

ನವದೆಹಲಿ: ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳ ಪೋಷಕರ ಕೇವಲ ಸಂಬಳದ ಆದಾಯವನ್ನು ಆಧಾರವಾಗಿಟ್ಟುಕೊಂಡು ಅವರನ್ನು ಮೀಸಲಾತಿ ಸೌಲಭ್ಯದಿಂದ ಹೊರಗಿಡುವಂತಿಲ್ಲ ಎಂದು ನೀಡಿದ್ದ ತೀರ್ಪು ಹಿಂದಿನ ನೇಮಕಾತಿಗಳಿಗೆ ಪೂರ್ವಾನ್ವಯವಾಗಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. ಸರ್ಕಾರದ ವಿರೋಧ ಹಾಗೂ ಆಡಳಿತಾತ್ಮಕ ಗೊಂದಲಗಳ ಕಳವಳವನ್ನು ಪರಿಗಣಿಸಿ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು ಈ ಸ್ಪಷ್ಟನೆ ನೀಡಿದ್ದು, ಈಗಾಗಲೇ ಪೂರ್ಣಗೊಂಡಿರುವ ನೇಮಕಾತಿಗಳನ್ನು ಅಥವಾ ಹುದ್ದೆಗಳ ಹಂಚಿಕೆಯನ್ನು ಮತ್ತೆ ಮರುಪರಿಶೀಲನೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಪ್ರಸ್ತುತ ಪ್ರಕ್ರಿಯೆಯಲ್ಲಿರುವ 2025ರ ಸಿವಿಲ್ ಸೇವೆಗಳ ಪರೀಕ್ಷೆಯ ಸೇವಾ ಹಂಚಿಕೆಗೆ ಮಾರ್ಚ್ 11 ರ ಈ ತೀರ್ಪು ಅನ್ವಯವಾಗಲಿದೆ ಎಂದು ಪೀಠ ಹೇಳಿದೆ.
ಕಳೆದ ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಜಾರಿಗೆ ತರಲು ಸರ್ಕಾರಕ್ಕೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಶುಕ್ರವಾರ, ಈ ಗಡುವು ಮುಕ್ತಾಯಗೊಂಡಿರುವುದನ್ನು ಗಮನಿಸಿದ ನ್ಯಾಯಾಲಯವು, ಜಾರಿಗೆ ನೀಡಿದ್ದ ಸಮಯವನ್ನು ಮತ್ತಷ್ಟು ಎಂಟು ವಾರಗಳ ಕಾಲ ವಿಸ್ತರಿಸಿದೆ. ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಈ ತೀರ್ಪನ್ನು ಪೂರ್ವಾನ್ವಯವಾಗಿ ಜಾರಿಗೊಳಿಸಿದರೆ, ಈಗಾಗಲೇ ನೇಮಕಗೊಂಡವರ ಹಿರಿತನ ಹಾಗೂ ಸಚಿವ ಸಂಪುಟ/ಕ್ಯಾಡರ್ ಹಂಚಿಕೆ ಸಂಪೂರ್ಣ ಅಸ್ತವ್ಯಸ್ತಗೊಂಡು, ಆಡಳಿತಾತ್ಮಕವಾಗಿ ದೊಡ್ಡ ಗೊಂದಲ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿತ್ತು.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರ ಪೋಷಕರ ಹುದ್ದೆಗಳನ್ನು ಸರ್ಕಾರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಅಧಿಕಾರಿಗಳಿಗೆ ಸಮಾನವಾಗಿ ಪರಿಗಣಿಸಿ ಕೆನೆಪದರ (Creamy Layer) ಗುರುತಿಸಲು ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ಬೇಕು ಎಂದು ಕೋರಿದರು. ಕೆಲವು ಅಭ್ಯರ್ಥಿಗಳ ಪೋಷಕರು ವಾರ್ಷಿಕ 1 ಕೋಟಿ ರೂಗಿಂತ ಹೆಚ್ಚು ಗಳಿಸುತ್ತಿದ್ದರೂ, ಈ ತೀರ್ಪಿನ ಲಾಭ ಪಡೆದು ಕೆನೆಪದರ ಅಡಿಯಲ್ಲಿ ಬರುವ ಅಪಾಯವಿದೆ ಎಂದೂ ಪೀಠದ ಗಮನಕ್ಕೆ ತಂದರು. ಇದನ್ನೆಲ್ಲಾ ಆಲಿಸಿದ ನ್ಯಾಯಾಲಯ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಮಾರ್ಚ್ನಲ್ಲಿ ಪ್ರಮುಖ ತೀರ್ಪು ನೀಡಿತ್ತು. ಸರ್ಕಾರಿ ಉದ್ಯೋಗಿಗಳಲ್ಲಿ ಗ್ರೂಪ್ ಎ, ಬಿ, ಸಿ ಮತ್ತು ಡಿ ಹುದ್ದೆಗಳ ಆಧಾರದ ಮೇಲೆ ಕೆನೆಪದರವನ್ನು ಹೇಗೆ ನಿರ್ಧರಿಸಲಾಗುತ್ತದೆಯೋ, ಅದೇ ರೀತಿ ಪಿಎಸ್ಯು ಮತ್ತು ಖಾಸಗಿ ವಲಯದ ನೌಕರರಿಗೂ ಹುದ್ದೆಯ ಸಮಾನತೆಯ ಆಧಾರದ ಮೇಲೆಯೇ ಕೆನೆಪದರ ನಿರ್ಧರಿಸಬೇಕು. ಕೇವಲ ಸಂಬಳದ ಆದಾಯದ ಆಧಾರದ ಮೇಲೆ ಅವರನ್ನು ಮೀಸಲಾತಿಯಿಂದ ಹೊರಗಿಡುವುದು ಅಸಮಾನತೆ ಮತ್ತು ಪಕ್ಷಪಾತಕ್ಕೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
1992 ರ ಇಂದಿರಾ ಸಾಹ್ನಿ ತೀರ್ಪಿನ ನಂತರ 1993 ರಲ್ಲಿ ಕೆನೆಪದರ ಕಲ್ಪನೆಯನ್ನು ಜಾರಿಗೆ ತರಲಾಗಿತ್ತು. 2004 ರ ಸ್ಪಷ್ಟೀಕರಣದ ಪ್ರಕಾರ, ಸಂಬಳದ ಆದಾಯ ಮತ್ತು ಇತರ ಮೂಲಗಳ ಆದಾಯವನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಬೇಕಿತ್ತು. ಇದನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, ಕೇವಲ ಸಂಬಳವನ್ನು ಯಾಂತ್ರಿಕವಾಗಿ ಒಟ್ಟುಗೂಡಿಸಿ ಮೀಸಲಾತಿಯ ಸಾಂವಿಧಾನಿಕ ಉದ್ದೇಶವನ್ನು ಹಾಳುಮಾಡಬಾರದು ಎಂದು ಹೇಳಿತ್ತು. ಆದರೆ ಇದೀಗ, ಹಳೆಯ ನೇಮಕಾತಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಕೇಂದ್ರ ಸರ್ಕಾರಕ್ಕೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ(ಏಜೆನ್ಸೀಸ್).