ಕೇರಳದಲ್ಲಿ 'ಕೈ' ಕಮಾಲ್: ಸೋಲಿನ ನೈತಿಕ ಹೊಣೆ ಹೊತ್ತು, ಸಿಎಂ ಸ್ಥಾನಕ್ಕೆ ಪಿಣರಾಯಿ ವಿಜಯನ್ ರಾಜೀನಾಮೆ! | Resigns

Resigns
Resigns
Published on
ತಿರುವನಂತಪುರಂ: ದಕ್ಷಿಣ ಭಾರತದ ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದ ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಅಮೋಘ ಜಯ ಸಾಧಿಸಿದೆ. ಈ ಸೋಲಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ(Resigns) ನೀಡಿದ್ದಾರೆ.
ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ವಿಜಯನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಹಾಗೂ ಪರ್ಯಾಯ ವ್ಯವಸ್ಥೆಗಳಾಗುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಅವರಿಗೆ ಸೂಚಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಯುಡಿಎಫ್ ಅಬ್ಬರ, ಎಲ್‌ಡಿಎಫ್ ಪತನ

ಕಳೆದ ಎರಡು ಅವಧಿಗೆ ಅಧಿಕಾರದಲ್ಲಿದ್ದ ಎಡರಂಗದ (LDF) ಕೋಟೆಯನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈ ಬಾರಿ ಧೂಳೀಪಟ ಮಾಡಿದೆ. ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ 63 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮ್ಯಾಜಿಕ್ ನಂಬರ್ ಸಮೀಪಕ್ಕೆ ಬಂದು ಅಧಿಕಾರದ ಗದ್ದುಗೆಯನ್ನು ಏರಲು ಸಜ್ಜಾಗಿದೆ. ಇನ್ನು ಸಿಪಿಐ(ಎಂ) ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್ ಕೇವಲ 26 ಸ್ಥಾನಗಳಿಗೆ ಕುಸಿದು ಮುಖಭಂಗ ಅನುಭವಿಸಿದೆ. ಗಮನಾರ್ಹವಾಗಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) 22 ಸ್ಥಾನಗಳನ್ನು ಗೆಲ್ಲುವ ಮೂಲಕ ಮೈತ್ರಿಕೂಟದ ಬಲವನ್ನು ಹೆಚ್ಚಿಸಿದೆ.

ರಾಹುಲ್ ಗಾಂಧಿ ಧನ್ಯವಾದ

ಯುಡಿಎಫ್ ಜಯಭೇರಿಯ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಜನತೆಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಅವರು, "ಕೇರಳದ ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ಈ ನಿರ್ಣಾಯಕ ತೀರ್ಪು ನೀಡಿದ್ದಕ್ಕಾಗಿ ಧನ್ಯವಾದಗಳು. ಯುಡಿಎಫ್‌ನ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತರಿಗೆ ಅಭಿನಂದನೆಗಳು," ಎಂದಿದ್ದಾರೆ.
"ಕೇರಳದಲ್ಲಿ ಅಪಾರ ಪ್ರತಿಭೆ ಮತ್ತು ಸಾಮರ್ಥ್ಯವಿದೆ. ಅದನ್ನು ಸರಿಯಾದ ಹಾದಿಯಲ್ಲಿ ಬಳಸಿಕೊಳ್ಳುವ ದೃಷ್ಟಿಕೋನ ನಮ್ಮ ಯುಡಿಎಫ್ ಸರ್ಕಾರಕ್ಕಿದೆ. ಶೀಘ್ರದಲ್ಲೇ ನಾನು ನನ್ನ ಕೇರಳದ ಕುಟುಂಬವನ್ನು ಭೇಟಿ ಮಾಡಲಿದ್ದೇನೆ," ಎಂದು ರಾಹುಲ್ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಜನರ ವಿಶ್ವಾಸಕ್ಕೆ ಬೆಲೆ ನೀಡುತ್ತೇವೆ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಕೇರಳದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ನಮ್ಮ ಮೇಲೆ ನೀವು ಇಟ್ಟಿರುವ ನಂಬಿಕೆಯೇ ಮುಂದಿನ ಐದು ವರ್ಷಗಳ ಕಾಲ ಯುಡಿಎಫ್‌ಗೆ ದಾರಿದೀಪವಾಗಲಿದೆ. ಉತ್ತಮ ಭವಿಷ್ಯವನ್ನು ನಿರ್ಮಿಸಲು ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ನಿಮ್ಮ ಬೆಂಬಲಕ್ಕೆ ನಮ್ಮ ಧನ್ಯವಾದಗಳು ಕೇವಲ ಮಾತಿನಲ್ಲಲ್ಲ, ನಮ್ಮ ಕೆಲಸದ ಮೂಲಕ ಸಾಬೀತಾಗಲಿದೆ," ಎಂದು ಅವರು ಭರವಸೆ ನೀಡಿದ್ದಾರೆ.

ಬದಲಾವಣೆಯ ಗಾಳಿ

ಕೇರಳದಲ್ಲಿ ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವ ಸಂಪ್ರದಾಯವಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಆ ಇತಿಹಾಸವನ್ನು ಬದಲಿಸಿ ಎರಡನೇ ಬಾರಿಗೆ ಅಧಿಕಾರ ಹಿಡಿದಿತ್ತು. ಈ ಬಾರಿ ಮತ್ತೆ ಯುಡಿಎಫ್ ಜಯಗಳಿಸುವ ಮೂಲಕ ಕೇರಳದ ಮತದಾರರು 'ಬದಲಾವಣೆ'ಯ ಹಾದಿ ಹಿಡಿದಿರುವುದು ಸ್ಪಷ್ಟವಾಗಿದೆ. ಬೆಲೆ ಏರಿಕೆ, ಆಡಳಿತ ವಿರೋಧಿ ಅಲೆ ಮತ್ತು ಪ್ರವಾಹ ನಿರ್ವಹಣೆಯಂತಹ ವಿಷಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನಲಾಗಿದೆ.
ಮುಂದಿನ ಕೆಲವೇ ದಿನಗಳಲ್ಲಿ ಯುಡಿಎಫ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಕೇರಳದ ಮುಂದಿನ ಸಾರಥಿ ಯಾರು ಎಂಬುದು ಅಧಿಕೃತವಾಗಿ ಘೋಷಣೆಯಾಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net