ಮುಹೂರ್ತಕ್ಕೆ ಕುತ್ತು ತಂದ ಪೂಜಾ ಸಾಮಗ್ರಿ ಕೊರತೆ: ಮದುವೆ ಮನೆಯ ಪಾಲಿಗೆ ದೇವದೂತನಾದ ಡೆಲಿವರಿ ಬಾಯ್! Swiggy Instamart

Swiggy Instamart ಸಾಂದರ್ಭಿಕ ಚಿತ್ರ
Swiggy Instamart ಸಾಂದರ್ಭಿಕ ಚಿತ್ರ
Published on
Swiggy Instamart: ಭಾರತೀಯ ವಿವಾಹಗಳೆಂದರೆ ಅಲ್ಲಿ ಸಂಭ್ರಮ, ಸಡಗರದ ಜೊತೆಗೆ ಸಣ್ಣಪುಟ್ಟ ಗೊಂದಲಗಳು ಸಹಜ. ಆದರೆ, ಇತ್ತೀಚೆಗೆ ನಡೆದ ವಿವಾಹವೊಂದರಲ್ಲಿ ಎದುರಾದ ದೊಡ್ಡ ಸಂಕಷ್ಟವನ್ನು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ರೈಡರ್ ಒಬ್ಬರು ಪರಿಹರಿಸಿದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ನಡೆದಿದ್ದೇನು?

ಸಾಮಾನ್ಯವಾಗಿ ಮದುವೆಯ ಶಾಸ್ತ್ರಗಳು ನಡೆಯುವಾಗ ಪೂಜಾ ಸಾಮಗ್ರಿಗಳು ಅಥವಾ ಅತಿಥಿಗಳಿಗೆ ಬೇಕಾದ ಪ್ರಮುಖ ವಸ್ತುಗಳು ಕೊನೆಯ ಕ್ಷಣದಲ್ಲಿ ಮರೆತು ಹೋಗುವುದು ಸಾಮಾನ್ಯ. ಅದೇ ರೀತಿ ಈ ಮದುವೆಯಲ್ಲಿ ಮುಹೂರ್ತದ ಸಮಯ ಹತ್ತಿರ ಬರುತ್ತಿದ್ದಂತೆಯೇ ಹೋಮಕ್ಕೆ ಬೇಕಿದ್ದ ಉರುವಲು ತರುವುದನ್ನು ಮರೆತಿದ್ದರು. ಇದರಿಂದ ಶಾಸ್ತ್ರಗಳು ಅರ್ಧಕ್ಕೆ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು. ಮನೆಯವರು ಗಾಬರಿಯಾಗಿದ್ದ ಆ ಸಮಯದಲ್ಲಿ, ಯಾರೋ ಒಬ್ಬರು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಆ ವಸ್ತುವನ್ನು ಆರ್ಡರ್ ಮಾಡಿದ್ದಾರೆ.
ಇದಾದ ಕೇವಲ 10 ನಿಮಿಷಗಳಲ್ಲಿ ಸ್ವಿಗ್ಗಿ ಡೆಲಿವರಿ ರೈಡರ್ ಮದುವೆ ಮಂಟಪದ ಒಳಗೇ ಬಂದು, ಪೂಜೆಗೆ ಬೇಕಾದ ವಸ್ತುವನ್ನು ತಲುಪಿಸಿದ್ದಾರೆ. ಯಾವುದೇ ವಿಧಿವಿಧಾನಗಳು ಅಡೆತಡೆಯಿಲ್ಲದೆ ಮುಂದುವರಿಯಲು ಕುಟುಂಬ ಸದಸ್ಯರು ಶಾಸ್ತ್ರಕ್ಕೆ ಬೇಕಾದ ಪಾರ್ಸೆಲ್​​ನ್ನು ತಲುಪಿಸಿದ್ದಾರೆ.

"10 ನಿಮಿಷದ ಡೆಲಿವರಿ" ಮೇಲೆ ನಿಂತಿದ್ದ ಮದುವೆ: ನೆಟ್ಟಿಗರ ಹಾಸ್ಯ ಚಟಾಕಿ!

ವೈರಲ್​ ಆದ ವೀಡಿಯೊದ ಶೀರ್ಷಿಕೆಯಲ್ಲಿ "ಇಡೀ ಮದುವೆಯೇ 10 ನಿಮಿಷಗಳ ಡೆಲಿವರಿ ಮೇಲೆ ಅವಲಂಬಿತವಾಗಿದೆ" ಎಂದು ತಮಾಷೆ ಮಾಡಲಾಗಿದ್ದು ಇದನ್ನು ನೋಡಿದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಆ ಡೆಲಿವರಿ ರೈಡರ್‌ನನ್ನು "ರಿಯಲ್ ವೆಡ್ಡಿಂಗ್ ಪ್ಲಾನರ್" ಎಂದು ಬಣ್ಣಿಸಿದ್ದಾರೆ.

ಇಂಟರ್ನೆಟ್ ಗೆದ್ದ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಉತ್ತರ

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಮಾತ್ರವಲ್ಲದೇ ಸ್ವತಃ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೂಡಾ ಪ್ರತಿಕ್ರಿಯಿಸಿದ್ದು, ಇನ್ನೇನಾದರೂ ಬೇಕೆ? ಈಗಲೇ ತಂದುಕೊಡುವೆ! ಎಂದು ಕಾಮೆಂಟ್​ ಮಾಡಿದೆ. ಕಂಪನಿಯ ಈ ಚುರುಕಾದ ಪ್ರತಿಕ್ರಿಯೆಯು ಗ್ರಾಹಕರೊಂದಿಗೆ ಅವರು ಹೊಂದಿರುವ ನಿಕಟ ಸಂಬಂಧ ಮತ್ತು ಸಮಯಪ್ರಜ್ಞೆಯನ್ನು ಎತ್ತಿ ತೋರಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net