ಸೂರ್ಯ ಹೋರಾಟ ವ್ಯರ್ಥ: ಮುಂಬೈ ಮಣಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟಪರಾಗ್ ಪಡೆ; ಕೆಕೆಆರ್, ಪಂಜಾಬ್ ಕಿಂಗ್ಸ್ ಕನಸು ನುಚ್ಚುನೂರು! MIvsRR

ಸೂರ್ಯ ಹೋರಾಟ ವ್ಯರ್ಥ: ಮುಂಬೈ ಮಣಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟಪರಾಗ್ ಪಡೆ; ಕೆಕೆಆರ್, ಪಂಜಾಬ್ ಕಿಂಗ್ಸ್ ಕನಸು ನುಚ್ಚುನೂರು!
ಸೂರ್ಯ ಹೋರಾಟ ವ್ಯರ್ಥ: ಮುಂಬೈ ಮಣಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟಪರಾಗ್ ಪಡೆ; ಕೆಕೆಆರ್, ಪಂಜಾಬ್ ಕಿಂಗ್ಸ್ ಕನಸು ನುಚ್ಚುನೂರು!
Published on
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 30 ರನ್‌ಗಳ ಅಂತರದಿಂದ ಧೂಳೀಪಟ ಮಾಡಿದ ರಾಜಸ್ಥಾನ್ ರಾಯಲ್ಸ್ (MIvsRR) ಪ್ಲೇಆಫ್ ತಲುಪಿದ ನಾಲ್ಕನೇ ತಂಡವಾಗಿದೆ. ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಈ ಮಹಾ ಜಯದೊಂದಿಗೆ ಐಪಿಎಲ್ 2026ರ ಪ್ಲೇಆಫ್‌ನ ಅಂತಿಮ ಸ್ಥಾನವನ್ನು ಅತ್ಯಂತ ನಾಟಕೀಯವಾಗಿ ತನ್ನದಾಗಿಸಿಕೊಂಡಿದೆ.
ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ 'ಡು ಆರ್ ಡೈ' ಪಂದ್ಯದಲ್ಲಿ ರಾಜಸ್ಥಾನ್ ಗೆಲುವಿನ ಬೆನ್ನಲ್ಲೇ ಪ್ಲೇಆಫ್ ರೇಸ್‌ನಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳ ಆಸೆ ಸಂಪೂರ್ಣವಾಗಿ ತಣ್ಣಗಾಗಿದ್ದು, ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ.

ಪ್ಲೇಆಫ್ ತಲುಪಿದ ನಾಲ್ಕು ತಂಡಗಳು!

ಈ ಪಂದ್ಯಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟನ್ಸ್ (GT) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಪ್ಲೇಆಫ್ ಟಿಕೆಟ್ ಖಚಿತಪಡಿಸಿಕೊಂಡಿದ್ದವು. ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇತ್ತು. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಇದೀಗ 16 ಅಂಕಗಳನ್ನು ಗಳಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಆಡುವ ತನ್ನ ಕನಸನ್ನು ನನಸಾಗಿಸಿಕೊಂಡಿದೆ.

ರಾಜಸ್ಥಾನ್ ನೀಡಿದ 205 ರನ್‌ಗಳ ಬೃಹತ್ ಮೊತ್ತ!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ಬೌಲರ್‌ಗಳು ಆರಂಭಿಕ ಆಘಾತ ನೀಡಿದರೂ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಂಘಟಿತ ಹೋರಾಟದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ (27), ಧ್ರುವ್ ಜುರೆಲ್ (38), ದಸುನ್ ಶನಕ (28) ಮತ್ತು ಕೊನೆಯಲ್ಲಿ ಅಬ್ಬರಿಸಿದ ಜೋಫ್ರಾ ಆರ್ಚರ್ (32) ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಮುಂಬೈ ಇಂಡಿಯನ್ಸ್ ಪರ ವೇಗಿಗಳಾದ ದೀಪಕ್ ಚಾಹರ್ ಮತ್ತು ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಸೂರ್ಯಕುಮಾರ್ ಹೋರಾಟ ವ್ಯರ್ಥ; ಜೋಫ್ರಾ ಆರ್ಚರ್ ಮಾರಕ ದಾಳಿ!

ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ 'ಮಿಸ್ಟರ್ 360' ಸೂರ್ಯಕುಮಾರ್ ಯಾದವ್ ಕೇವಲ 60 ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು. ಈ ವೇಳೆ ವಿಲ್ ಜಾಕ್ಸ್ (33) ಜೊತೆಗೂಡಿ 4ನೇ ವಿಕೆಟ್‌ಗೆ 63 ರನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (34) ಜೊತೆಗೂಡಿ 6ನೇ ವಿಕೆಟ್‌ಗೆ 48 ರನ್‌ಗಳ ಉಪಯುಕ್ತ ಜೊತೆಯಾಟವಾಡಿದರೂ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ತಮ್ಮ ಕರಾರುವಾಕ್ ಮತ್ತು ಅತ್ಯಂತ ವೇಗದ ಬೌಲಿಂಗ್ ಮೂಲಕ ಮುಂಬೈ ಬ್ಯಾಟರ್‌ಗಳನ್ನು ಅಕ್ಷರಶಃ ನಡುಗಿಸಿದರು. ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 17 ರನ್ ನೀಡಿ 3 ಪ್ರಮುಖ ವಿಕೆಟ್ ಕಸಿದ ಆರ್ಚರ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಕೊನೆಯ ಓವರ್‌ಗಳಲ್ಲಿ ಯಶ್ ರಾಜ್ ಪುಂಜಾ ಅವರು ಕಾರ್ಬಿನ್ ಬಾಷ್ (2) ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡದ ಪತನವನ್ನು ಖಚಿತಪಡಿಸಿದರು. ಅಂತಿಮವಾಗಿ ಮುಂಬೈ ತಂಡ 175 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ರಾಜಸ್ಥಾನ್ ರಾಯಲ್ಸ್ ತಂಡದ ಈ ರೋಚಕ ಗೆಲುವಿನೊಂದಿಗೆ ಐಪಿಎಲ್ 2026ರ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಹೈ-ವೋಲ್ಟೇಜ್ ಪ್ಲೇಆಫ್ ಸಮರ ಆರಂಭವಾಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net