UGCಯ ಹೊಸ ನಿಯಮಾವಳಿಗಳಿಗೆ ಸುಪ್ರೀಂ ತಡೆ; ಸ್ಪಷ್ಟತೆಯ ಕೊರತೆ ಮತ್ತು ದುರುಪಯೋಗದ ಭೀತಿ ಇದೆ ಎಂದ ಕೋರ್ಟ್ | Supreme Court

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Published on
ನವದೆಹಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದ್ದ ಯುಜಿಸಿ ನಿಯಮಾವಳಿ-2026 ಕ್ಕೆ ಸುಪ್ರೀಂ ಕೋರ್ಟ್(Supreme Court) ಬುಧವಾರ ಮಧ್ಯಂತರ ತಡೆ ನೀಡಿದೆ. ಈ ನಿಯಮಗಳು ಅಸ್ಪಷ್ಟವಾಗಿವೆ ಮತ್ತು ಸಮಾಜವನ್ನು ವಿಭಜಿಸುವ ಸಾಧ್ಯತೆ ಹೊಂದಿವೆ ಎಂದು ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸುಪ್ರಿಂ ಹೇಳಿದ್ದೇನು..?

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಈ ಆದೇಶ ನೀಡಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಕೆಲವು ಪ್ರಮುಖ ಅಂಶಗಳನ್ನು ಎತ್ತಿ ತೋರಿಸಿತು.

ಅಸ್ಪಷ್ಟ ವ್ಯಾಖ್ಯಾನ

ಜಾತಿ ತಾರತಮ್ಯ ಎಂಬ ಪದಕ್ಕೆ ನೀಡಿರುವ ವ್ಯಾಖ್ಯಾನವು ಕೇವಲ ಮೀಸಲಾತಿ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದು, ಸಾಮಾನ್ಯ ವರ್ಗದವರನ್ನು ಕೈಬಿಟ್ಟಿರುವುದು ಅಸ್ಪಷ್ಟತೆಯಿಂದ ಕೂಡಿದೆ.

ದುರುಪಯೋಗದ ಸಂಭಾವ್ಯತೆ

ಈ ನಿಯಮಗಳು ಅಸ್ಪಷ್ಟವಾಗಿರುವುದರಿಂದ ಅವುಗಳನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ. ಇದು ಕ್ಯಾಂಪಸ್‌ಗಳಲ್ಲಿ ಮುಕ್ತ ವಾತಾವರಣದ ಬದಲು ಭಯದ ವಾತಾವರಣ ಸೃಷ್ಟಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು.

ಸಮಾಜ ವಿಭಜನೆಯ ಭೀತಿ

ನಾವು ಜಾತಿ ರಹಿತ ಸಮಾಜದತ್ತ ಸಾಗುತ್ತಿದ್ದೇವೆಯೇ ಅಥವಾ ಹಿಂದೆ ಸರಿಯುತ್ತಿದ್ದೇವೆಯೇ? ಈ ನಿಯಮಗಳು ವಿದ್ಯಾರ್ಥಿ ಸಮುದಾಯವನ್ನು ಶಾಶ್ವತವಾಗಿ ಬಲಿಪಶು ಮತ್ತು ಅಪರಾಧಿ ಎಂದು ವಿಂಗಡಿಸುವ ಅಪಾಯವಿದೆ ಎಂದು ನ್ಯಾಯಾಧೀಶರು ಎಚ್ಚರಿಸಿದ್ದರು.

ವಿದ್ಯಾರ್ಥಿಗಳ ನಡುವೆ ಗೋಡೆ ಬೇಡ

ಶಿಕ್ಷಣ ಸಂಸ್ಥೆಗಳು ಭಾರತದ ಏಕತೆಯನ್ನು ಪ್ರತಿಬಿಂಬಿಸಬೇಕು. ನಾವು ವಿದ್ಯಾರ್ಥಿಗಳನ್ನು ಜಾತಿ ಅಥವಾ ವರ್ಗದ ಆಧಾರದ ಮೇಲೆ ಶಾಶ್ವತವಾಗಿ ವಿಭಜಿಸುವ ಗೋಡೆಗಳನ್ನು ನಿರ್ಮಿಸಬಾರದು. ಸಮಾನತೆ ಎಂದರೆ ಎಲ್ಲರನ್ನೂ ಒಳಗೊಳ್ಳುವುದೇ ಹೊರತು, ಒಂದು ವರ್ಗವನ್ನು ರಕ್ಷಿಸಿ ಇನ್ನೊಂದು ವರ್ಗವನ್ನು ಅನಾಥ ಮಾಡುವುದಲ್ಲ ಎಂದು ನ್ಯಾಯಾಲಯ ಹೇಳಿದೆ.

ಸ್ಪಷ್ಟೀಕರಣ ಅಗತ್ಯ

ಯುಜಿಸಿಯು ಈ ನಿಯಮಗಳನ್ನು ರೂಪಿಸುವಾಗ ಸಂವಿಧಾನದ ಆಶಯಗಳನ್ನು ಸರಿಯಾಗಿ ಗಮನಿಸಿಲ್ಲ ಎಂದು ಹೇಳಿದ ಸುಪ್ರಿಂ, ಯಾವ ಆಧಾರದ ಮೇಲೆ ಕೆಲವು ವರ್ಗಗಳನ್ನು ಮಾತ್ರ ಈ ನಿಯಮದ ವ್ಯಾಪ್ತಿಗೆ ತರಲಾಗಿದೆ ಮತ್ತು ಇತರರನ್ನು ಏಕೆ ಹೊರಗಿಡಲಾಗಿದೆ ಎಂಬುದಕ್ಕೆ ತರ್ಕಬದ್ಧ ವಿವರಣೆ ಬೇಕು ಎಂದು ಸೂಚಿಸಿದೆ.

ಹಳೆಯ ನಿಯಮಗಳೇ ಮುಂದುವರಿಕೆ

ಹೊಸ ನಿಯಮಾವಳಿಗಳಿಗೆ ತಡೆ ನೀಡಿರುವ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ 2012ರ ಹಳೆಯ ಯುಜಿಸಿ ಮಾರ್ಗಸೂಚಿಗಳೇ ಜಾರಿಯಲ್ಲಿರುತ್ತವೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಈ ನಿಯಮಗಳನ್ನು ಮರುಪರಿಶೀಲಿಸಲು ಕಾನೂನು ತಜ್ಞರು ಮತ್ತು ಶಿಕ್ಷಣ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ವಿವಾದಕ್ಕೆ ಕಾರಣವಾದ ಅಂಶಗಳು

ನಿಯಮ 3(1)(c): ಇದರಲ್ಲಿ ಜಾತಿ ತಾರತಮ್ಯ ಎಂದರೆ ಕೇವಲ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿರುದ್ಧದ ಕೃತ್ಯ ಎಂದು ವ್ಯಾಖ್ಯಾನಿಸಲಾಗಿತ್ತು.
ಸುಳ್ಳು ದೂರುಗಳಿಗೆ ದಂಡವಿಲ್ಲ: ಮೊದಲಿದ್ದ ಕರಡು ಪ್ರತಿಯಲ್ಲಿ ಸುಳ್ಳು ದೂರು ನೀಡುವವರ ವಿರುದ್ಧ ದಂಡದ ಅವಕಾಶವಿತ್ತು. ಆದರೆ ಅಂತಿಮ ನಿಯಮಗಳಲ್ಲಿ ಅದನ್ನು ತೆಗೆದುಹಾಕಲಾಗಿತ್ತು.
ಏಕಪಕ್ಷೀಯ ಸಮಿತಿ: ಸಮಾನತಾ ಸಮಿತಿಗಳಲ್ಲಿ ಸಾಮಾನ್ಯ ವರ್ಗಕ್ಕೆ ಪ್ರಾತಿನಿಧ್ಯ ಇರಲಿಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು.

ಮುಂದಿನ ವಿಚಾರಣೆ

ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು, ಮಾರ್ಚ್ 19 ರೊಳಗೆ ಈ ಕುರಿತು ಸಮಗ್ರ ವಿವರಣೆ ನೀಡುವಂತೆ ಆದೇಶಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net