ಸೂರ್ಯ ಕ್ಯಾಪ್ಟನ್ಸಿ ಮುಕ್ತಾಯದ ಹಂತಕ್ಕೆ? ಟೀಮ್ ಇಂಡಿಯಾ ಮುಂದಿನ ಸಾರಥಿ ಬಗ್ಗೆ ರಿಕಿ ಪಾಂಟಿಂಗ್ ​ಸ್ಫೋಟಕ ಭವಿಷ್ಯ! Ricky Ponting Prediction

ಸೂರ್ಯ ಕ್ಯಾಪ್ಟನ್ಸಿ ಮುಕ್ತಾಯದ ಹಂತಕ್ಕೆ? ಟೀಮ್ ಇಂಡಿಯಾ ಮುಂದಿನ ಸಾರಥಿ ಬಗ್ಗೆ ರಿಕಿ ಪಾಂಟಿಂಗ್ ​ಸ್ಫೋಟಕ ಭವಿಷ್ಯ!
ಸೂರ್ಯ ಕ್ಯಾಪ್ಟನ್ಸಿ ಮುಕ್ತಾಯದ ಹಂತಕ್ಕೆ? ಟೀಮ್ ಇಂಡಿಯಾ ಮುಂದಿನ ಸಾರಥಿ ಬಗ್ಗೆ ರಿಕಿ ಪಾಂಟಿಂಗ್ ​ಸ್ಫೋಟಕ ಭವಿಷ್ಯ!
Published on
ನವದೆಹಲಿ: ಟಿ೨೦ ವಿಶ್ವಕಪ್ 2026 ರ ಟ್ರೋಫಿ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾದ ನಾಯಕತ್ವದ ಬಗೆಗೆ ಸಂಚಲನ ಸೃಷ್ಟಿಯಾಗಿದೆ. ಸತತ ವೈಫಲ್ಯಗಳಿಂದ ಬಳಲುತ್ತಿರುವ ಪ್ರಸ್ತುತ ನಾಯಕ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ಅವಧಿ ಮುಕ್ತಾಯದ ಹಂತಕ್ಕೆ ತಲುಪಿದೆ ಎನ್ನುವ ವದಂತಿಗಳ ನಡುವೆ, ಆಸ್ಟ್ರೇಲಿಯಾದ ದಿಗ್ಗಜ ಹಾಗೂ ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್(Ricky Ponting Prediction) ನೀಡಿರುವ ಹೇಳಿಕೆ ಕ್ರಿಕೆಟ್ ಲೋಕದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿದ್ದರೂ, ಶ್ರೇಯಸ್ ಅಯ್ಯರ್ ನಾಯಕತ್ವದ ರೇಸ್‌ನಲ್ಲಿ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಮತ್ತು ಅಕ್ಷರ್ ಪಟೇಲ್ ಅವರಿಗಿಂತ ಮುಂದಿದ್ದಾರೆ ಎಂದು ವರದಿಯಾಗಿದೆ.

ಅಯ್ಯರ್ ಈಗ ಕೆರಿಯರ್‌ನ ಬೆಸ್ಟ್ ಫಾರ್ಮ್‌ನಲ್ಲಿದ್ದಾರೆ; ನಾಯಕತ್ವ ಸಿಕ್ಕರೆ ಇತಿಹಾಸ ಸೃಷ್ಟಿಸ್ತಾರೆ!

ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಪಾಂಟಿಂಗ್, ಅಯ್ಯರ್ ಅವರನ್ನು ಟಿ೨೦ ತಂಡದಿಂದ ಹೊರಗಿಟ್ಟಿರುವುದಕ್ಕೆ ತಮ್ಮ ತೀವ್ರ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಯ್ಯರ್ ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯಂತ ಪ್ರಬುದ್ಧ ಹಂತದಲ್ಲಿದ್ದಾರೆ. ಇತ್ತೀಚಿನ ಐಪಿಎಲ್ ಪಂದ್ಯಗಳಲ್ಲಿ ಅವರ ಕಡಿಮೆ ಸ್ಕೋರ್‌ಗಳನ್ನು ತಳ್ಳಿಹಾಕಿರುವ ಪಾಂಟಿಂಗ್, ಅಯ್ಯರ್ ಬಲವಾಗಿ ಕಂಬ್ಯಾಕ್ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಮುಂದಿನ ನಾಯಕತ್ವಕ್ಕೆ ಹಲವು ಆಟಗಾರರ ಹೆಸರಿದ್ದರೂ, ನನ್ನ ಪ್ರಕಾರ ಶ್ರೇಯಸ್ ಅಯ್ಯರ್ ಅವರೇ ನಂಬರ್ ಒನ್ ದಾವೆದಾರ. ಮೈದಾನದ ಒಳಗೆ ಮತ್ತು ಹೊರಗೆ ಅವರ ನಡವಳಿಕೆಯನ್ನು ನೋಡಿದರೆ ಅವರು ಎಷ್ಟು ಶ್ರೇಷ್ಠ ಟಿ೨೦ ಆಟಗಾರ ಎಂಬುದು ತಿಳಿಯುತ್ತದೆ. ಅವರ ಕೆರಿಯರ್‌ನಲ್ಲಿ ಅವರು ಇಷ್ಟೊಂದು ಪ್ರಬುದ್ಧತೆಯಿಂದ ಆಡಿದ್ದನ್ನು ನಾನು ನೋಡಿಯೇ ಇಲ್ಲ. ಐಪಿಎಲ್‌ನ ೧೪ ಪಂದ್ಯಗಳಲ್ಲೂ ಒಂದೇ ರೀತಿಯ ಸ್ಥಿರತೆ ಕಾಯ್ದುಕೊಳ್ಳುವುದು ಕಷ್ಟ. ಆದರೆ ಶ್ರೇಯಸ್ ಅಯ್ಯರ್ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತವಾಗಿ ಮಿಂಚಿದ್ದಾರೆ ಎಂದು ಪಾಂಟಿಂಗ್ ಗುಣಗಾನ ಮಾಡಿದ್ದಾರೆ.

ಅಯ್ಯರ್ ಆಯ್ಕೆ ಮಾಡದಿದ್ದಕ್ಕೆ ಪಾಂಟಿಂಗ್ ನೇರ ಪ್ರಶ್ನೆ!

ಕಳೆದ ೨೦೨೩ ರ ಡಿಸೆಂಬರ್‌ನಿಂದ ಭಾರತ ಪರ ಒಂದೂ ಟಿ೨೦ ಪಂದ್ಯ ಆಡದ ಶ್ರೇಯಸ್ ಅಯ್ಯರ್ ಅವರನ್ನು ಸತತವಾಗಿ ಕಡೆಗಣಿಸುತ್ತಿರುವುದರ ಬಗ್ಗೆ ಪಾಂಟಿಂಗ್ ಅಸಮಾಧಾನ ಹೊರಹಾಕಿದ್ದಾರೆ. ಭಾರತವನ್ನು ಆಯ್ಕೆ ಮಾಡುವಾಗ ಶ್ರೇಯಸ್ ಹೆಸರು ಅಲ್ಲಿ ಇಲ್ಲದಿದ್ದರೆ ನನಗೆ ಯಾವಾಗಲೂ ಆಶ್ಚರ್ಯವಾಗುತ್ತದೆ. ಭಾರತಕ್ಕೆ ಮತ್ತೆ ಮರಳುವುದು ಸುಲಭವಲ್ಲ, ಅದಕ್ಕಾಗಿ ಉತ್ತಮವಾಗಿ ರನ್ ಗಳಿಸಬೇಕಾಗುತ್ತದೆ ಎಂದಿದ್ದಾರೆ.
ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಶ್ರೇಯಸ್ ಮುನ್ನಡೆಸಿದ ರೀತಿ ಮತ್ತು ಆಡಿದ ಶೈಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಅವರು ಈಗ ತಮ್ಮ ಜೀವನ ಮತ್ತು ಕೆರಿಯರ್‌ನ ಅತ್ಯುತ್ತಮ ಹಂತದಲ್ಲಿದ್ದಾರೆ. ಈ ಸಮಯದಲ್ಲಿ ಭಾರತ ತಂಡದ ನಾಯಕತ್ವ ಅವರ ಕೈ ಸೇರಿದರೆ, ಅವರು ಅದರ ಸಂಪೂರ್ಣ ಲಾಭ ಪಡೆದು ತಂಡವನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ.
ರಿಕಿ ಪಾಂಟಿಂಗ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಅತ್ಯಂತ ಆಪ್ತ ಬಾಂಧವ್ಯವಿದೆ. ಈ ಹಿಂದೆ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ಜೋಡಿ, ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೋಚ್ ಮತ್ತು ಕ್ಯಾಪ್ಟನ್ ಆಗಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಮೂರು ವಿಭಿನ್ನ ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಅಯ್ಯರ್ ಅವರದ್ದಾಗಿದೆ. ಅಲ್ಲದೆ ೨೦೨೪ ರಲ್ಲಿ ಕೆಕೆಆರ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ಇವರು, ಪ್ರಸ್ತುತ ಭಾರತ ಏಕದಿನ ತಂಡದ ಉಪನಾಯಕರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net