_1769538023141.webp?w=480&auto=format%2Ccompress&fit=max)
_1769538023141.webp?w=480&auto=format%2Ccompress&fit=max)
ಭಾರತದ ರಸ್ತೆಗಳಲ್ಲಿ ವಾಹನಸವಾರಿ ಮಾಡುವುದು ಒಂದು ಸವಾಲೇ ಸರಿ ಎಂಬ ಭಾವನೆ ವ್ಯಾಪಕವಾಗಿದೆ. ಆದರೆ, ರಸ್ತೆಯಲ್ಲಿನ ಅಪಾಯಗಳನ್ನು ನಿಮ್ಮ ಕಾರು ಮೊದಲೇ ಪತ್ತೆ ಹಚ್ಚಿ ನಿಮ್ಮನ್ನು ಎಚ್ಚರಿಸಿದರೆ ಹೇಗಿರುತ್ತದೆ? ವೆಹಿಕಲ್-ಟು-ವೆಹಿಕಲ್ (ವಿ2ವಿ) ಮತ್ತು ವೆಹಿಕಲ್-ಟು-ಎವ್ರಿಥಿಂಗ್ (ವಿ2ಇ) ಎಂಬ ಅತ್ಯಾಧುನಿಕ ತಂತ್ರಜ್ಞಾನ ಈ ಕಲ್ಪನೆಯನ್ನು ನನಸಾಗಿಸುತ್ತಿದೆ. ವೈರ್ಲೆಸ್ ನೆಟ್ವರ್ಕ್ ಮೂಲಕ ವಾಹನಗಳು ಪರಸ್ಪರ ಸಂವಹನ ನಡೆಸುವ ಈ ವ್ಯವಸ್ಥೆ, ರಸ್ತೆಯ ಬ್ಲೈಂಡ್ ಕರ್ವ್ಗಳಲ್ಲಿ ಎದುರಾಗುವ ವಾಹನಗಳ ಬಗ್ಗೆ ಅಥವಾ ಹಠಾತ್ ಬ್ರೇಕ್ ಹಾಕುವ ಚಾಲಕರ ಬಗ್ಗೆ ಮುನ್ಸೂಚನೆ ನೀಡುತ್ತದೆ! ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಮತ್ತು ಸುಗಮ ಸಂಚಾರ ವ್ಯವಸ್ಥೆ ರೂಪಿಸಲು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಈ ತಂತ್ರಜ್ಞಾನ, ಭಾರತದ ಸಾರಿಗೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ. ಮನುಷ್ಯರ ತಪ್ಪುಗಳಿಂದ ಸಂಭವಿಸುವ ಅನಾಹುತಗಳನ್ನು ತಂತ್ರಜ್ಞಾನದ ಮೂಲಕ ಹೇಗೆ ನಿಯಂತ್ರಿಸಬಹುದು? ಅಪಘಾತ ಮುಕ್ತ ಭಾರತದ ಕನಸು ಇದರಿಂದ ಹೇಗೆ ನನಸಾಗುತ್ತದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇಂಥದೊಂದು ಋಣಾತ್ಮಕ ಜಾಗತಿಕ ದಾಖಲೆಗೆ ಭಾರತ ಪಾತ್ರವಾಗಿದೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಚೀನಾ ಮತ್ತು ಅಮೆರಿಕದಂತಹ ದೊಡ್ಡ ರಾಷ್ಟ್ರಗಳಿಗಿಂತ ನಾವು ಈ ವಿಷಯದಲ್ಲಿ ಹತ್ತಾರು ಹೆಜ್ಜೆ ಮುಂದಿದ್ದೇವೆ! ಭಾರತದಲ್ಲಿ ಸಂಭವಿಸುವ ಒಟ್ಟು ರಸ್ತೆ ಅಪಘಾತದ ಸಾವುಗಳಿಗೆ ಹೋಲಿಸಿದರೆ ಚೀನಾದಲ್ಲಿ ಕೇವಲ ಶೇಕಡಾ 36ರಷ್ಟು ಮತ್ತು ಅಮೆರಿಕದಲ್ಲಿ ಕೇವಲ ಶೇಕಡಾ 25ರಷ್ಟು ಸಾವುಗಳು ಸಂಭವಿಸುತ್ತವೆ. ಈ ಭೀಕರ ವಾಸ್ತವವನ್ನು ಮನಗಂಡಿರುವ ಕೇಂದ್ರ ಸರ್ಕಾರ ಇದೀಗ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ವಾಹನ ದಟ್ಟಣೆಯನ್ನು ನಿಯಂತ್ರಿಸಲು ವಾಹನಗಳ ನಡುವಿನ ಸಂವಹನ ವ್ಯವಸ್ಥೆ ಅರ್ಥಾತ್ ವೆಹಿಕಲ್ ಟು ವೆಹಿಕಲ್ (ವಿ2ವಿ) ತಂತ್ರಜ್ಞಾನವನ್ನು ಜಾರಿಗೆ ತರಲು ಸಜ್ಜಾಗಿದೆ.
ವೆಹಿಕಲ್ ಟು ವೆಹಿಕಲ್ ಸಂವಹನ ಒಂದು ಅತ್ಯಾಧುನಿಕ ವೈರ್ಲೆಸ್ ತಂತ್ರಜ್ಞಾನ. ಇದು ರಸ್ತೆಯಲ್ಲಿ ಚಲಿಸುವ ವಾಹನಗಳು ಪರಸ್ಪರ ಮಾತನಾಡಲು ಅಥವಾ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಇದರಡಿಯಲ್ಲಿ ವಾಹನದ ವೇಗ, ನಿಖರವಾದ ಸ್ಥಳ, ವೇಗ ಹೆಚ್ಚಿಸುವುದು (ಆಕ್ಸೆಲರೇಷನ್) ಮತ್ತು ಹಠಾತ್ ಬ್ರೇಕ್ ಹಾಕುವಿಕೆಯಂತಹ ರಿಯಲ್ ಟೈಮ್ ಮಾಹಿತಿಯನ್ನು ಸಮೀಪದ ಇತರ ವಾಹನಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದು ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ ಎಂಬ ಬೃಹತ್ ವ್ಯವಸ್ಥೆಯ ಒಂದು ಭಾಗವಾಗಿದ್ದು, ಇದನ್ನು ವಿ2ಎಕ್ಸ್ (ವೆಹಿಕಲ್ ಟು ಎವರಿಥಿಂಗ್) ವರ್ಗಕ್ಕೆ ಸೇರಿಸಲಾಗುತ್ತದೆ. ಈ ತಂತ್ರಜ್ಞಾನ ವಿಮಾನಯಾನ ಕ್ಷೇತ್ರದಲ್ಲಿ ಬಳಕೆಯಾಗುವ ವ್ಯವಸ್ಥೆಯನ್ನು ಹೋಲುತ್ತದೆ. ವಿಮಾನಗಳು ಹಾರಾಟದ ಸಮಯದಲ್ಲಿ ತಮ್ಮ ಸ್ಥಾನ, ವೇಗ ಮತ್ತು ಎತ್ತರದ ಮಾಹಿತಿಯನ್ನು ಭೂಮಿಯ ಮೇಲಿನ ನಿಯಂತ್ರಣ ಕೇಂದ್ರಗಳಿಗೆ ಬಿತ್ತರಿಸುತ್ತಿರುತ್ತವೆ. ಅದೇ ಕಾಲಕ್ಕೆ ಸಮೀಪದ ಇತರ ವಿಮಾನಗಳಿಗೂ ಈ ಮಾಹಿತಿಯನ್ನು ತಲುಪುತ್ತಿರುತ್ತದೆ. ವಿಮಾನಯಾನದಲ್ಲಿ ಈ ವ್ಯವಸ್ಥೆ ಅತ್ಯಂತ ಭದ್ರವಾಗಿ ಬೇರೂರಿದ್ದರೂ, ರಸ್ತೆ ಸಾರಿಗೆ ಕ್ಷೇತ್ರದಲ್ಲಿ ಇದನ್ನು ಈಗಷ್ಟೇ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಕೆಲವು ಮುಂದುವರಿದ ದೇಶಗಳಲ್ಲಿ ಮಾತ್ರ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಬಳಕೆಯಲ್ಲಿದೆ.
ಜನವರಿ 22ರಂದು ನವದೆಹಲಿಯಲ್ಲಿ ನಡೆದ ಸಂಸದೀಯ ಸಲಹಾ ಸಮಿತಿಯ ಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ವಾಹನಗಳ ನಡುವಿನ ಸಂವಹನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ದೂರಸಂಪರ್ಕ ಇಲಾಖೆ ಈಗಾಗಲೇ 30 ಗಿಗಾ ಹರ್ಟ್ಸ್ ರೇಡಿಯೋ ತರಂಗಾಂತರವನ್ನು ಹಂಚಿಕೆ ಮಾಡಿದೆ. ಈ ಕ್ರಮ ರಸ್ತೆ ಅಪಘಾತಗಳನ್ನು ಗಣನೀಯವಾಗಿ ತಗ್ಗಿಸುವಲ್ಲಿ ಮತ್ತು ವಾಹನ ಚಾಲಕರು/ ಸವಾರರ ಜೀವಗಳನ್ನು ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಭರವಸೆಯನ್ನು ಸರ್ಕಾರ ಹೊಂದಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಪ್ರತಿಯೊಂದು ವಾಹನದಲ್ಲಿಯೂ ಆನ್ ಬೋರ್ಡ್ ಯುನಿಟ್ (ಒಬಿಯು) ಎಂಬ ಸಾಧನವನ್ನು ಅಳವಡಿಸಲಾಗುತ್ತದೆ. ಇದು ವೈರ್ಲೆಸ್ ನೆಟ್ವರ್ಕ್ ಮೂಲಕ ಸಂವಹನ ನಡೆಸಿ ಚಾಲಕನಿಗೆ ಮುಂದಿರಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ರಸ್ತೆಯಲ್ಲಿನ ಬ್ಲ್ಯಾಕ್ ಸ್ಪಾಟ್ಗಳು, ಅಡೆತಡೆಗಳು, ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳು, ಮಂಜು ಕವಿದ ವಾತಾವರಣ ಅಥವಾ ಯಾವುದೇ ಸಂಭಾವ್ಯ ಅಪಾಯಗಳ ಬಗ್ಗೆ ಈ ಸಾಧನ ಸಾಕಷ್ಟು ಮೊದಲೇ ಚಾಲಕನಿಗೆ ಮುನ್ನೆಚ್ಚರಿಕೆ ನೀಡುತ್ತದೆ. ಸಾಮಾನ್ಯವಾಗಿ ವಿ2ವಿ ವ್ಯವಸ್ಥೆ 300 ಮೀಟರ್ ವ್ಯಾಪ್ತಿಯನ್ನು ಹೊಂದಿರುತ್ತದೆ. ಉದಾಹರಣೆಗೆ, ನಿಮ್ಮ ವಾಹನದ ಮುಂದಿರುವ ಕಾರು ಹಠಾತ್ ಆಗಿ ಬ್ರೇಕ್ ಹಾಕಿದರೆ, ಅದು ನಿಮ್ಮ ಕಣ್ಣಿಗೆ ಕಾಣಿಸುವ ಮೊದಲೇ ನಿಮ್ಮ ವಾಹನದ ಸಾಧನಕ್ಕೆ ಎಚ್ಚರಿಕೆ ಸಂದೇಶ ಬಂದಿರುತ್ತದೆ. ಇದರಿಂದ ನೀವು ಎಚ್ಚೆತ್ತುಕೊಂಡು ವಾಹನದ ವೇಗವನ್ನು ಕಡಿಮೆ ಮಾಡಿ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದು.
ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವಿ. ಉಮಾಶಂಕರ್ ಹೇಳುವ ಪ್ರಕಾರ, ವಿ2ವಿ ತಂತ್ರಜ್ಞಾನವುಳ್ಳ ಈ ಸಾಧನದ ಬೆಲೆ ಸುಮಾರು 5,000ದಿಂದ 7,000 ರೂ. ಆಗಬಹುದು. ಅನುಷ್ಠಾನದ ಆರಂಭಿಕ ಹಂತದಲ್ಲಿ ಇದನ್ನು ಹೊಸ ವಾಹನಗಳಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ವಾಹನ ತಯಾರಿಕಾ ಸಂಸ್ಥೆಗಳಿಗೆ ಸೂಚಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ನಂತರದ ದಿನಗಳಲ್ಲಿ ಹಂತಹಂತವಾಗಿ ಇತರ ಎಲ್ಲ ವಾಹನಗಳಿಗೂ ಕಡ್ಡಾಯವಾಗಲಿದೆ.
ಕೇಂದ್ರ ಸರ್ಕಾರ ಈ ತಂತ್ರಜ್ಞಾನದ ಜಾರಿಗೆ ಇನ್ನೂ ನಿರ್ದಿಷ್ಟ ದಿನಾಂಕವನ್ನು ಘೊಷಿಸಿಲ್ಲವಾದರೂ, ಇದನ್ನು ಈ ವರ್ಷದ ರಸ್ತೆ ಸುರಕ್ಷತಾ ಕಾರ್ಯಕ್ರಮದ ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ. ಮೂಲ ಉಪಕರಣ ತಯಾರಕರ (ಒರಿಜಿನಲ್ ಇಕ್ವಿಪ್ವೆುಂಟ್ ಮ್ಯಾನ್ಯುಫ್ಯಾಕ್ಚರರ್ಸ್) ಜತೆ ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ರ್ಚಚಿಸುತ್ತಿದ್ದು, ಒಂದು ಅತ್ಯುತ್ತಮ ಮಾನದಂಡವನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ದೂರಸಂಪರ್ಕ ಇಲಾಖೆಯೊಂದಿಗೆ ಸೇರಿ ಜಂಟಿ ಕಾರ್ಯಪಡೆಯನ್ನೂ ರಚಿಸಲಾಗಿದೆ. ಮಾನದಂಡಗಳು ಅಂತಿಮಗೊಂಡ ನಂತರ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಲಿದೆ. ರಾಷ್ಟ್ರೀಯ ತರಂಗಾಂತರ ಹಂಚಿಕೆ ಯೋಜನೆಯಡಿ ದೂರಸಂಪರ್ಕ ಇಲಾಖೆ ಉಚಿತ ಸ್ಪೆಕ್ಟ್ರಮ್ ನೀಡಲಿದೆ. ಇದರಿಂದ ತಯಾರಕರು ಈ ವ್ಯವಸ್ಥೆಯನ್ನು ವಾಹನಗಳಲ್ಲಿ ಅಳವಡಿಸುವುದು ಸುಲಭವಾಗಲಿದೆ. ಹೊಸ ವಾಹನಗಳ ನಂತರ ಹಳೆಯ ವಾಹನಗಳಿಗೂ ಈ ಸಾಧನವನ್ನು ಅಳವಡಿಸುವ ಯೋಜನೆ ಸರ್ಕಾರದ ಮುಂದಿದೆ. ಈ ವರ್ಷದ ಅಂತ್ಯದೊಳಗೆ ಇದನ್ನು ಕಾರ್ಯರೂಪಕ್ಕೆ ತರುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ವಿ2ವಿ ತಂತ್ರಜ್ಞಾನ ರಸ್ತೆ ಸುರಕ್ಷತೆಗೆ ವರದಾನವಾಗಿದ್ದರೂ, ಇದರ ಮುಂದೆ ಕೆಲವು ಗಂಭೀರ ಸವಾಲುಗಳಿವೆ. ಹಂಚಿಕೆಯಾದ ತರಂಗಾಂತರ ಎಲ್ಲ ವಾಹನಗಳ ಏಕಕಾಲದ ಸಂವಹನವನ್ನು ಬೆಂಬಲಿಸದಿದ್ದರೆ ಅಥವಾ ಮಾಹಿತಿ ವಿನಿಮಯದಲ್ಲಿ ಅಸ್ಪಷ್ಟತೆ ಉಂಟಾದರೆ, ಅದು ವ್ಯತಿರಿಕ್ತವಾಗಿ ಅಪಘಾತಗಳಿಗೂ ಕಾರಣವಾಗಬಹುದು! ಮತ್ತೊಂದು ಪ್ರಮುಖ ಆತಂಕವೆಂದರೆ ಡೇಟಾ ಪ್ರೖೆವಸಿ. ಈ ವ್ಯವಸ್ಥೆಯಲ್ಲಿ ವಾಹನದ ಸಂಚಾರ, ಚಾಲಕನ ವಿವರಗಳು ಮತ್ತು ಸ್ಥಳದ ಬಗ್ಗೆ ಅಪಾರ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ. ಈ ಮಾಹಿತಿ ದುರುಪಯೋಗವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಇದಕ್ಕೆ ಕಟ್ಟುನಿಟ್ಟಾದ ನಿಯಮಾವಳಿ ಅಗತ್ಯ. ಅಲ್ಲದೆ, ಇಡೀ ವ್ಯವಸ್ಥೆ ಸೈಬರ್ ದಾಳಿಗೆ ಒಳಗಾಗುವ ಅಪಾಯವೂ ಇದೆ. ಹ್ಯಾಕರ್ಗಳು ಈ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದರೆ ಅದು ದೊಡ್ಡ ಮಟ್ಟದ ಭದ್ರತಾ ಸಮಸ್ಯೆಯಾಗಿ ಪರಿಣಮಿಸಬಹುದು.
ಅಮೆರಿಕ ಪ್ರಸ್ತುತ ವಿ2ವಿ ತಂತ್ರಜ್ಞಾನದ ಸಂಶೋಧನೆ ಮತ್ತು ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ಅಲ್ಲಿನ ಫೋಕ್ಸ್ವ್ಯಾಗನ್ ಗಾಲ್ಪ್ 8 ಮತ್ತು ಕ್ಯಾಡಿಲಾಕ್ನಂತಹ ಕೆಲವು ವಾಹನಮಾದರಿಗಳಲ್ಲಿ ಈಗಾಗಲೇ ಈ ಸುರಕ್ಷತಾ ವ್ಯವಸ್ಥೆಯಿದೆ. ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್ನಂತಹ ಐರೋಪ್ಯ ರಾಷ್ಟ್ರಗಳು ತಮ್ಮ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿವೆ. ಜಪಾನ್ ತನ್ನ ಐಟಿಎಸ್ ಕನೆಕ್ಟ್ ಕಾರ್ಯಕ್ರಮದ ಮೂಲಕ ರಿಯಲ್ ಟೈಮ್ ಟ್ರಾಫಿಕ್ ಸಿಗ್ನಲ್ ಡೇಟಾ ಮತ್ತು ತುರ್ತು ವಾಹನಗಳ ಬಗ್ಗೆ ಚಾಲಕರಿಗೆ ಎಚ್ಚರಿಕೆ ನೀಡುತ್ತಿದೆ. ಚೀನಾ ಕೂಡ ಈ ತಂತ್ರಜ್ಞಾನವನ್ನು ಒಪ್ಪಿಕೊಂಡಿರುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದಂತೆಯೇ ಯುಎಇ, ಸೌದಿ ಅರೇಬಿಯಾ, ಬ್ರೆಜಿಲ್ ಮತ್ತು ಮೆಕ್ಸಿಕೋ ದೇಶಗಳು ಈ ತಂತ್ರಜ್ಞಾನದ ಆರಂಭಿಕ ಪ್ರಾಯೋಗಿಕ ಹಂತದಲ್ಲಿವೆ.
ರಸ್ತೆ ಅಪಘಾತಗಳಲ್ಲಿ ನಿತ್ಯವೂ ನೂರಾರು ಜೀವಗಳನ್ನು ಕಳೆದುಕೊಳ್ಳುತ್ತಿರುವ ಭಾರತಕ್ಕೆ, ಈ ತಂತ್ರಜ್ಞಾನ ಒಂದು ಐಷಾರಾಮಿ ಸೌಲಭ್ಯ ವಲ್ಲ, ಬದಲಾಗಿ ಅನಿವಾರ್ಯ ಸವಲತ್ತು. ತಾಂತ್ರಿಕ ಸವಾಲುಗಳನ್ನೆಲ್ಲ ಮೆಟ್ಟಿನಿಂತು ಯಶಸ್ವಿ ಯಾಗಿ ಜಾರಿಗೆ ತಂದರೆ, ದೇಶದ ರಸ್ತೆಗಳು ಖಂಡಿತವಾಗಿಯೂ ಸುರಕ್ಷಿತವಾಗಲಿವೆ.