supermoon : ನಕ್ಷತ್ರ-ಚಂದ್ರರ ಲೋಕವನ್ನು ಪ್ರೀತಿಸುವ ಆಕಾಶಪ್ರಿಯರಿಗೆ ಬಾನಂಗಳದಲ್ಲಿ ಅಪರೂಪದ ಖಗೋಳ ಕೌತುಕವೊಂದು ಕಾದಿದೆ. ನವೆಂಬರ್ 24ರ ರಾತ್ರಿ ಹುಣ್ಣಿಮೆಯ ಚಂದಮಾಮ ಭೂಮಿಯ ಸನಿಹಕ್ಕೆ ಬರಲಿದ್ದು, ಎಂದಿಗಿಂತ ದೊಡ್ಡದಾಗಿ ಹಾಗೂ ಬೆಳ್ಳಿ ಬೆಳಕಿನೊಂದಿಗೆ ಇನ್ನಷ್ಟು ಪ್ರಕಾಶಮಾನವಾಗಿ ಕಂಗೊಳಿಸಲಿದ್ದಾನೆ. ಖಗೋಳ ವಿಜ್ಞಾನದ ಭಾಷೆಯಲ್ಲಿ ಸೂಪರ್‌ಮೂನ್ (Supermoon) ಎಂದು ಕರೆಯಲ್ಪಡುವ ಈ ಮನಮೋಹಕ ವಿದ್ಯಮಾನ, ಈ ವರ್ಷದ ಜನವರಿಯ ಬಳಿಕ ಬಾನಂಗಳದಲ್ಲಿ ಗೋಚರಿಸುತ್ತಿರುವ ಮೊದಲ ಸೂಪರ್‌ಮೂನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಚಂದ್ರನು ಭೂಮಿಯ ಸುತ್ತ ಅಂಡಾಕಾರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಾನೆ. ಹೀಗಾಗಿ ಭೂಮಿಯಿಂದ ಚಂದ್ರನ ದೂರ ನಿರಂತರವಾಗಿ ಬದಲಾಗುತ್ತಿರುತ್ತದೆ. ಚಂದ್ರನು ಭೂಮಿಗೆ ಅತ್ಯಂತ ಸಮೀಪ ಬರುವ ಹಂತವನ್ನು ಪೆರಿಜಿ (Perigee) ಎಂದು ಕರೆಯಲಾಗುತ್ತದೆ. ಈ ಹಂತದ ಆಸುಪಾಸಿನಲ್ಲಿ ಹುಣ್ಣಿಮೆ ಸಂಭವಿಸಿದಾಗ ಚಂದ್ರನು ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ಸ್ವಲ್ಪ ದೊಡ್ಡದಾಗಿ, ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಈ ವಿದ್ಯಮಾನವೇ ಸೂಪರ್‌ಮೂನ್.
ನವೆಂಬರ್ 24ರಂದು ಭಾರತೀಯ ಕಾಲಮಾನ ರಾತ್ರಿ ಸುಮಾರು 8.23ಕ್ಕೆ ಚಂದ್ರ ಪೂರ್ಣ ಪ್ರಕಾಶಮಾನತೆಯನ್ನು ತಲುಪಲಿದ್ದಾನೆ. ಆದರೆ ಚಂದ್ರನು ಅದಕ್ಕೂ ಮುನ್ನ ಮತ್ತು ನಂತರದ ದಿನಗಳಲ್ಲಿಯೂ ಬಹುತೇಕ ಪೂರ್ಣಚಂದ್ರನಂತೆ ಕಾಣಿಸಲಿದ್ದಾನೆ. ನವೆಂಬರ್ 23, 24 ಮತ್ತು 25ರ ಸಂಜೆ ಚಂದ್ರನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ವಿಶೇಷವಾಗಿ ಸೂರ್ಯಾಸ್ತದ ಸಮಯದಲ್ಲಿ ಪೂರ್ವ ದಿಗಂತದಿಂದ ಚಂದ್ರ ಉದಯಿಸುವ ದೃಶ್ಯ ಮನಮೋಹಕವಾಗಿರಲಿದೆ.
ಇದನ್ನೂ ಓದಿ : ಸೈಕ್ಲೋನ್ ನಿಧಾನವಾದಷ್ಟು ಡೇಂಜರ್ ಜಾಸ್ತಿ! ವಿಜ್ಞಾನ ಹೇಳಿದ ಶಾಕಿಂಗ್ ಸತ್ಯವಿದು | Cyclone Akvan
ಸಾಮಾನ್ಯ ಹುಣ್ಣಿಮೆಯ ಚಂದ್ರನಿಗೆ ಹೋಲಿಸಿದರೆ ಈ ಸೂಪರ್‌ಮೂನ್ ಸುಮಾರು ಶೇ.6ರಿಂದ 7ರಷ್ಟು ದೊಡ್ಡದಾಗಿ ಮತ್ತು ಶೇ.11ರಿಂದ 13ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಬಹುದು ಎಂದು ಖಗೋಳ ಮೂಲಗಳು ಅಂದಾಜಿಸಿವೆ. ಆದರೆ ಈ ವ್ಯತ್ಯಾಸ ಬರಿಗಣ್ಣಿಗೆ ಬಹಳ ಸ್ಪಷ್ಟವಾಗಿ ಗೋಚರಿಸದೇ ಇರಬಹುದು.
ಸೂಪರ್‌ಮೂನ್ ವೀಕ್ಷಿಸಲು ದೂರದರ್ಶಕ ಅಥವಾ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಬೆಳಕಿನ ಮಾಲಿನ್ಯ ಕಡಿಮೆ ಇರುವ ಪ್ರದೇಶದಲ್ಲಿ, ಕಟ್ಟಡಗಳು ಮತ್ತು ಮರಗಳ ಅಡ್ಡಿಯಿಲ್ಲದ ಪೂರ್ವ ದಿಗಂತದತ್ತ ಗಮನ ಹರಿಸಿದರೆ ಚಂದ್ರೋದಯದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಮೋಡಗಳ ಅಡ್ಡಿ ಇಲ್ಲದಿದ್ದರೆ ಬರಿಗಣ್ಣಿನಿಂದಲೇ ಈ ಖಗೋಳ ವಿದ್ಯಮಾನವನ್ನು ಆಸ್ವಾದಿಸಬಹುದು.
ನವೆಂಬರ್‌ನ ಈ ಹುಣ್ಣಿಮೆಯನ್ನು ಸಂಪ್ರದಾಯವಾಗಿ ಬೀವರ್ ಮೂನ್ (Beaver Moon) ಎಂದೂ ಕರೆಯಲಾಗುತ್ತದೆ. ಹೀಗಾಗಿ ಈ ಬಾರಿಯ ಹುಣ್ಣಿಮೆ ಕೇವಲ ಪೂರ್ಣಚಂದ್ರನ ದರ್ಶನವಲ್ಲ; ಸೂಪರ್‌ಮೂನ್‌ನ ವಿಶೇಷತೆಯನ್ನೂ ಒಳಗೊಂಡಿದೆ.