ದಾದಾ ನಿಧನದ ಬಳಿಕ ಎನ್‌ಸಿಪಿ ಹೈ-ವೋಲ್ಟೇಜ್ ಮೂವ್.. ತಾಯಿ ಬಾರಾಮತಿ ಅಭ್ಯರ್ಥಿ, ಮಗನಿಗೆ ರಾಜ್ಯಸಭೆ ಟಿಕೆಟ್ ಭಾಗ್ಯ! | Baramati By Election

 Baramati By Election | ಹಾಲಿ ಡಿಸಿಎಂ ಸುನೇತ್ರಾ ಪವಾರ್​​ ಮತ್ತು ಪುತ್ರ ಪಾರ್ಥ್ ಪವಾರ್
Baramati By Election | ಹಾಲಿ ಡಿಸಿಎಂ ಸುನೇತ್ರಾ ಪವಾರ್​​ ಮತ್ತು ಪುತ್ರ ಪಾರ್ಥ್ ಪವಾರ್
Published on

ಪ್ರಮುಖ ಮುಖ್ಯಾಂಶಗಳು

  • ಅಜಿತ್ ಪವಾರ್ ನಿಧನದಿಂದ ತೆರವಾದ ಬಾರಾಮತಿ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ.
  • ಎನ್‌ಸಿಪಿ ಅಭ್ಯರ್ಥಿಯಾಗಿ ಸುನೇತ್ರಾ ಪವಾರ್ ಹೆಸರು ಅಂತಿಮ.
  • ಪವಾರ್ ಕುಟುಂಬದ ಕೋಟೆಯನ್ನು ಉಳಿಸಿಕೊಳ್ಳಲು ಎನ್‌ಸಿಪಿಯಿಂದ ಭರ್ಜರಿ ತಂತ್ರಗಾರಿಕೆ.
ಪುಣೆ: ಮಹಾರಾಷ್ಟ್ರ ಮಾಜಿ ಉಪಮುಖ್ಯಮಂತ್ರಿ, ದಿವಂಗತ ಅಜಿತ್​ ಪವಾರ್​ ನಿಧನದಿಂದ ತೆರವಾಗಿರುವ ಬಾರಾಮತಿ ಕ್ಷೇತ್ರದ ಉಪಚುನಾವಣೆಗೆ ( Baramati By Election) ಅವರ ಪತ್ನಿ, ಹಾಲಿ ಡಿಸಿಎಂ ಸುನೇತ್ರಾ ಪವಾರ್​​ರನ್ನು ಎನ್‌ಸಿಪಿ ತನ್ನ ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
ಮಂಗಳವಾರ ನಡೆದ ಪ್ರಮುಖ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾರ್ಥ ಪವಾರ್ ರಾಜ್ಯಸಭೆಗೆ ನಾಮನಿರ್ದೇಶನ

ಅಜಿತ್​ ದಾದಾ ಪುತ್ರ ಪಾರ್ಥ್ ಪವಾರ್​ರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಇದೇ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎನ್ನಲಾಗಿದ್ದು, ಮಹಾರಾಷ್ಟ್ರದಲ್ಲಿ ಖಾಲಿ ಇರುವ ಏಳು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಯಲಿದೆ.

ಎನ್‌ಸಿಪಿ ಅಧ್ಯಕ್ಷೆಯಾಗಿ ಸುನೇತ್ರಾ ಪವಾರ್ ಆಯ್ಕೆ

ಎನ್‌ಸಿಪಿ ಗುರುವಾರ (ಫೆಬ್ರವರಿ 26) ತನ್ನ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದು, ಇಂದು ಸಂಜೆ ಮುಂಬೈನ ವರ್ಲಿ ಡೋಮ್‌ನಲ್ಲಿ ಚುನಾವಣೆ ನಡೆಯಲಿದೆ, ಪಕ್ಷದ ಶಾಸಕರು, ಸಂಸದರು ಮತ್ತು ಹಿರಿಯ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿದುಬಂದಿದೆ.
ಸುನೇತ್ರಾ ಪವಾರ್ ಅವರನ್ನೇ ರಾಷ್ಟ್ರೀಯ ಅಧ್ಯಕ್ಷೆಯಾಗಿ ಅನುಮೋದಿಸಲಾಗುವುದು ಎಂದು ಪಕ್ಷದ ಮೂಲಗಳು ದೃಢಪಡಿಸಿದ್ದು, ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ನಂತರ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ಆಯ್ಕೆಯೇ ಸೂಕ್ತ ಎನ್ನುವುದು ಹಿರಿಯ ನಾಯಕರ ಅಭಿಪ್ರಾಯ.
ಸುನೇತ್ರಾ ಪವಾರ್ ಪ್ರಸ್ತುತ ಮಹಾರಾಷ್ಟ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಶಾಸಕಾಂಗ ಪಕ್ಷದ ನಾಯಕಿಯೂ ಆಗಿದ್ದಾರೆ.
2024 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಅಜಿತ್ ದಾದಾ ತಮ್ಮ ಸಂಬಂಧಿ, ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಯುಗೇಂದ್ರ ಪವಾರ್​​ರನ್ನು 1,00,899 ಮತಗಳಿಂದ ಸೋಲಿಸಿದರು. ಅಜಿತ್​ ಪವಾರ್​ 1.81.132 ಮತಗಳನ್ನು ಪಡೆದರೆ, ಯುಗೇಂದ್ರ 80.233 ಮತಗಳನ್ನು ಗಳಿಸಿ ಸೋಲನುಭವಿಸಿದರು.

ಅಜಿತ್ ಪವಾರ್ ನಿಧನ

ಜನವರಿ 28 ರಂದು ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದಾಗ ಚಾರ್ಟರ್ಡ್ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದರು. ಆರು ಅವಧಿಗೆ ಡಿಸಿಎಂ ಆಗಿ ಸೇವೆ ಸಲ್ಲಿಸಿರುವ ಪವಾರ್​, ಪೃಥ್ವಿರಾಜ್ ಚೌಹಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಸಂಪುಟಗಳಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net