ಪ್ರಮಾಣ ವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ ಜಪ; ನೂತನ ಸಚಿವರಿಗೆ ವೇದಿಕೆಯಲ್ಲೇ ಕ್ಲಾಸ್ ತಗೊಂಡ ರಾಜ್ಯಪಾಲರು! | S RajeshKumar

S RajeshKumar | ಪ್ರಮಾಣ ವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ ಜಪ ಮಾಡಿದ ಕಾಂಗ್ರೆಸ್ ಶಾಸಕ ಎಸ್. ರಾಜೇಶ್ ಕುಮಾರ್
S RajeshKumar | ಪ್ರಮಾಣ ವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ ಜಪ ಮಾಡಿದ ಕಾಂಗ್ರೆಸ್ ಶಾಸಕ ಎಸ್. ರಾಜೇಶ್ ಕುಮಾರ್
Published on
S RajeshKumar: ತಮಿಳುನಾಡು ಕಾಂಗ್ರೆಸ್ ಪಾಲಿಗೆ ಇಂದು ವಿಶೇಷ ದಿನ. ಸುಮಾರು ಆರು ದಶಕಗಳ ಸುದೀರ್ಘ ಅವಧಿಯ ಬಳಿಕ ಕೈ ನಾಯಕರೊಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 1967ರ ನಂತರ ಕಾಂಗ್ರೆಸ್ ಮೊದಲ ಬಾರಿಗೆ ತಮಿಳುನಾಡು ಸರ್ಕಾರದ ಭಾಗವಾಗಿದೆ. ಆದರೆ, ಈ ಐತಿಹಾಸಿಕ ಕ್ಷಣವು ಒಂದು ಸಣ್ಣ ವಿವಾದಕ್ಕೂ ಸಾಕ್ಷಿಯಾಗಿರುವುದು ವಿಷಾದನೀಯ.
ಕಾಂಗ್ರೆಸ್ ಶಾಸಕ ಎಸ್. ರಾಜೇಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸುವಾಗ ವೇದಿಕೆಯಿಂದಲೇ ಕಾಂಗ್ರೆಸ್ ನಾಯಕರ ಪರ ಜಯಘೋಷ ಕೂಗಿದ್ದು, ಪ್ರಮಾಣ ವಚನ ಬೋಧಿಸುತ್ತಿದ್ದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಂದ ತಕ್ಷಣವೇ ಆಕ್ಷೇಪ ವ್ಯಕ್ತವಾಗುವಂತೆ ಮಾಡಿತು.
ಪ್ರಮಾಣ ವಚನದ ಪಠ್ಯವನ್ನು ಓದಿದ ರಾಜೇಶ್ ಕುಮಾರ್, ತಮ್ಮ ಸರದಿ ಮುಗಿಯುತ್ತಿದ್ದಂತೆ ಹಠಾತ್ತನೆ ಕಾಂಗ್ರೆಸ್ ನಾಯಕರಾದ ಕಾಮರಾಜ್, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಹೆಸರನ್ನು ಜಪಿಸಲು ಆರಂಭಿಸಿದರು. ಕಾಂಗ್ರೆಸ್ ನಾಯಕರ ಈ ಮಾತಿಗೆ ಅಸಾಮಾಧಾನಗೊಂಡ ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಿ, ಇದು ನಿಮ್ಮ ಪ್ರಮಾಣ ವಚನದ ಭಾಗವಲ್ಲ ಎಂದರು. ರಾಜ್ಯಪಾಲರ ಈ ಮಾತಿಗೆ ಶಾಸಕ ರಾಜೇಶ್ ಕುಮಾರ್ ಕೂಡ ಕಿರುನಗೆ ಬೀರಿ, ಪ್ರಮಾಣ ವಚನ ಪತ್ರಕ್ಕೆ ಸಹಿ ಹಾಕಲು ಮುಂದಾದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ವಿಡಿಯೋದಲ್ಲಿ ಎಸ್. ರಾಜೇಶ್ ಕುಮಾರ್ ಅವರು, ತಮಿಳುನಾಡಿನ ಕಾಂಗ್ರೆಸ್ ಹಿರಿಯ ನಾಯಕ ಕಾಮರಾಜ್ ಅವರ ಹೆಸರು ಚಿರಾಯುವಾಗಲಿ, ಭಾರತ ರತ್ನ ರಾಜೀವ್ ಗಾಂಧಿ ಅಮರರಾಗಲಿ ಮತ್ತು ಜನ ನಾಯಕ ರಾಹುಲ್ ಗಾಂಧಿ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿರುವುದು ದಾಖಲಾಗಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್, ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಬಹುಮತದ ಕೊರತೆ ಎದುರಾದಾಗ ಸರ್ಕಾರ ರಚಿಸಲು ಪ್ರಮುಖ ಬೆಂಬಲ ನೀಡಿದೆ. ತನ್ನ ದಶಕಗಳ ಹಳೆಯ ಮಿತ್ರಪಕ್ಷವಾದ ಡಿಎಂಕೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡು, ಟಿವಿಕೆಗೆ ಮೊದಲು ಬೆಂಬಲ ಘೋಷಿಸಿದ್ದು ಇದೇ ಕಾಂಗ್ರೆಸ್. ಕಳೆದ 20 ವರ್ಷಗಳಿಂದ ಡಿಎಂಕೆ ಮೈತ್ರಿಕೂಟದಲ್ಲಿದ್ದರೂ, ರಾಜ್ಯದಲ್ಲಿ ಎಂದಿಗೂ ಡಿಎಂಕೆ ಸಚಿವ ಸಂಪುಟದ ಭಾಗವಾಗಿರಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ.
ಮುಖ್ಯಮಂತ್ರಿ ಜೋಸೆಫ್ ವಿಜಯ್ ಮೇ 10 ರಂದು ಒಂಬತ್ತು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಗುರುವಾರದಂದು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, 21 ಟಿವಿಕೆ ಶಾಸಕರು ಮತ್ತು ಇಬ್ಬರು ಕಾಂಗ್ರೆಸ್ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net