ಕೈಕಾಲು ಕಟ್ಟಿಕೊಂಡು ಕಿಡ್ನ್ಯಾಪ್ ಡ್ರಾಮಾ; ಪತ್ನಿ ಬಳಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕಿಲಾಡಿ ಪತಿರಾಯ ಅರೆಸ್ಟ್..Surath

Surat accountant Fake ransom video viral
Surat accountant Fake ransom video viral
Published on

ಪ್ರಮುಖ ಮುಖ್ಯಾಂಶಗಳು

  • ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಹಿನ್ನೆಲೆ ಕಿಡ್ನ್ಯಾಪ್​ ನಾಟಕವಾಡಿ, ಹಣಕ್ಕೆ ಬೇಡಿಕೆ
  • ಕೈ ಕಾಲು ಕಟ್ಟಿಕೊಂಡು ಪತ್ನಿಯ ಮೊಬೈಲ್‌ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟ ಭೂಪ
  • ಜೂನ್ 15 ರಂದು ಗೋಧ್ರಾದ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಕಿಲಾಡಿ ಅಕೌಂಟೆಂಟ್
Surat accountant Fake ransom video viral: ಇತ್ತೀಚೆಗೆ ಹಲವರು ಷೇರು ಮಾರುಕಟ್ಟೆ ಹಾಗೂ  ಬೆಟ್ಟಿಂಗ್​​​, ಟ್ರೇಡಿಂಗ್​ ವಿಚಾರವಾಗಿ ಹಣ ಕಳೆದುಕೊಳ್ಳುವುದು ಹೆಚ್ಚಾಗಿದೆ. ಇದರಿಂದ  ಕೆಲವರು ಸಾಲದ ಸುಳಿಗೆ ಸಿಲುಕಿ  ಮೃತಪಟ್ಟರೆ, ಹಲವರು  ದರೋಡೆ, ವಂಚನೆಯ ಜಾಲಕ್ಕೆ ಕೈ ಹಾಕುತ್ತಾರೆ. ಸದ್ಯ ಸೂರತ್​ನ ವ್ಯಕ್ತಿಯೊಬ್ಬ ಷೇರು ಮಾರುಕಟ್ಟೆಯಲ್ಲಾದ ನಷ್ಟವನ್ನು ತುಂಬಲು ತಾನೇ ಕೈ ಕಾಲು ಕಟ್ಟಿಕೊಂಡು ಕಿಡ್ನ್ಯಾಪ್​ ಆಗಿದ್ದೇನೆ ಎಂದು ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ. 
ಹೌದು, ಷೇರು ಮಾರುಕಟ್ಟೆಯ ಆಪ್ಷನ್ಸ್ ಟ್ರೇಡಿಂಗ್‌ನಲ್ಲಿ ಆದ ಭಾರಿ ಆರ್ಥಿಕ ನಷ್ಟದಿಂದ ಪಾರಾಗಲು ವ್ಯಕ್ತಿಯೊಬ್ಬ ತಾನೇ ಅಪಹರಣಕ್ಕೊಳಗಾಗಿರುವುದಾಗಿ ನಂಬಿಸಿ, ತನ್ನ ಪತ್ನಿ ಬಳಿಯೇ 50 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ದೂರು ಕೊಟ್ರೆ ಗಂಡ ಬದುಕಿರಲ್ಲ ಎಂದು ಬೆದರಿಕೆ

ಸೂರತ್‌ನ ಮೋಟಾ ವರಾಚ್ಚಾ ಪ್ರದೇಶದ ನಿವಾಸಿಯಾದ 36 ವರ್ಷದ ಜಿಗ್ನೇಶ್ ತಲಾವಿಯಾ ಎಂಬಾತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಜಿಗ್ನೇಶ್, ಜೂನ್ 12 ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದನು.  ಇದರಿಂದ ಆತಂಕಕ್ಕೆ ಒಳಗಾದ ಆತನ ಪತ್ನಿ  ಮೀನಾಕ್ಷಿಬೆನ್ ತಲಾವಿಯಾ ಉತ್ರಾನ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಮೀನಾಕ್ಷಿಬೆನ್ ಅವರ ಮೊಬೈಲ್​ ಪರಿಶೀಲಿಸಿದರು. ಜಿಗ್ನೇಶ್‌ನನ್ನು ಅಪಹರಿಸಲಾಗಿದ್ದು, ಆತನನ್ನು ಬಿಡುಗಡೆ ಮಾಡಲು 50 ಲಕ್ಷ ರೂಪಾಯಿ ನೀಡಬೇಕು ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಅಷ್ಟೇ ಅಲ್ಲದೆ, ಒಂದು ವೇಳೆ ಪೊಲೀಸರ ಬಳಿ ಹೋದರೆ ಅಥವಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ಪ್ರಯತ್ನಿಸಿದರೆ ಜಿಗ್ನೇಶ್ ಸಾವಿಗೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಬೆದರಿಕೆ ಹಾಕಿದ್ದರು. ಜೊತೆಗೆ ಜಿಗ್ನೇಶ್​​ನನ್ನು ಕಟ್ಟಿ ಹಾಕಿದ ವಿಡಿಯೋ ಸಹ ಕಳುಹಿಸಿದ್ದರು. ಇದರಿಂದ ಅವರು ಆತಂಕಕ್ಕೆ ಒಳಗಾದರು. 

ಪೊಲೀಸರು ಜಾಲಾಡಿದ್ದು ಹೀಗೆ

ಪ್ರಕರಣದ ಗಂಭೀರ ಅರಿತ ಪೊಲೀಸರು, ತಾಂತ್ರಿಕ ಕಣ್ಗಾವಲು,  ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಹ್ಯೂಮನ್ ಇಂಟೆಲಿಜೆನ್ಸ್ ಬಳಸಿ ಜಿಗ್ನೇಶ್ ಎಲ್ಲಿದ್ದಾನೆ ಎನ್ನುವುದನ್ನು ಪತ್ತೆ ಹಚ್ಚಲು  ವಿಶೇಷ ತಂಡಗಳನ್ನು ರಚಿಸಿ, ತನಿಖೆ ನಡೆಸಿದರು. ಜಿಗ್ನೇಶ್ ತನ್ನ ಸ್ಥಳವನ್ನು ನಿರಂತರವಾಗಿ ಬದಲಾಯಿಸುತ್ತಿದ್ದ ಕಾರಣ ಪೊಲೀಸರು ಮಧ್ಯಪ್ರದೇಶ ಮತ್ತು ಗೋಧ್ರಾಗೆ ತಂಡಗಳನ್ನು ರವಾನಿಸಿದ್ದರು. ಕೊನೆಗೆ ಜೂನ್ 15 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿರುವ 'ಶಿವ ಹೋಟೆಲ್'ನಲ್ಲಿ ಜಿಗ್ನೇಶ್ ಸುರಕ್ಷಿತವಾಗಿ ಇರುವುದನ್ನು ಪೊಲೀಸರು ಪತ್ತೆಹಚ್ಚಿದರು.

ಜಿಗ್ನೇಶ್​ ತಪ್ಪೊಪ್ಪಿಕೊಂಡಿದ್ದು ಹೀಗೆ

ಪೊಲೀಸರು ಜಿಗ್ನೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ತನಗೆ ಯಾರೂ ಅಪಹರಣ ಮಾಡಿಲ್ಲ, ತಾನೇ ಸ್ವತಃ ಈ ಇಡೀ ನಾಟಕವನ್ನು ಯೋಜಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ತಾನೇ ಬೆದರಿಕೆ ಸಂದೇಶಗಳನ್ನು ಟೈಪ್ ಮಾಡಿ, ಮೊಬೈಲ್ ಕ್ಯಾಮೆರಾವನ್ನು ಎದುರಿಟ್ಟುಕೊಂಡು ತಾನೇ ಕೈಕಾಲುಗಳನ್ನು ಕಟ್ಟಿಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾಗಿ ಪೊಲೀಸರ ಮುಂದೆ ಪ್ರಾತ್ಯಕ್ಷಿಕೆ ನೀಡಿ ತೋರಿಸಿದ್ದಾನೆ.
ಪೊಲೀಸರು ಹೀಗಂದ್ರು
'ಜಿಗ್ನೇಶ್ ಷೇರು ಮಾರುಕಟ್ಟೆಯ ಕಾಲ್ ಮತ್ತು ಪುಟ್ ಆಪ್ಷನ್ಸ್ ಟ್ರೇಡಿಂಗ್‌ನಲ್ಲಿ ಸುಮಾರು 50 ರಿಂದ 60 ಲಕ್ಷ ರೂಪಾಯಿಗಳಷ್ಟು ಭಾರಿ ನಷ್ಟ ಅನುಭವಿಸಿದ್ದನು. ಸಾಮಾನ್ಯ ಜೀವನ ನಡೆಸುತ್ತಿದ್ದ ಈತ ಹೆಚ್ಚು ಹಣ ಗಳಿಸುವ ಆಸೆಯಿಂದ ಆಪ್ಷನ್ಸ್ ಟ್ರೇಡಿಂಗ್‌ಗೆ ಇಳಿದಿದ್ದ. ಈ ಭಾರಿ ಸಾಲವನ್ನು ತೀರಿಸಲು ಕುಟುಂಬದಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಈ ಸುಳ್ಳು ಅಪಹರಣದ ಕಥೆ ಕಟ್ಟಿದ್ದ ಎಂದು ಸೂರತ್ ಡಿಸಿಪಿ ಝಾಲಾ  ಮಾಹಿತಿ ಕೊಟ್ಟರು. 
ಪೊಲೀಸ್ ಇಲಾಖೆಯನ್ನು ದಾರಿ ತಪ್ಪಿಸಿದ, ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಮತ್ತು ಸರ್ಕಾರದ ಅಮೂಲ್ಯ ಸಂಪನ್ಮೂಲ ಹಾಗೂ ಸಮಯವನ್ನು ವ್ಯರ್ಥ ಮಾಡಿದ ಆರೋಪದ ಮೇಲೆ ಜಿಗ್ನೇಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 212, 217 ಮತ್ತು 233 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ,( ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net