ಸುಂದರ್ ಪಿಚೈ ಕೈ ಸೇರಿದ ಬಿಗ್ ಪ್ಯಾಕೇಜ್: Google ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತ ಯಾರೂ ಪಡೆದಿಲ್ಲ!

Google CEO Sundar Pichai
Google CEO Sundar Pichai
Published on

ಪ್ರಮುಖ ಮುಖ್ಯಾಂಶಗಳು

  • ಸುಂದರ್ ಪಿಚೈ ಅವರ ಒಟ್ಟು ಸಂಭಾವನೆ 63,000 ಕೋಟಿ ರೂಪಾಯಿಗೆ ಏರಿಕೆ.
  • ಗೂಗಲ್ ಮಾರುಕಟ್ಟೆ ಮೌಲ್ಯವನ್ನು 7 ಪಟ್ಟು ಹೆಚ್ಚಿಸಿದ ಕೀರ್ತಿ ಪಿಚೈ ಅವರಿಗೆ ಸಲ್ಲುತ್ತದೆ.
  • ಜಾಗತಿಕ ಮಟ್ಟದ ಟೆಕ್ ಸಿಇಒಗಳ ಪಟ್ಟಿಯಲ್ಲಿ ಪಿಚೈ ಈಗ 'ನಂಬರ್ ಒನ್' ಶ್ರೀಮಂತ ಎಕ್ಸಿಕ್ಯೂಟಿವ್.
ನವದೆಹಲಿ: ತಂತ್ರಜ್ಞಾನ ಲೋಕದ ದೈತ್ಯ ಸಂಸ್ಥೆ ಗೂಗಲ್‌ನ(Google)ಸಿಇಒ, ಭಾರತೀಯ ಮೂಲದ ಸುಂದರ್ ಪಿಚೈ ಅವರ ವೇತನ ಪ್ಯಾಕೇಜ್ ಕೇಳಿದರೆ ಯಾರೇ ಆದರೂ ದಂಗಾಗುವುದು ಗ್ಯಾರಂಟಿ!
ಹೌದು, ಗೂಗಲ್‌ನ ಮಾತೃ ಸಂಸ್ಥೆಯಾದ 'ಅಲ್ಪಾಬೆಟ್' (Alphabet), ಮುಂದಿನ ಮೂರು ವರ್ಷಗಳ ಅವಧಿಗೆ ಸುಂದರ್ ಪಿಚೈ ಅವರಿಗೆ ನೀಡಲಿರುವ ಒಟ್ಟು ಸಂಭಾವನೆಯನ್ನು ಬರೋಬ್ಬರಿ 692 ಮಿಲಿಯನ್ ಡಾಲರ್ (ಅಂದಾಜು 63,617 ಕೋಟಿ ರೂಪಾಯಿ) ಗೆ ಏರಿಕೆ ಮಾಡಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ಈ ಮೂಲಕ ಸುಂದರ್ ಪಿಚೈ ಅವರು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಯನಿರ್ವಾಹಕ ಅಧಿಕಾರಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಸುಂದರ್ ಪಿಚೈ ಅವರಿಗೆ ಸಿಗಲಿರುವ ಈ 63 ಸಾವಿರ ಕೋಟಿ ರೂಪಾಯಿ ಕೇವಲ ನಗದು ರೂಪದಲ್ಲಿ ಇರುವುದಿಲ್ಲ. ಇದರ ವಿಭಜನೆ ಹೀಗಿದೆ.ಷೇರುಗಳ ಪಾಲು: ಸುಮಾರು 126 ಮಿಲಿಯನ್ ಡಾಲರ್ ಮೌಲ್ಯದ 'ಪರ್ಫಾರ್ಮೆನ್ಸ್ ಸ್ಟಾಕ್ ಯೂನಿಟ್ಸ್' (PSU) ಇವರಿಗೆ ಸಿಗಲಿದೆ. ಕಂಪನಿಯ ಗುರಿಗಳನ್ನು ಮೀರಿದರೆ ಈ ಮೊತ್ತವು 252 ಮಿಲಿಯನ್ ಡಾಲರ್‌ಗೆ ದ್ವಿಗುಣಗೊಳ್ಳುವ ಸಾಧ್ಯತೆಯೂ ಇದೆ. ಸ್ಥಿರ ಸಂಬಳ: ಇಷ್ಟೆಲ್ಲಾ ಕೋಟಿಗಳ ನಡುವೆ ಪಿಚೈ ಅವರ ವಾರ್ಷಿಕ ಮೂಲ ಸಂಬಳ 2 ಮಿಲಿಯನ್ ಡಾಲರ್ (ಸುಮಾರು 18 ಕೋಟಿ ರೂ.). ಹೊಸ ಇನ್ಸೆಂಟಿವ್ಸ್: ಅಲ್ಪಾಬೆಟ್ ಸಂಸ್ಥೆಯ ಸ್ವಯಂಚಾಲಿತ ವಾಹನಗಳ ವಿಭಾಗವಾದ 'ವೇಮೋ' (Waymo) ಮತ್ತು 'ವಿಂಗ್ ಏವಿಯೇಷನ್' (Wing Aviation) ಬೆಳವಣಿಗೆಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ 350 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ನೀಡಲಾಗಿದೆ.

ಪಿಚೈ ನಾಯಕತ್ವದಲ್ಲಿ ಗೂಗಲ್ ಸಾಧನೆ

2015ರ ಆಗಸ್ಟ್‌ನಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸುಂದರ್ ಪಿಚೈ ಗೂಗಲ್ ಅನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದ್ದಾರೆ.ಇವರು ಅಧಿಕಾರ ವಹಿಸಿಕೊಂಡಾಗ ಗೂಗಲ್‌ನ ಮಾರುಕಟ್ಟೆ ಮೌಲ್ಯ 535 ಬಿಲಿಯನ್ ಡಾಲರ್ ಇತ್ತು.ಇಂದು ಅದು 3.6 ಟ್ರಿಲಿಯನ್ ಡಾಲರ್ (ಸುಮಾರು 300 ಲಕ್ಷ ಕೋಟಿ ರೂ.) ಗೆ ತಲುಪಿದೆ!.ಕಳೆದ ಜನವರಿಯಲ್ಲಿ ಕಂಪನಿಯ ಮೌಲ್ಯ 4 ಟ್ರಿಲಿಯನ್ ಡಾಲರ್ ಗಡಿ ದಾಟಿ ಇತಿಹಾಸ ನಿರ್ಮಿಸಿತ್ತು. ಅಲ್ಪಾಬೆಟ್ ಮಂಡಳಿಯು ಪಿಚೈ ಅವರ ದೂರದೃಷ್ಟಿ ಮತ್ತು ನಾಯಕತ್ವದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿದೆ.

ಇತರ ಸಿಇಒಗಳ ವೇತನದೊಂದಿಗೆ ಹೋಲಿಕೆ

ಸತ್ಯ ನಡೆಲ್ಲಾ (ಮೈಕ್ರೋಸಾಫ್ಟ್): 96.5 ಮಿಲಿಯನ್ ಡಾಲರ್.
ಟಿಮ್ ಕುಕ್ (ಆಪಲ್): 74.3 ಮಿಲಿಯನ್ ಡಾಲರ್.
ಸುಂದರ್ ಪಿಚೈ (ಗೂಗಲ್): 692 ಮಿಲಿಯನ್ ಡಾಲರ್ (ಮೂರು ವರ್ಷಗಳ ಸಂಚಿತ ಮೊತ್ತ),(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net