ನವದೆಹಲಿ: ( khushi mukherjee) ಮಾಡೆಲ್ ಖುಷಿ ಮುಖರ್ಜಿ 2025 ರ ಕೊನೆಯಲ್ಲಿ ಭಾರತೀಯ ಟಿ 20 ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದ ಪರಿಣಾಮವಾಗಿ ಇದೀಗ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಖುಷಿ ಮುಖರ್ಜಿ ಅವರ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಾಗಿದ್ದ ಬೆನ್ನಲ್ಲೇ ಇದೀಗ ಈ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಖುಷಿ ಮುಖರ್ಜಿ ಅವರು, ಸೂರ್ಯಕುಮಾರ್ ಯಾದವ್ ಅವರು ಮದುವೆಯಾಗುವ ಮೊದಲು ಅಥವಾ ಅವರು ಅಷ್ಟೊಂದು ಪ್ರಸಿದ್ಧರಾಗುವ ಮೊದಲು ನನಗೆ ಮೆಸೇಜ್ ಮಾಡುತ್ತಿದ್ದರು. ಆದರೆ ಆಗ ನಾನು ಅಷ್ಟಾಗಿ ಗಮನ ಹರಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಸುದ್ದಿಯ ಕುರಿತಾಗಿ ಸೂರ್ಯಕುಮಾರ್ ಯಾದವ್ ಅವರ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ವಿವಾದ ದೊಡ್ಡ ಮಟ್ಟಕ್ಕೆ ತಲುಪುತ್ತಿದ್ದಂತೆ ಖುಷಿ ಮುಖರ್ಜಿ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಖುಷಿ ಮುಖರ್ಜಿ ಮಾತನಾಡಿ, ನಾನು ಮತ್ತು ಸೂರ್ಯಕುಮಾರ್ ಕೇವಲ ಸ್ನೇಹಿತರಷ್ಟೇ. ನಮ್ಮ ನಡುವೆ ಯಾವುದೇ ಪ್ರೇಮ ಸಂಬಂಧವಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ, ನನ್ನ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿತ್ತು ಮತ್ತು ನನ್ನ ಸಂದೇಶಗಳನ್ನು ಅತಿಶಯೋಕ್ತಿಯಿಂದ ಬಿಂಬಿಸಲಾಗಿದೆ ಎಂದಿದ್ದಾರೆ.
ಸೂರ್ಯಕುಮಾರ್ ಅವರು ಪಂದ್ಯವೊಂದರಲ್ಲಿ ಸೋತಾಗ ನಾನು ಒಬ್ಬ ಸ್ನೇಹಿತೆಯಾಗಿ ಅವರ ಜೊತೆ ಮಾತನಾಡಿದ್ದೆ, ಅದು ಬಿಟ್ಟರೆ ಬೇರೆ ಯಾವುದೂ ಇಲ್ಲ. ಈ ವಿಷಯವನ್ನು ಅನಗತ್ಯವಾಗಿ ದೊಡ್ಡ ವಿಷಯವನ್ನಾಗಿ ಮಾಡಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.
100 ಕೋಟಿ ರೂ. ಮಾನನಷ್ಟ ಮೊಕದ್ದಮೆ:
ಸೂರ್ಯಕುಮಾರ್ ಯಾದವ್ ಅವರ ಘನತೆಗೆ ಧಕ್ಕೆ ತರುವಂತಹ ಸುಳ್ಳು ಆರೋಪಗಳನ್ನು ಖುಷಿ ಮಾಡಿದ್ದಾರೆ ಎಂದು ಆರೋಪಿಸಿ, ಮುಂಬೈ ಮೂಲದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ಎಂಬುವವರು ಜನವರಿ 13ರಂದು ನಟಿಯ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಿರುವ ಕ್ರೀಡಾಪಟುವಿನ ಬಗ್ಗೆ ಇಂತಹ ಅಸಭ್ಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಈಗ ಭಾರತ ತಂಡದ ನಾಯಕರಾಗಿದ್ದಾರೆ ಮತ್ತು ಸುಖಿ ಸಂಸಾರ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಖುಷಿ ಮುಖರ್ಜಿ ಈ ಹಳೆಯ ವಿಷಯವನ್ನು ಪ್ರಸ್ತಾಪಿಸಿರುವುದು 'ಪಬ್ಲಿಸಿಟಿ ಸ್ಟಂಟ್' ಎಂದು ಅನೇಕ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಖುಷಿ ಮುಖರ್ಜಿ ಅವರು ತಮಿಳು ಸಿನಿಮಾ 'ಅಂಜಲ್ ತುರೈ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತೆಲುಗಿನ 'ಹಾರ್ಟ್ ಅಟ್ಯಾಕ್' ಚಿತ್ರದಲ್ಲೂ ನಟಿಸಿದ್ದಾರೆ. ಜೊತೆಗೆ ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ (Splitsvilla) ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದಾರೆ.