದ ಮೇಲಾಗುವ ಸಂಭಾವ್ಯ ಪರಿಣಾಮಗಳ ಕುರಿತು ಚರ್ಚಿಸಲು ಶನಿವಾರ ಮಧ್ಯಾಹ್ನ 3 ಗಂಟೆಗೆ ಚೆನ್ನೈನ ಕಲೈವನಾರ್ ಅರಂಗಂನಲ್ಲಿ ಮುಖ್ಯಮಂತ್ರಿ ವಿಜಯ್ ಅಧ್ಯಕ್ಷತೆಯಲ್ಲಿ ಈ ಸಭೆ ಆಯೋಜಿಸಲಾಗಿದೆ.

ಈ ಸಭೆಯಲ್ಲಿ ಭಾಗವಹಿಸುವಂತೆ ಆಗಸ್ಟ್ 6 ಮತ್ತು 7 ರಂದು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಅವರು ಸಂಸದರಿಗೆ ಪ್ರತ್ಯೇಕ ಆಹ್ವಾನ ಪತ್ರಿಕೆಗಳನ್ನು ಕಳುಹಿಸಿದ್ದರು. ಆದರೆ, ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿರುವ ಈ ಚರ್ಚೆಯಲ್ಲಿ ತಮ್ಮ ಸಂಸದರು ಭಾಗವಹಿಸುವುದಿಲ್ಲ ಎಂದು ಡಿಎಂಕೆ ಮೂಲಗಳು ಸ್ಪಷ್ಟಪಡಿಸಿವೆ.

ಸರ್ವಪಕ್ಷ ಸಭೆ ಕರೆದ್ರೆ ಮಾತ್ರ ಬರ್ತೀವಿ!..

ಸಂಸದರು ತಮ್ಮ ಪಕ್ಷದ ನಿಲುವನ್ನು ಅನುಸರಿಸಬೇಕಾಗುತ್ತದೆ. ಹೀಗಾಗಿ ಈ ಸಭೆ ಅನಗತ್ಯವಾಗಿದೆ. ತಮಿಳುನಾಡಿನ ಹಿತಾಸಕ್ತಿಯನ್ನು ರಕ್ಷಿಸಲು ಡಿಎಂಕೆ ಸಂಪೂರ್ಣವಾಗಿ ಬದ್ಧವಾಗಿದೆ, ನಮ್ಮ ಪಕ್ಷದ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರು ತಮಿಳುನಾಡಿನ ಹಿತಾಸಕ್ತಿ ಕಾಪಾಡಲು ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಮೊದಲು ಧ್ವನಿ ಎತ್ತಿ ಹೋರಾಟ ನಡೆಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಮತ್ತೊಂದೆಡೆ, ಈ ಬೆಳವಣಿಗೆಯ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಸಂಸದ ಮಾಣಿಕಮ್ ಠಾಗೋರ್, ತಮಿಳುನಾಡಿನ ಹಿತಾಸಕ್ತಿಗಿಂತ ರಾಜಕೀಯಕ್ಕೆ ಆದ್ಯತೆ ನೀಡುವವರು ಈ ಸಭೆಯಿಂದ ದೂರ ಉಳಿಯಬಹುದು, ಆದರೆ ರಾಜಕೀಯಕ್ಕಿಂತ ತಮಿಳುನಾಡಿನ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವವರು ಮುಖ್ಯಮಂತ್ರಿ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದಿದ್ದಾರೆ. ಇದು ಪಕ್ಷ ರಾಜಕೀಯದ ವಿಷಯವಲ್ಲ. ಬದಲಿಗೆ ತಮಿಳುನಾಡಿನ ಹಕ್ಕುಗಳು, ಹಿತಾಸಕ್ತಿ ಮತ್ತು ಭವಿಷ್ಯದ ಪ್ರಶ್ನೆಯಾಗಿದೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಸಮಯ ಬಂದಾಗ ತಮಿಳುನಾಡಿನ ಪರವಾಗಿ ಯಾರು ನಿಂತರು ಎಂಬುದನ್ನು ನೆನಪಿನಲ್ಲಿಡುತ್ತಾರೆ ಎಂದು ಠಾಗೋರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಮೆಕೇದಾಟು ವಿಚಾರವನ್ನು ಪ್ರಸ್ತಾಪಿಸಿದಾಗ, ಕಾವೇರಿ ಮತ್ತು ಮೆಕೇದಾಟು ವಿವಾದಕ್ಕೆ ಸಕಾರಾತ್ಮಕ ಪರಿಹಾರ ಕಂಡುಕೊಳ್ಳುವ ಭರವಸೆಯಿಂದ ನೆರೆಯ ಕರ್ನಾಟಕದೊಂದಿಗೆ ಮಾತುಕತೆ ನಡೆಸುವ ಪ್ರಸ್ತಾಪವನ್ನು ತಾನೇ ಮುಂದಿಟ್ಟಿದ್ದಾಗಿ ಸಿಎಂ ವಿಜಯ್ ಹೇಳಿದ್ದರು. ಅಲ್ಲದೆ, ಈ ಸೂಕ್ಷ್ಮ ವಿಚಾರದಲ್ಲಿ ತಾವು ಯಾವುದೇ ರೀತಿಯ ಕೀಳುಮಟ್ಟದ ರಾಜಕೀಯ ಮಾಡಲು ಬಯಸುವುದಿಲ್ಲ ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದರು.(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net