ಟಿ20 ವಿಶ್ವಕಪ್ 2026: ದಕ್ಷಿಣ ಆಫ್ರಿಕಾ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಕಿವೀಸ್ | T20 World Cup

T20 World Cup 2026
T20 World Cup 2026
Published on
ಕೋಲ್ಕತ್ತಾ: ಐಸಿಸಿ ಟಿ20 ವಿಶ್ವಕಪ್ 2026ರ(T20 World Cup) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಫೈನಲ್ ತಲುಪಿದ ಮೊದಲ ತಂಡವಾಗಿ ಹೊರಹೊಮ್ಮಿದೆ.
ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕಿವೀಸ್ ಪಡೆ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣ ಪ್ರಾಬಲ್ಯ ಮೆರೆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಕಿವೀಸ್ ಸ್ಪಿನ್ನರ್ ಮೈಕಲ್ ಮೆಕೊಂಚಿ ಅವರ ಆರಂಭಿಕ ಆಘಾತಕ್ಕೆ ಸಿಲುಕಿತು. ಮೆಕೊಂಚಿ ತಮ್ಮ ಮೊದಲ ಓವರ್‌ನಲ್ಲೇ ಕ್ವಿಂಟನ್ ಡಿ ಕಾಕ್ ಮತ್ತು ರಿಯಾನ್ ರಿಕೆಲ್ಟನ್ ಅವರ ವಿಕೆಟ್ ಪಡೆದು ಆಘಾತ ನೀಡಿದರು. ಆದರೆ, ಮಾರ್ಕೊ ಜಾನ್ಸೆನ್ (ಔಟಾಗದೆ 55) ಮತ್ತು ಟ್ರಿಸ್ಟಾನ್ ಸ್ಟಬ್ಸ್ (29) ಅವರ ಜವಾಬ್ದಾರಿಯುತ ಆಟದಿಂದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
ಅಲೆನ್-ಸೀಫರ್ಟ್ ದಾಖಲೆಯ ಬ್ಯಾಟಿಂಗ್
170 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಪವರ್‌ಪ್ಲೇನಲ್ಲಿ ಭರ್ಜರಿ 84 ರನ್ ಚಚ್ಚುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಫಿನ್ ಅಲೆನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಸೀಫರ್ಟ್ ಕೂಡ 28 ಎಸೆತಗಳಲ್ಲಿ 50 ರನ್ ಗಡಿ ದಾಟಿದರು.
ದಕ್ಷಿಣ ಆಫ್ರಿಕಾ 169/8 (20 ಓವರ್)
ನ್ಯೂಜಿಲೆಂಡ್ 173/1 (15.2 ಓವರ್)
ಪಂದ್ಯ ಪುರುಷೋತ್ತಮ ಫಿನ್ ಅಲೆನ್ (100* ರನ್)
ನ್ಯೂಜಿಲೆಂಡ್ 9 ವಿಕೆಟ್‌ಗಳ ಜಯದೊಂದಿಗೆ ಫೈನಲ್‌ಗೆ ಪ್ರವೇಶ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net