ಪತ್ನಿ ಜೊತೆ ಅಕ್ರಮ ಸಂಬಂಧ ಶಂಕೆ; ಪ್ರಿಯಕರನಿಗೆ ಮದ್ಯ ಕುಡಿಸಿ ಪತ್ನಿ ಮುಂದೆಯೇ ಕತ್ತು ಸೀಳಿ ಕೊಂದ ಪತಿ | illicit affair

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮುಂಬೈ: ಮಹಾರಾಷ್ಟ್ರದ ಮುಂಬೈನ ಆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ(illicit affair) ಹೊಂದಿದ್ದಾನೆ ಎಂದು ಭಾವಿಸಿದ ಪತಿಯೊಬ್ಬ, ಶಂಕಿಸಲಾದ ವ್ಯಕ್ತಿಯನ್ನು ತನ್ನ ಮನೆಗೆ ಆಹ್ವಾನಿಸಿ, ಮದ್ಯ ಕುಡಿಸಿ, ಬಳಿಕ ಪತ್ನಿ ಮುಂದೆಯೇ ಆತನ ಕತ್ತು ಸೀಳಿ ಕೊಂದಿದ್ದಾನೆ ಎಂದು ಶುಕ್ರವಾರ(ಮೇ 15) ವರದಿಯಾಗಿದೆ.
ಘಟನೆ ನಡೆದ ಮೂರು ಗಂಟೆಗಳಲ್ಲಿ ಕೊಲೆ ಮಾಡಿದ ಆರೋಪಿ 48 ವರ್ಷದ ಭೀಮರಾಜ್ ಶರ್ಮಾನನ್ನು ಬಂಧಿಸಲಾಗಿದೆ. ಮೃತನನ್ನು ವಿಕಾಸ್ ಭೂಸಾರೆ ಎಂದು ಗುರುತಿಸಲಾಗಿದೆ. ಇಬ್ಬರೂ ಆರೆ ಕಾಲೋನಿಯ 5ನೇ ಘಟಕದ ನಿವಾಸಿಗಳು ಎನ್ನಲಾಗಿದೆ.
ವಿಕಾಸ್ ಭೂಸಾರೆ ಜೊತೆ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ್ದ ಭೀಮರಾಜ್, ಈ ಹಿಂದೆಯೂ ಈ ವಿಷಯಕ್ಕೆ ಸಂಬಂಧಿಸಿದಂತೆ ಆತ ತನ್ನ ಪತ್ನಿಗೆ ಪದೇ-ಪದೇ ಎಚ್ಚರಿಕೆ ನೀಡಿ, ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಮತ್ತು ವಿಕಾಸ್ ತನ್ನ ಅನುಪಸ್ಥಿತಿಯಲ್ಲಿ ಮನೆಗೆ ಭೇಟಿ ನೀಡುತ್ತಿದ್ದರಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಕೊಲೆಗೂ ಮುನ್ನ ವಿಕಾಸ್‌ನನ್ನು ಭೀಮರಾಜ್ ತನ್ನ ಮನೆಗೆ ಆಹ್ವಾನಿಸಿದ್ದಾನೆ. ಮನೆಯಲ್ಲಿ ಭೀಮರಾಜ್ ಮತ್ತು ಅವನ ಪತ್ನಿ ಹಾಗೂ ಮೃತ ವಿಕಾಸ್ ಮೂವರು ತಡರಾತ್ರಿವರೆಗೂ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಮದ್ಯದ ಅಮಲು ಏರಿದ ಬಳಿಕ ಭೀಮರಾಜ್ ವಿಕಾಸ್‌ನನ್ನು ಪ್ರಶ್ನಿಸಿದ್ದು, ನೀನು ಯಾಕೆ ನನ್ನ ಮನೆಗೆ ಬರ್ತೀಯಾ ಎಂದು ಕೇಳಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಬಳಿಕ ಮದ್ಯದ ಅಮಲಿನಲ್ಲಿದ್ದ ಭೀಮರಾಜ್ ಅಡುಗೆಮನೆಯಿಂದ ಚಾಕುವನ್ನು ಎತ್ತಿಕೊಂಡು ತನ್ನ ಹೆಂಡತಿಯ ಮುಂದೆ ವಿಕಾಸ್‌ನ ಕತ್ತು ಸೀಳಿದ್ದಾನೆ. ನಂತರ ಆತ ಸಾಯುವವರೆಗೂ ಹೊಟ್ಟೆಗೆ ಇರಿದು ಅರಣ್ಯ ಪ್ರದೇಶಕ್ಕೆ ಪರಾರಿಯಾಗಿದ್ದಾನೆ. ಘಟನೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂರು ತಾಸುಗಳ ಕಾರ್ಯಾಚರಣೆ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದು, ತನ್ನ ಪತ್ನಿ ಮತ್ತು ವಿಕಾಸ್ ನಡುವೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದಾಗಿ ಹೇಳಿಕೊಂಡಿದ್ದಾನೆ. ಆರೆ ಪೊಲೀಸರು ಆರೋಪಿಯನ್ನು ಕೋರ್ಟ್​ಗೆ ಹಾಜರುಪಡಿಸಿದ್ದು, ಕೋರ್ಟ್ ಆತನನ್ನು ಕಸ್ಟಡಿಗೆ ಒಪ್ಪಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net