_1769969300479.webp?w=480&auto=format%2Ccompress&fit=max)
_1769969300479.webp?w=480&auto=format%2Ccompress&fit=max)
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಸ್ಕಿಲ್ ಲ್ಯಾಬ್ ತುಂಬ ಅನುಕೂಲ ಮಾಡಿಕೊಡಲಿದೆ. ಇನ್ನು, ನಮ್ಮ ದೇಶದಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ಕಲ್ಪನೆ ಇಟ್ಟುಕೊಂಡು ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲೊಂದು ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣ ಮಾಡುವುದಾಗಿ ಘೊಷಿಸಿರುವುದು ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಏಕೆಂದರೆ, ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ.
2035ರ ವೇಳೆಗೆ ಒಟ್ಟು ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪ್ರಮಾಣ (ಜಿಇಆರ್)ವನ್ನು ಶೇ.50ಕ್ಕೆ ಏರಿಕೆ ಮಾಡಬೇಕೆಂಬ ಗುರಿಯನ್ನು ನಾವು ಹೊಂದಿದ್ದೇವೆ. ಇಂಥ ಸಂದರ್ಭದಲ್ಲಿ ಈ ರೀತಿ ಹಾಸ್ಟೆಲ್ ತೆರೆಯುವ ಮೂಲಕ ಕಲಿಕೆಯಿಂದ ಹೊರಹೋಗುವ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಬಹುದಾಗಿದೆ. ಇದರಿಂದ ನಮ್ಮ ಜಿಇಆರ್ ಸಹ ಹೆಚ್ಚಳವಾಗುವ ನಿರೀಕ್ಷೆ ಇಟ್ಟುಕೊಳ್ಳಬಹುದು.
ಐದು ವಿಶ್ವವಿದ್ಯಾಲಯಗಳ ಟೌನ್ಶಿಪ್ ನಿರ್ಮಾಣ ಮಾಡಲು ಯೋಜಿಸಿರುವುದು ಹಾಗೂ ಮೂಲಸೌಕರ್ಯಗಳನ್ನು ಒಳಗೊಂಡಂತೆ ವಿವಿಯ ನಿರ್ಮಾಣ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ. ಇದಕ್ಕೆ ಕೈಗಾರಿಕೆಗಳ ಸಹಕಾರ ಕೂಡ ಸಿಗಲಿದೆ. ಇದರಲ್ಲಿ ವಿಶ್ವವಿದ್ಯಾಲಯ ಮಾತ್ರವಲ್ಲದೆ, ಕಾಲೇಜು, ವಸತಿ ಸೌಲಭ್ಯವನ್ನು ಸಹ ಕಲ್ಪಿಸುತ್ತಿದೆ. ಇದು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗಲಿದೆ.
ಉದ್ಯೋಗ ಕಲ್ಪಿಸಿಕೊಡುವ ದೃಷ್ಟಿಯಲ್ಲಿ ನೋಡುವುದಾದರೆ, ಎಂಎಸ್ಎಂಇ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ 10 ಸಾವಿರ ಕೋಟಿ.ರೂ. ಮೀಸಲಿಡುತ್ತಿರುವುದರಿಂದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಾಗಲಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಐಐಟಿಗಳಲ್ಲಿ ವ್ಯಾಸಂಗ ಮಾಡಲು ಬಯಸುತ್ತಿರುವುದರಿಂದ 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ಐಐಟಿಗಳನ್ನು ಉನ್ನತೀಕರಿಸಲು ಮುಂದಾಗಿದೆ. ಕೌಶಲ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ರಾಷ್ಟ್ರೀಯ ಶಿಷ್ಯವೃತ್ತಿ ವೇತನ ಮತ್ತು ತರಬೇತಿ ಯೋಜನೆ (ಎನ್ಎಟಿಎಸ್)ಗಾಗಿ 1,178 ಕೋಟಿ ರೂ. ಮೀಸಲಿಟ್ಟಿದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೌಶಲ ಶಿಕ್ಷಣವನ್ನು ಪಡೆಯಲು ಸಹಾಯವಾಗಲಿದೆ. ಒಟ್ಟಾರೆ ಇದು ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಪೂರಕ ಬಜೆಟ್.