ಜಂತರ್ ಮಂತರ್‌ನಲ್ಲಿ ಧಗಧಗಿಸಿದ ಖಡ್ಗಗಳು, ಧಾರ್ಮಿಕ ಜಯಘೋಷ! ಕಳೆದುಹೋಯ್ತಾ ಮೂಲ ಉದ್ದೇಶ...?; ಹೈಜಾಕ್ ಆತಂಕದಲ್ಲಿ ಸಿಜೆಪಿ ಪ್ರತಿಭಟನೆ! | CJP Protest

CJP Protest | ಕಳೆದುಹೋಯ್ತಾ ಮೂಲ ಉದ್ದೇಶ...?; ಹೈಜಾಕ್ ಆತಂಕದಲ್ಲಿ ಸಿಜೆಪಿ ಪ್ರತಿಭಟನೆ!
CJP Protest | ಕಳೆದುಹೋಯ್ತಾ ಮೂಲ ಉದ್ದೇಶ...?; ಹೈಜಾಕ್ ಆತಂಕದಲ್ಲಿ ಸಿಜೆಪಿ ಪ್ರತಿಭಟನೆ!
Published on
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್​ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಆರಂಭವಾಗಿದ್ದ ವಿದ್ಯಾರ್ಥಿ ಹೋರಾಟವು ಸಂಪೂರ್ಣವಾಗಿ ಬೇರೆಯದೇ ರೂಪ ಪಡೆದುಕೊಳ್ಳುತ್ತಿದೆ. ಜೂನ್ 6 ರಂದು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ನೇತೃತ್ವದಲ್ಲಿ ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭಗೊಂಡಿದ್ದ ಈ ಧರಣಿಯು, ಇಂದು ನಿಯಂತ್ರಣ ತಪ್ಪಿ ಬೇರೆಯವರ ಕೈವಶವಾಗುವ ಆತಂಕಕ್ಕೆ ಕಾರಣವಾಗಿದೆ.
ಬುಧವಾರ ರಾತ್ರಿ 10.30ರ ಸುಮಾರಿಗೆ ಜಂತರ್ ಮಂತರ್‌ನಲ್ಲಿ ಧ್ವನಿವರ್ಧಕವೊಂದರಲ್ಲಿ ಮುಸ್ಲಿಮರು ಜೈ ಶ್ರೀರಾಮ್ ಎನ್ನುವುದಿಲ್ಲ, ಭಾರತ ಮಾತಾ ಕೀ ಜೈ ಎನ್ನುವುದಿಲ್ಲ ಎಂಬ ಕೋಮು ಪ್ರಚೋದಕ ಧ್ವನಿ ಕೇಳಿಬಂತು. ತಕ್ಷಣವೇ ನೆರೆದಿದ್ದ ಜನರ ಗುಂಪು ನಾರಾ-ಎ-ತಕ್ಬೀರ್, ಅಲ್ಲಾಹು ಅಕ್ಬರ್, ಜೈ ಶ್ರೀರಾಮ್ ಹಾಗೂ ಭಾರತ ಮಾತಾ ಕೀ ಜೈ ಎಂದು ಪ್ರತಿಯಾಗಿ ಘೋಷಣೆಗಳನ್ನು ಕೂಗತೊಡಗಿತು. ನೂರಾರು ಜನರು ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿಯುತ್ತಿದ್ದರು.
ಇತ್ತ ಜಂತರ್ ಮಂತರ್‌ನಿಂದ ಕೆಲವೇ ಮೀಟರ್ ದೂರದ ಟಾಲ್‌ಸ್ಟಾಯ್ ಮಾರ್ಗದಲ್ಲಿ, ಶಸ್ತ್ರಸಜ್ಜಿತ ನಿಹಾಂಗ್ ಸಿಖ್ ಯೋಧರು ತಲವಾರ, ಕಿರಪಾಣ್ ಮತ್ತು ಈಟಿಗಳನ್ನು ಹಿಡಿದು ದೆಹಲಿ ಪೊಲೀಸ್ ಹಾಗೂ ಆರ್‌ಎಎಫ್ ಪಡೆಗಳ ಮುಂದೆ ಪ್ರದರ್ಶನ ನೀಡುತ್ತಿದ್ದರು. ಹೋರಾಟಕ್ಕೂ, ನೀಟ್​ ಪರೀಕ್ಷೆಯ ಅಕ್ರಮಕ್ಕೂ ಯಾವುದೇ ಸಂಬಂಧವಿಲ್ಲದ ಇಂತಹ ದೃಶ್ಯಗಳನ್ನು ನೋಡಿದ ಹೊರಗಿನವರಿಗೆ, ಇದು ಶಿಕ್ಷಣ ವ್ಯವಸ್ಥೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಎಂದು ಊಹಿಸುವುದೂ ಕಷ್ಟಸಾಧ್ಯವಾಗಿತ್ತು.
ಪ್ರತಿಭಟನೆಯ ಆರಂಭಿಕ ದಿನಗಳಲ್ಲಿ ಹರಿದು ಹಂಚಿಹೋಗಿದ್ದ ಜನರನ್ನು ಒಂದೇ ವೇದಿಕೆಯಡಿ ತಂದಿದ್ದು ಸಾಮಾಜಿಕ ಕಾರ್ಯಕರ್ತ ಸೊನಾಮ್ ವಾಂಗ್ಚುಕ್. ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ, ಹೋರಾಟಕ್ಕೆ ಸ್ಪಷ್ಟ ರೂಪುರೇಷೆ ಸಿಕ್ಕಿತ್ತು. ದೇಶಾದ್ಯಂತದ ವಿದ್ಯಾರ್ಥಿಗಳು ದೆಹಲಿಯತ್ತ ಧಾವಿಸಿದ್ದರು. ವಾಂಗ್ಚುಕ್ ವೇದಿಕೆಯಲ್ಲಿದ್ದಾಗ ಚರ್ಚೆಗಳು ಕೇವಲ ಪರೀಕ್ಷಾ ಸುಧಾರಣೆ ಹಾಗೂ ಸರ್ಕಾರದ ಹೊಣೆಗಾರಿಕೆಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಜುಲೈ 18 ರಂದು ಪೊಲೀಸರು ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ನಂತರ, ಪ್ರತಿಭಟನೆಯ ಮೂಲ ಕೊಂಡಿಯೇ ಕಳಚಿದಂತಾಗಿದೆ.
ಜುಲೈ 20 ರ ಸಂಸತ್ ಚಲೋ ಮೆರವಣಿಗೆಯ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗದ ನಂತರ ಧರಣಿ ಸ್ಥಳಕ್ಕೆ ಸಾವಿರಾರು ಹೊಸಬರು ಹರಿದುಬಂದರು. ಆದರೆ, ಬಂದವರಲ್ಲಿ ಹೆಚ್ಚಿನವರಿಗೆ ನೀಟ್​ಗಿಂತಲೂ ಪೊಲೀಸರ ದೌರ್ಜನ್ಯದ ವಿರುದ್ಧದ ಆಕ್ರೋಶವೇ ಪ್ರಮುಖವಾಗಿತ್ತು. ಉರಿ ಸರ್ಜಿಕಲ್ ಸ್ಟ್ರೈಕ್ ರೂಪಿಸಿದ ನಿವೃತ್ತ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕಳವಳ ವ್ಯಕ್ತಪಡಿಸುತ್ತಾ, ಸಂವಹನದ ಕೊರತೆಯಿಂದಾಗಿ ಶಾಂತಿಯುತ ಯುವ ಪ್ರತಿಭಟನೆಯನ್ನು ಹೊರಗಿನ ಶಕ್ತಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ ಎಂದು ಎಚ್ಚರಿಸಿದ್ದರು.

ಗಲಭೆ, ಶೋಷಣೆ ಮತ್ತು ಆತಂಕಕಾರಿ ಸ್ಥಿತಿ

ಜಂತರ್ ಮಂತರ್ ಒಂದು ಸ್ಫೋಟಕ ಸನ್ನಿವೇಶದಂತಿದೆ. ಬುಧವಾರ ರಾತ್ರಿ ಯೂಟ್ಯೂಬರ್ ಒಬ್ಬರ ಮೇಲೆ ಭೀಕರ ಹಲ್ಲೆ ನಡೆದು ಲಿಂಚಿಂಗ್ ಹಂತಕ್ಕೆ ತಲುಪಿತ್ತು. ಗುರುವಾರ ಪ್ರತಿಭಟನಾಕಾರರು ನಿಹಾಂಗ್ ಗುಂಪಿನೊಂದಿಗೆ ಘರ್ಷಣೆಗೆ ಇಳಿದಿದ್ದರು. ಪೊಲೀಸರ ಮೇಲೆ ಸತತ ಪ್ರಚೋದನೆ ನಡೆಯುತ್ತಿದ್ದರೂ, ಜುಲೈ 20ರ ಘಟನೆಯ ನಂತರ ಪೊಲೀಸರು ಅಪಾರ ತಾಳ್ಮೆ ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆ, ಧರಣಿ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯೂ ಪ್ರಶ್ನಾರ್ಹವಾಗಿದೆ. ಬುಧವಾರ ರಾತ್ರಿ ವಿಶ್ರಮಿಸುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಅಟ್ಟಾಡಿಸಿದರಾದರೂ, ಪ್ರತಿಭಟನೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಆತನನ್ನು ಪೊಲೀಸರಿಗೆ ಒಪ್ಪಿಸಲಿಲ್ಲ. ಇದು ನಾಯಕತ್ವದ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಸಿಜೆಪಿ ಹಿಡಿತ ತಪ್ಪಿದ ಹೋರಾಟ

ಪ್ರತಿಭಟನಾ ಸ್ಥಳದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ, ಸಿಜೆಪಿ ಸಂಘಟಕರಿಗೆ (ಅಭೀಜಿತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಾಂಕಾ) ಪ್ರತಿಭಟನಾಕಾರರೊಂದಿಗೆ ಆನ್‌ಲೈನ್ ಮೂಲಕ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಮುಖ್ಯ ವೇದಿಕೆಯಿಂದ ದೂರ ಹೋದಂತೆಲ್ಲಾ ಸಣ್ಣ ಸಣ್ಣ ಗುಂಪುಗಳು ತಮ್ಮದೇ ಆದ ಪ್ರತ್ಯೇಕ ಅಜೆಂಡಾ, ಕೋಮು ವಿಚಾರಗಳು ಹಾಗೂ ಪ್ರಾದೇಶಿಕ ರಾಜಕೀಯ ವಿಷಯಗಳ ಕುರಿತು ಚರ್ಚಿಸುತ್ತಿವೆ. ಡಾರ್ಜಿಲಿಂಗ್‌ನಿಂದ ಬಂದಿದ್ದ ಯುವಕರೊಬ್ಬರು ನಮಗೆ ನೀಟ್​ಗಿಂತಲೂ ಇಂತಹ ಬೃಹತ್ ಚಳವಳಿಯ ಅನುಭವ ಪಡೆಯುವುದು ಕುತೂಹಲ ಮೂಡಿಸಿದೆ ಎಂದು ಹೇಳಿರುವುದು ಪ್ರತಿಭಟನೆಯ ಉದ್ದೇಶ ಹೇಗೆ ಬದಲಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ.
ಆಕ್ರೋಶ ದೊಡ್ಡದಾಗಿದೆ, ಜನಸ್ತೋಮ ಹೆಚ್ಚಾಗಿದೆ. ಆದರೆ, ಪ್ರತಿಭಟನೆಯ ಮೂಲ ಉದ್ದೇಶ ಹಾಗೂ ಸಿದ್ಧಾಂತ ಮಾತ್ರ ಕಳೆದುಹೋಗುತ್ತಿದೆ. ಎಲ್ಲಾ ರೀತಿಯ ಅಸಮಾಧಾನಗಳಿಗೆ ಜಂತರ್ ಮಂತರ್ ವೇದಿಕೆಯಾಗುತ್ತಿರುವುದರಿಂದ, ಸಂಸ್ಥಾಪಕರ ಮೂಲ ಬೇಡಿಕೆಗಳು ಈ ಗೊಂದಲದ ನಡುವೆ ಮುಳುಗಿಹೋಗುವ ಹಾಗೂ ಇಡೀ ಚಳವಳಿ ಕಿಡಿಗೇಡಿಗಳ ಪಾಲಾಗಿರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

47 ಅಧಿಕಾರಿಗಳನ್ನು ವಜಾ ಮಾಡಿದ ಎನ್​ಟಿಎ

ನೀಟ್​​ ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ತನ್ನ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಇಷ್ಟೇ ಅಲ್ಲದೆ, ಇನ್ನು ಹಲವು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಏಜೆನ್ಸಿಯ ಸಂಪೂರ್ಣ ಪುನಾರಚನೆ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಭಾಗವಾಗಿ, ಎನ್‌ಟಿಎ ಕೆಲವು ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಕ್ರಿಮಿನಲ್ ಕ್ರಮಗಳನ್ನು ಸಹ ಜರುಗಿಸಲಿದೆ. ಮುಂದಿನ ದಿನಗಳಲ್ಲಿ ಇನ್ನು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಪರೀಕ್ಷೆಗಳನ್ನು ಹೊರಗುತ್ತಿಗೆ ನೀಡುವ ಮಾದರಿಯನ್ನು ಸಹ ಸಂಪೂರ್ಣವಾಗಿ ಪರಿಷ್ಕರಿಸಲಾಗುವುದು ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net