ನ.19 ರಂದು ಪ್ರಮಾಣವಚನ ಸಾಧ್ಯತೆ: 10ನೇ ಬಾರಿಗೆ ಸಿಎಂ ಗದ್ದುಗೆಗೇರಲು ನಿತೀಶ್ ಸಿದ್ಧ!
Nitish Kumar
Published on:
Copied
Follow Us
ಬಿಹಾರ: ಇಂದಿನಿಂದ ಬಿಹಾರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ವೇಗವಾಗಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಅಂತಿಮ ವೇಳಾಪಟ್ಟಿಯನ್ನು ಅವಲಂಬಿಸಿ ನವೆಂಬರ್ 19 ಅಥವಾ 20 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ನಿರೀಕ್ಷೆಯಿದೆ ಎಂದು ಭಾನುವಾರ ವರದಿಯಾಗಿದೆ.
ಪಾಟ್ನಾದ ಗಾಂಧಿ ಮೈದಾನದಲ್ಲಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದ್ದು, ಪ್ರಧಾನಿ ಮೋದಿ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ಸಾಧ್ಯತೆಯಿದೆ.
ನಾಳೆ ನಿತೀಶ್ ಕುಮಾರ್ ರಾಜೀನಾಮೆ
ಚುನಾವಣಾ ಆಯೋಗವು ಇಂದು 18ನೇ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಸಲ್ಲಿಸಲಿದೆ. ಬಳಿಕ ಹೊಸ ವಿಧಾನಸಭೆ ರಚನೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ. 17ನೇ ವಿಧಾನಸಭೆ ವಿಸರ್ಜನೆಗೆ ಅನುಮೋದನೆ ನೀಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಸಂಪುಟ ಸಭೆ ಕರೆದಿದ್ದಾರೆ. ನಂತರ ಅವರು ರಾಜಭವನಕ್ಕೆ ಭೇಟಿ ನೀಡಿ ರಾಜೀನಾಮೆ ಸಲ್ಲಿಸುವ ನಿರೀಕ್ಷೆಯಿದೆ.
ರಾಜೀನಾಮೆ ನೀಡಿದ ನಂತರ, ಎನ್‌ಡಿಎಯ ಘಟಕ ಪಕ್ಷಗಳು ಮೈತ್ರಿಕೂಟದ ಮುಂದಿನ ನಾಯಕನನ್ನು ಆಯ್ಕೆ ಮಾಡಲು ತಮ್ಮ ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸುತ್ತವೆ, ನಂತರ ಅವರು ಹೊಸ ಸರ್ಕಾರ ರಚಿಸಲು ರಾಜ್ಯಪಾಲರ ಮುಂದೆ ಹಕ್ಕು ಮಂಡಿಸುತ್ತಾರೆ.
ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿ
18ನೇ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ. ಬಿಜೆಪಿ 89 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ನಿತೀಶ್ ಕುಮಾರ್ ಅವರ ಜನತಾದಳ (ಯುನೈಟೆಡ್) 85 ಸ್ಥಾನಗಳನ್ನು ಗೆದ್ದಿದೆ. ಎಲ್‌ಜೆಪಿ 19 ಸ್ಥಾನಗಳನ್ನು ಗಳಿಸಿದೆ. ಎಚ್‌ಎಎಂ (ಜಾತ್ಯತೀತ) 5 ಮತ್ತು ರಾಷ್ಟ್ರೀಯ ಲೋಕ ಮೋರ್ಚಾ 4 ಸ್ಥಾನಗಳನ್ನು ಗಳಿಸಿದೆ. ಮತ್ತೊಂದೆಡೆ, ಮಹಾಘಟಬಂಧನ್ ಕೇವಲ 35 ಸ್ಥಾನಗಳು ಪಡೆಯುವ ಮೂಲಕ ಹೀನಾಯವಾಗಿ ಸೋಲು ಕಂಡಿದೆ (ಏಜೆನ್ಸೀಸ್).