ಡಿ. 31ರಂದು ಸ್ವಿಗ್ಗಿ, ಜೊಮ್ಯಾಟೋ, ಜೆಪ್ಟೋ, ಬ್ಲಿಂಕಿಟ್ ಸೇವೆ ಬಂದ್?; ದೇಶಾದ್ಯಂತ ಗಿಗ್​ ಕಾರ್ಮಿಕರಿಂದ ಮುಷ್ಕರಕ್ಕೆ ಕರೆ | Gig workers

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಅಮೆಜಾನ್, ಜೊಮಾಟೊ, ಸ್ವಿಗ್ಗಿ, ಜೆಪ್ಟೊ, ಬ್ಲಿಂಕಿಟ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ರಮುಖ ಆಹಾರ ವಿತರಣಾ ಮತ್ತು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ವಿತರಣಾ ಕಾರ್ಮಿಕರು(Gig workers) ಇದೇ ಡಿ. 31ರಂದು ದೇಶಾದ್ಯಂತ ಮುಷ್ಕರವನ್ನು ಘೋಷಿಸಿದ್ದು, ಅಂದು ಆನ್​ಲೈನ್ ಆರ್ಡರ್​​ಗಳ ವಿತರಣಾ ಸೇವೆಯಲ್ಲಿ ವ್ಯತ್ಯಯವಾಗಬಹುದು ಎಂದು ವರದಿಯಾಗಿದೆ.
ಗುರುವಾರ ಕ್ರಿಸ್​ಮಸ್ ಹಬ್ಬದ ದಿನದಂದು ಗಿಗ್ ಕಾರ್ಮಿಕರು ಔಪಚಾರಿಕವಾಗಿ ಮುಷ್ಕರ ನಡೆಸಿದ್ದು, ದೆಹಲಿ, ಗುರುಗ್ರಾಮ್, ಮುಂಬೈ, ತಿರುವನಂತಪುರಂ, ಪಣಜಿ ಮತ್ತು ಇತರ ನಗರಗಳಲ್ಲಿ ತಮ್ಮ ಆರ್ಡರ್​ಗಳನ್ನು ಪಡೆಯಲು ಗ್ರಾಹಕರು ಪರದಾಡಿದರು ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಗತ್ಯ ಹಬ್ಬದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ ಕೆಲವರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಸ್ವಿಗ್ಗಿ-ಇನ್‌ಸ್ಟಾಮಾರ್ಟ್, ಜೆಪ್ಟೊ, ಬ್ಲಿಂಕಿಟ್‌ನಲ್ಲಿನ ತಮ್ಮ ಆದೇಶಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಮತ್ತು ಇಂಡಿಯನ್ ಫೆಡರೇಶನ್ ಆಫ್ ಆಪ್-ಆಧಾರಿತ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಡಿ. 31ರಂದು ಮುಷ್ಕರವನ್ನು ಘೋಷಿಸಿವೆ. ದೇಶದ ಮೆಟ್ರೋ ನಗರಗಳು ಮತ್ತು ಪ್ರಮುಖ ಎರಡನೇ ಶ್ರೇಣಿಯ ನಗರಗಳ ಗಿಗ್ ಕಾರ್ಮಿಕರು ಇದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಗಿಗ್ ಕಾರ್ಮಿಕರ ಮುಷ್ಕರಕ್ಕೆ ಕಾರಣವೇನು?

ತ್ವರಿತ ವಿತರಣೆಗೆ ಹೆಚ್ಚುತ್ತಿರುವ ಬೇಡಿಕೆಯ ಹೊರತಾಗಿಯೂ ಕಾರ್ಮಿಕರಿಗೆ ನ್ಯಾಯಯುತವಾದ ಪ್ರತಿ ಆರ್ಡರ್​​ನ ವೇತನ ಅಥವಾ ಸ್ಥಿರವಾದ ಕೆಲಸದ ಪರಿಸ್ಥಿತಿಗಳು ಸಿಗುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಪ್ರತಿ ವಿತರಣೆಯ ನಡುವಿನ ವಿಶ್ರಾಂತಿ ಸಮಯ, ಪ್ರೋತ್ಸಾಹಕಗಳು, ಗ್ರಾಹಕರು ನೀಡುವ ಸಲಹೆಗಳನ್ನು ನೇರವಾಗಿ ಗಿಗ್ ಕಾರ್ಮಿಕರ ಖಾತೆಗೆ ಜಮಾ ಮಾಡುವಂತೆ ಯೂನಿಯನ್​ಗಳ ಒತ್ತಾಯ.
ಜೊತೆಗೆ ಗಡುವು ನಿಗದಿಪಡಿಸಿದ ರಸ್ತೆಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ ಅಪಘಾತ ವಿಮೆ ಮತ್ತು ಆರೋಗ್ಯ ಭದ್ರತೆಯನ್ನು ಒದಗಿಸಬೇಕು. ತಡವಾಗಿ ವಿತರಣೆಗೆ ಸಮಂಜಸವಾದ ಕಾರಣವನ್ನು ತೋರಿಸಿದರೂ ಸಹ, ದಂಡ ವಿಧಿಸುವುದನ್ನು ನಿಲ್ಲಿಸಬೇಕು. ಪ್ರಮುಖವಾಗಿ 10 ನಿಮಿಷಗಳ ವಿತರಣಾ ನಿಯಮವನ್ನು ತೆಗೆದುಹಾಕುವಂತೆ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.
ಹಬ್ಬಗಳು ಮತ್ತು ಆಚರಣೆಗಳ ಸಮಯದಲ್ಲಿ ಮುಷ್ಕರ ನಡೆಸಿದರೆ ಮಾತ್ರ ಸರ್ಕಾರವು ನಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸುತ್ತದೆ. ಈ ಹಿನ್ನೆಲೆ ಹೊಸ ವರ್ಷದ ಸಮಯದಲ್ಲಿ ಡಿ. 31ರಂದು ಮುಷ್ಕರ ನಡೆಸುತ್ತೇವೆ ಎಂದು IFATW ಪ್ರತಿನಿಧಿಗಳು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net