ಗೀತೆಯ ಮೇಲೆ ಪ್ರಮಾಣ ಮಾಡಿ ಹೇಳಿ.. ಸಿಎಂ ಹಿಮಂತ ಬಿಸ್ವಾ ಶರ್ಮಾಗೆ ಗೌರವ್​ ಗೊಗೊಯ್ ನೇರ ಸವಾಲ್​! | Assam Election

Assam Election | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್
Assam Election | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್
Published on
Assam Election: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ನಡುವಿನ ರಾಜಕೀಯ ವಾಗ್ಯುದ್ಧವು ಈಗ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಹಂತಕ್ಕೆ ತಲುಪಿದೆ.
ಸಿಎಂ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿದೇಶಗಳಲ್ಲಿ ಅಕ್ರಮ ಆಸ್ತಿ ಮತ್ತು ಬಹು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂಬ ಕಾಂಗ್ರೆಸ್‌ನ ಗಂಭೀರ ಆರೋಪಗಳನ್ನು ಮುಖ್ಯಮಂತ್ರಿಗಳು ನಿರಾಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ, ಮುಖ್ಯಮಂತ್ರಿಗಳ ಪತ್ನಿ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ಕುಟುಂಬವು ಅಮೆರಿಕದಲ್ಲಿ ಸುಮಾರು 52,000 ಕೋಟಿ ರೂಪಾಯಿಗಳ ಬೃಹತ್ ವ್ಯವಹಾರ ಹಿತಾಸಕ್ತಿಗಳನ್ನು ಹೊಂದಿದೆ ಎಂದು ಆರೋಪಿಸಿದ್ದರು. ಈ ಆರೋಪಗಳನ್ನು ಶರ್ಮಾ ದಂಪತಿ ತಳ್ಳಿಹಾಕಿದ ಬಳಿಕ ಸಾರ್ವಜನಿಕವಾಗಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ನಿಜ ಹೇಳುವಂತೆ ಗೌರವ್ ಗೊಗೊಯ್ ಮುಖ್ಯಮಂತ್ರಿಗಳಿಗೆ ನೇರ ಸವಾಲು ಹಾಕಿದ್ದಾರೆ.
ರಾಹಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯ ಬಳಿಕ ಮಾತನಾಡಿದ ಗೊಗೊಯ್, ತಮಗೆ ಲಂಡನ್‌ನಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಹೇಳಲು ಸಿದ್ಧವಿರುವುದಾಗಿ ತಿಳಿಸಿದರು. ಇದೇ ಧೈರ್ಯ ಹಿಮಂತ ಬಿಸ್ವಾ ಶರ್ಮಾ ಅವರಿಗಿದೆಯೇ ಎಂದು ಪ್ರಶ್ನಿಸಿರುವ ಅವರು, ಸಾಮಾನ್ಯ ಸ್ಥಳವೊಂದಕ್ಕೆ ಬಂದು ಸಾರ್ವಜನಿಕವಾಗಿ ಪ್ರಮಾಣ ಮಾಡುವಂತೆ ಆಗ್ರಹಿಸಿದ್ದಾರೆ.
ಒಂದು ವೇಳೆ ಶರ್ಮಾ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಈ ವಿದೇಶಿ ಆಸ್ತಿಗಳನ್ನು ಘೋಷಿಸದಿದ್ದರೆ, ಈಗ ಅವುಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಅವರ ಉಮೇದುವಾರಿಕೆ ರದ್ದಾಗಲು ಕಾರಣವಾಗಬಹುದು ಎಂಬ ಅಂಶವನ್ನು ಗೊಗೊಯ್ ಎತ್ತಿ ತೋರಿಸಿದ್ದು, ಮುಖ್ಯಮಂತ್ರಿಯವರ ಪತ್ನಿ ದುಬೈಗೆ ಹೋಗಲು ಗೋಲ್ಡನ್ ವೀಸಾ ಹೊಂದಿದ್ದಾರೆಯೇ ಮತ್ತು ಅವರ ಕುಟುಂಬದ ಸದಸ್ಯರು ವಿದೇಶದಲ್ಲಿ ವ್ಯವಹಾರ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್​ನ ಉಪನಾಯಕರಾಗಿರುವ ಗೌರವ್ ಗೊಗೊಯ್, ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶರ್ಮಾರ ಅಕ್ರಮ ವಿದೇಶಿ ಆಸ್ತಿಗಳು ಮತ್ತು ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮರೆಮಾಡಲು ಏನೂ ಇಲ್ಲದಿದ್ದರೆ ಶರ್ಮಾ ತನಿಖೆಯನ್ನು ಸ್ವಾಗತಿಸಬೇಕು ಮತ್ತು ತಮ್ಮ ಮೇಲಿರುವ ಅಕ್ರಮ ಆಸ್ತಿ ಗಳಿಕೆಯ ಜಾಲಗಳ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧರಾಗಬೇಕು ಎಂದು ಸವಾಲ್​ ಹಾಕಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಅಂತಿಮ ಹಂತ ತಲುಪಿದ್ದು, ಏಪ್ರಿಲ್ 9 ರಂದು ಅಸ್ಸಾಂನಲ್ಲಿ ಮತದಾನ ನಡೆಯಲಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಎಲ್ಲಾ ಫಲಿತಾಂಶಗಳು ಹೊರಬೀಳಲಿವೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net