ಅಜಿತ್ ಪವಾರ್ ಅಪಘಾತ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​..ಸಿಎಂ ಫಡ್ನವೀಸ್‌ರನ್ನು ಭೇಟಿಯಾದ ಸುನೇತ್ರಾ ಪವಾರ್ | Sunetra Pawar

Sunetra Pawar | ಸಿಎಂ ಫಡ್ನವೀಸ್‌ರನ್ನು ಭೇಟಿಯಾದ ಸುನೇತ್ರಾ ಪವಾರ್
Sunetra Pawar | ಸಿಎಂ ಫಡ್ನವೀಸ್‌ರನ್ನು ಭೇಟಿಯಾದ ಸುನೇತ್ರಾ ಪವಾರ್
Published on
ಮುಂಬೈ: ಇತ್ತೀಚೆಗೆ ವಿಮಾನ ದುರಂತದಲ್ಲಿ ಕೊನೆಯುಸಿರೆಳೆದ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವಹಿಸಬೇಕೆಂದು ಡಿಸಿಎಂ ಸುನೇತ್ರಾ ಪವಾರ್ (Sunetra Pawar)​ ನೇತೃತ್ವದ ಎನ್​ಸಿಪಿ ನಿಯೋಗ ಒತ್ತಾಯಿಸಿದೆ.
ಇಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​​ರನ್ನು ಭೇಟಿ ಮಾಡಿದ ಈ ನಿಯೋಗ, ಘಟನೆಯ ಸಮಗ್ರ ಮತ್ತು ಸ್ವತಂತ್ರ ತನಿಖೆಗೆ ಒತ್ತಾಯಿಸಿದರು.

ಸಿಎಂ ದೇವೇಂದ್ರ ಫಡ್ನವೀಸ್​​ರನ್ನು ಭೇಟಿ ಮಾಡಿದ ಸುನೇತ್ರಾ ಪವಾರ್

ಸಿಎಂ ಜೊತೆಗಿನ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್‌ಸಿಪಿ (ಅಜಿತ್ ಪವಾರ್ ಬಣ) ಅಧ್ಯಕ್ಷ ಸುನಿಲ್ ತತ್ಕರೆ, ಘಟನೆಯ ಸಂಪೂರ್ಣ ತನಿಖೆಯನ್ನು ಸಿಬಿಐಗೆ ನೀಡುವಂತೆ ನಾವು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದು, ಇದನ್ನು ಕೇಂದ್ರ ಗೃಹ ಸಚಿವ ಅಮಿತ್​ ಷಾರಿಗೆ ಪತ್ರ ಬರೆದು, ಸಿಬಿಐ ತನಿಖೆ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಹೇಳಿದರು.

ಪ್ರಾಥಮಿಕ ತನಿಖೆ

ಈಗಾಗಲೇ ಘಟನೆಯ ತನಿಖೆ ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ), ವಿಮಾನದಲ್ಲಿದ್ದ ಎರಡೂ ರೆಕಾರ್ಡರ್‌ಗಳು ಬೆಂಕಿಯಲ್ಲಿ ನಾಶವಾಗಿವೆ ಎಂದು ಬಹಿರಂಗಪಡಿಸಿದೆ.
ಈ ತನಿಖೆಯನ್ನು ಸ್ಥಾಪಿತ ನಿಯಮಗಳು ಮತ್ತು ಅಂತರರಾಷ್ಟ್ರೀಯ ವಾಯುಯಾನ ಮಾನದಂಡಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ ಎಂದು ಎಎಐಬಿ ತಿಳಿಸಿದ್ದು, ಇದು ಸಂಪೂರ್ಣವಾಗಿ ನಿಷ್ಪಕ್ಷಪಾತ ಮತ್ತು ಪುರಾವೆ ಆಧಾರಿತವಾಗಿರುತ್ತದೆ ಎಂದು ಸಂಸ್ಥೆ ಹೇಳಿದೆ.

ಅಜಿತ್ ಪವಾರ್ ನಿಧನ

ಜನವರಿ 28 ರಂದು ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದಾಗ ಚಾರ್ಟರ್ಡ್ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದರು. ಆರು ಅವಧಿಗೆ ಡಿಸಿಎಂ ಆಗಿ ಸೇವೆ ಸಲ್ಲಿಸಿರುವ ಪವಾರ್​, ಪೃಥ್ವಿರಾಜ್ ಚೌಹಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಸಂಪುಟಗಳಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net