ಬಿಜೆಪಿ ಸೇರಿದ ಸುಸ್ಮಿತಾ ದೇವ್, ಸುಖೇಂದು, ಪ್ರಕಾಶ್ ಬರೈಕ್: ರಾಜ್ಯಸಭಾ ಉಪಚುನಾವಣೆಗೆ ಅಭ್ಯರ್ಥಿಗಳಾಗಿ ಘೋಷಣೆ! | West Bengal Politics

West Bengal Politics | ಬಿಜೆಪಿ ಸೇರಿದ ಸುಸ್ಮಿತಾ ದೇವ್, ಸುಖೇಂದು, ಪ್ರಕಾಶ್ ಬರೈಕ್
West Bengal Politics | ಬಿಜೆಪಿ ಸೇರಿದ ಸುಸ್ಮಿತಾ ದೇವ್, ಸುಖೇಂದು, ಪ್ರಕಾಶ್ ಬರೈಕ್
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ರಾಜ್ಯಸಭೆಯ ಸದಸ್ಯರಾದ ಸುಸ್ಮಿತಾ ದೇವ್, ಸುಖೇಂದು ಶೇಖರ್ ರಾಯ್ ಮತ್ತು ಪ್ರಕಾಶ್ ಚಿಕ್ ಬರೈಕ್, ಗುರುವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳಲ್ಲಿ, ರಾಜ್ಯಸಭಾ ಉಪಚುನಾವಣೆಗೆ ಇವರನ್ನೇ ತನ್ನ ಅಭ್ಯರ್ಥಿಗಳನ್ನಾಗಿ ಬಿಜೆಪಿ ಘೋಷಿಸಿದೆ.
ಸಾಲ್ಟ್ ಲೇಕ್‌ನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಸಮ್ಮುಖದಲ್ಲಿ ಮೂವರೂ ನಾಯಕರು ಕೇಸರಿ ಪಡೆಗೆ ಸೇರ್ಪಡೆಗೊಂಡರು. ಕಳೆದ ತಿಂಗಳಷ್ಟೇ ಇವರು ರಾಜ್ಯಸಭಾ ಸ್ಥಾನಕ್ಕೆ ಹಾಗೂ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪಶ್ಚಿಮ ಬಂಗಾಳದ ಮೂರು ರಾಜ್ಯಸಭಾ ಸ್ಥಾನಗಳಿಗೆ ಜುಲೈ 24 ರಂದು ಉಪಚುನಾವಣೆ ನಡೆಯಲಿದೆ.

ಮಮತಾ ಬ್ಯಾನರ್ಜಿ ಕಥೆ ಮುಗಿಯಿತು ಎಂದ ರಾಯ್

ಬಿಜೆಪಿ ಸೇರಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪಕ್ಷದ ವಿರುದ್ಧ ಸುಖೇಂದು ಶೇಖರ್ ರಾಯ್ ತೀವ್ರ ವಾಗ್ದಾಳಿ ನಡೆಸಿದರು. ಟಿಎಂಸಿಯ ರಾಜಕೀಯ ಭವಿಷ್ಯ ಮುಗಿದಿದೆ ಎಂದ ರಾಯ್​, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ದಾಖಲಾದ ಹೆಚ್ಚಿನ ಮತದಾನದ ಪ್ರಮಾಣವನ್ನು ಪ್ರಶ್ನಿಸಿದರು. ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಸಹಕರಿಸಿ ಅಭಿವೃದ್ಧಿ ಕೆಲಸ ಮಾಡುವ ಬದಲು, ಕೇವಲ ಪ್ರತಿಭಟನೆ, ಬಂದ್ ಮತ್ತು ಸಂಘರ್ಷದ ರಾಜಕಾರಣಕ್ಕೇ ಆದ್ಯತೆ ನೀಡಿದವು ಎಂದು ಆರೋಪಿಸಿದ ರಾಯ್​, ಈ ಸಂಘರ್ಷದ ರಾಜಕಾರಣದಿಂದಾಗಿ ಬಂಗಾಳದ ಯುವಕರು ಉದ್ಯೋಗಾವಕಾಶ ಅರಸಿ ರಾಜ್ಯವನ್ನು ತೊರೆಯುವಂತಾಯಿತು. ದೇಶದ ಇತರ ರಾಜ್ಯಗಳು ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದ್ದರೆ, ಪಶ್ಚಿಮ ಬಂಗಾಳ ಮಾತ್ರ ಭ್ರಷ್ಟಾಚಾರ ಮತ್ತು ಕಳ್ಳತನದಲ್ಲಿ ಮುಳುಗಿತ್ತು ಎಂದು ಕಿಡಿಕಾರಿದರು.

ರಾಜ್ಯ-ಕೇಂದ್ರದ ಸಮನ್ವಯದ ಕೊರತೆ ಎಂದ ಬರೈಕ್

ಮತ್ತೊಬ್ಬ ನಾಯಕ ಪ್ರಕಾಶ್ ಚಿಕ್ ಬರೈಕ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಎಡರಂಗ ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದ ನಡುವೆ ಸಮನ್ವಯದ ಕೊರತೆಯಿಂದಾಗಿ ಬಂಗಾಳ ದಶಕಗಳಿಂದ ನರಳಿದೆ ಎಂದರು. ಇದರಿಂದಾಗಿ ಮನರೇಗಾ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು. ಇದೇ ವೇಳೆ, ಉತ್ತರ ಬಂಗಾಳದಲ್ಲಿ ಏಮ್ಸ್ ಆಸ್ಪತ್ರೆ, ಹೊಸ ವೈದ್ಯಕೀಯ ಕಾಲೇಜುಗಳು, ಸಿಲಿಗುರಿ ಮತ್ತು ದೆಹಲಿ ನಡುವೆ ಉದ್ದೇಶಿತ ಬುಲೆಟ್ ಟ್ರೈನ್ ಹಾಗೂ ಹಸಿಮಾರಾದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಕ್ಕಾಗಿ ಪ್ರಸ್ತಾಪಿಸಿರುವ ಅಭಿವೃದ್ಧಿ ಯೋಜನೆಗಳನ್ನು ಅವರು ಸ್ವಾಗತಿಸಿದರು. ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಎರಡೂ ಸರ್ಕಾರಗಳ ನಡುವೆ ಉತ್ತಮ ಸಹಕಾರ ಅತ್ಯಗತ್ಯ ಎಂದು ಬರೈಕ್ ಒತ್ತಿ ಹೇಳಿದರು.

ಟಿಎಂಸಿ ಸೋಲು ಮತ್ತು ಭಿನ್ನಮತ

ವಿಧಾನಸಭಾ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ತನ್ನ ನಿಲುವಿಗೆ ಬಿಜೆಪಿ ಈ ಬಾರಿ ವಿನಾಯಿತಿ ನೀಡಿದೆ. ಈ ಕುರಿತು ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಇದು ಪಕ್ಷದ ನೀತಿಯಲ್ಲಿನ ಬದಲಾವಣೆಯಲ್ಲ, ಬದಲಿಗೆ ಇದೊಂದು ಅಪವಾದಾತ್ಮಕ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅನುಭವಿಸಿದ ಸೋಲಿನ ನಂತರ ಪಕ್ಷದೊಳಗೆ ಭಿನ್ನಮತ ತೀವ್ರಗೊಂಡಿದೆ. ರಿತಬ್ರತಾ ಬ್ಯಾನರ್ಜಿ 57 ಶಾಸಕರ ಬೆಂಬಲದೊಂದಿಗೆ ವಿರೋಧ ಪಕ್ಷದ ನಾಯಕರಾದ ನಂತರ ಟಿಎಂಸಿ ಒಳಗಿನ ಬಂಡಾಯ ಅಧಿಕೃತವಾಗಿ ಆರಂಭವಾಯಿತು. ಈ ಬಂಡಾಯದ ಕಿಡಿ ಸಂಸತ್ತಿನ ಉಭಯ ಸದನಗಳಿಗೂ ವ್ಯಾಪಿಸಿದ್ದು, ಹಲವು ನಾಯಕರು ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಸೂಚಿಸುತ್ತಿದ್ದಾರೆ.

ಹೀಗೆ ಪಕ್ಷಾಂತರ ಮಾಡಿದವರಲ್ಲಿ ಸುಸ್ಮಿತಾ ದೇವ್, ಸುಖೇಂದು ಶೇಖರ್ ರಾಯ್ ಮತ್ತು ಬರೈಕ್ ಪ್ರಮುಖರಾಗಿದ್ದಾರೆ. ಪಕ್ಷಾಂತರದ ಬಳಿಕ ಮಮತಾ ಬ್ಯಾನರ್ಜಿ ಅವರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸುಸ್ಮಿತಾ ದೇವ್, ನನಗೆ ಒಂದೇ ಬಾರಿಗೆ ಎರಡು ದೋಣಿಗಳಲ್ಲಿ ಪ್ರಯಾಣಿಸಲು ಇಷ್ಟವಿರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net