

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಆತ್ಮಹತ್ಯೆಗೆ ಸಂಬಂಧಿಸಿದ ಪೋಸ್ಟ್ಗಳನ್ನು ಗುರುತಿಸಿ ಮಾಹಿತಿ ನೀಡುವ ಸಲುವಾಗಿ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಮತ್ತು ಮೆಟಾ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ. 2023ರಿಂದ ಇಲ್ಲಿಯವರೆಗೆ 3,011 ಜನರ ಪ್ರಾಣವನ್ನು ಉಳಿಸಲಾಗಿದೆ. ಇತ್ತೀಚೆಗಷ್ಟೇ 25 ವರ್ಷದ ಯುವಕನನ್ನು ಎಂಟು ನಿಮಿಷಗಳಲ್ಲೇ ರಕ್ಷಿಸಲಾಗಿದೆ. ತಂತ್ರಜ್ಞಾನವನ್ನು ಸಂವೇದನಾಸ್ನೇಹಿಯಾಗಿ ಬಳಸಿದರೆ ಹೇಗೆ ಜನರ ಪ್ರಾಣವನ್ನೂ ಉಳಿಸಬಹುದು ಎಂಬುದಕ್ಕೆ ಈ ಪ್ರಯತ್ನ ನಿದರ್ಶನವಾಗಿದೆ. ಮೆಟಾ ನೀಡುವ ಎಚ್ಚರಿಕೆ ಹಾಗೂ ಪೊಲೀಸರ ತಕ್ಷಣದ ಕ್ರಮ ಹೇಗೆ ಹೊಸ ಭರವಸೆಯನ್ನು ಹುಟ್ಟಿಸಿದೆ ಎಂಬುದರ ವಿವರ ಇಲ್ಲಿದೆ.
ಸಾಮಾಜಿಕ ಜಾಲತಾಣಗಳು ಮನರಂಜನೆ ಅಥವಾ ಮಾಹಿತಿ ವಿನಿಮಯದ ವೇದಿಕೆಗಳಷ್ಟೇ ಅಲ್ಲ, ಸರಿಯಾದ ನಿಟ್ಟಿನಲ್ಲಿ ಬಳಸಿದರೆ ಅವು ಜನರ ಜೀವ ಉಳಿಸುವ ಸಂಜೀವಿನಿಯಾಗಬಲ್ಲವು ಎಂಬುದಕ್ಕೆ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಹಾಗೂ ಮೆಟಾ ಸಂಸ್ಥೆಯ ನಡುವಿನ ಒಪ್ಪಂದವೇ ಸಾಕ್ಷಿ. ತಂತ್ರಜ್ಞಾನದ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಾನವೀಯ ಸಂವೇದನೆ ಒಂದಾದರೆ ಎಂತಹ ಅದ್ಭುತಗಳನ್ನು ಸೃಷ್ಟಿಸಬಹುದು ಎಂಬುದನ್ನು ಈ ಜಂಟಿ ಕಾರ್ಯಾಚರಣೆ ಸಾಬೀತುಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವ ಪ್ರತಿಯೊಂದು ಪೋಸ್ಟ್, ವಿಡಿಯೋ ಅಥವಾ ಸ್ಟೇಟಸ್ಗಳ ಹಿಂದೆ ವ್ಯಕ್ತಿಯೊಬ್ಬನ ಮಾನಸಿಕ ಸ್ಥಿತಿ ಅಡಗಿರುತ್ತದೆ. ಕೆಲವೊಮ್ಮೆ ತೀವ್ರ ನಿರಾಸೆ, ಖಿನ್ನತೆಯಿಂದ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುವ ವ್ಯಕ್ತಿಗಳು ತಮ್ಮ ಕೊನೆಯ ಕ್ಷಣಗಳಲ್ಲಿ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುವುದುಂಟು. ಇಂತಹ ಸೂಕ್ಷ್ಮ ಸಂಕೇತಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ, ತಕ್ಷಣ ಸ್ಪಂದಿಸುವ ಮೂಲಕ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಮತ್ತು ಫೇಸ್ಬುಕ್-ಇನ್ಸ್ಟಾಗ್ರಾಮ್ ಮಾಲೀಕತ್ವ ಹೊಂದಿರುವ ಮೆಟಾ ಸಂಸ್ಥೆ ಹೊಸದೊಂದು ಭರವಸೆಯ ಹೆಜ್ಜೆ ಇಟ್ಟಿವೆ.
ಈ ಜಂಟಿ ಸಮನ್ವಯ ವ್ಯವಸ್ಥೆಯು 2022ರಲ್ಲಿ ಆರಂಭವಾಗಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2023ರ ಜನವರಿ 1ರಿಂದ 2026ರ ಜೂನ್ 8ರವರೆಗಿನ ಅವಧಿಯಲ್ಲಿ ಈ ತಂತ್ರಜ್ಞಾನದ ನೆರವಿನಿಂದ ಬರೋಬ್ಬರಿ 3,011 ಜನರ ಪ್ರಾಣವನ್ನು ಉಳಿಸಲಾಗಿದೆ. ಅಂದರೆ, ಕಳೆದ ಮೂರೂವರೆ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಸರಾಸರಿ ಪ್ರತಿದಿನ ಒಂದು ಜೀವವನ್ನು ಈ ವ್ಯವಸ್ಥೆ ಸಾವಿನ ಮುಖದಿಂದ ವಾಪಸ್ ಕರೆತಂದಿದೆ.
ಜೂನ್ 7, ಸಂಜೆ 6:53: ಉತ್ತರಪ್ರದೇಶದ ಮೀರತ್ ಜಿಲ್ಲೆಯ ಸರ್ಧನಾ ಪ್ರದೇಶದಲ್ಲಿ 25 ವರ್ಷದ ಯುವಕನೊಬ್ಬ ಪ್ರೇಮವೈಫಲ್ಯದ ಖಿನ್ನತೆಯಿಂದಾಗಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ. ಅದರಲ್ಲಿ ಆತ ಬಿಳಿ ಬಣ್ಣದ ದ್ರವ ಪದಾರ್ಥವನ್ನು ಸೇವಿಸುತ್ತ, ‘ಇನ್ಮೇಲಾದರೂ ನಿನ್ನ ಲೈಫ್ನಲ್ಲಿ ನೀನು ಖುಷಿಯಾಗಿರು’ ಎಂಬ ಅರ್ಥದ ಶೀರ್ಷಿಕೆಯನ್ನು ಹಾಕಿದ್ದ.
ತಕ್ಷಣದ ಅಲರ್ಟ್: ಈ ಪೋಸ್ಟ್ ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಮೆಟಾ ಸಂಸ್ಥೆಯ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಯು ಇದನ್ನು ‘ಆತ್ಮಹತ್ಯೆಯ ಅಪಾಯದ ಪೋಸ್ಟ್’ ಎಂದು ಸ್ವಯಂಚಾಲಿತವಾಗಿ ಗುರುತಿಸಿತು. ತಕ್ಷಣವೇ ಆ ಯುವಕನ ಮೊಬೈಲ್ ಫೋನ್ ಸಂಖ್ಯೆ ಮತ್ತು ಲೊಕೇಶನ್ ವಿವರಗಳೊಂದಿಗೆ ಉತ್ತರ ಪ್ರದೇಶ ಪೊಲೀಸ್ ಪ್ರಧಾನ ಕಚೇರಿಯ ಸೋಶಿಯಲ್ ಮೀಡಿಯಾ ಸೆಂಟರ್ಗೆ ತುರ್ತು ಅಲರ್ಟ್ ರವಾನಿಸಿತು.
7:01ಕ್ಕೆ ರಕ್ಷಣೆ: ಪೊಲೀಸ್ ಮಹಾನಿರ್ದೇಶಕರ ಸೂಚನೆಯ ಮೇರೆಗೆ ಮೀರತ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಅಲರ್ಟ್ ಬಂದ ಕೇವಲ ಎಂಟೇ ನಿಮಿಷಗಳಲ್ಲಿ ಸ್ಥಳೀಯ ಪೊಲೀಸರು ಯುವಕನ ಮನೆಗೆ ತಲುಪಿದರು. ಅಷ್ಟರಲ್ಲಾಗಲೇ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಕುಟುಂಬಸ್ಥರ ನೆರವಿನಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಪ್ರಾಣಾಪಾಯದಿಂದ ಪಾರು ಮಾಡಲಾಯಿತು. ಬಳಿಕ ಆತನಿಗೆ ಹಾಗೂ ಆತನ ಕುಟುಂಬಕ್ಕೆ ಸೂಕ್ತ ಕೌನ್ಸೆಲಿಂಗ್ ಕೂಡ ನೀಡಲಾಗಿದೆ.
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳು ಕೇವಲ ದ್ವೇಷ ಭಾಷಣ, ನಕಲಿ ಸುದ್ದಿ ಅಥವಾ ವ್ಯಸನವನ್ನು ಹೆಚ್ಚಿಸುತ್ತವೆ ಎಂಬ ಟೀಕೆಗಳಿರುತ್ತವೆ. ಆದರೆ, ಈ ಘಟನೆಯು ತಂತ್ರಜ್ಞಾನವನ್ನು ಮಾನವೀಯತೆಯ ದೃಷ್ಟಿಯಿಂದ ಬಳಸಿಕೊಂಡರೆ ಅದು ಸಮಾಜದ ದೊಡ್ಡ ರಕ್ಷಾಕವಚವಾಗಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ. ಮೆಟಾ ಸಂಸ್ಥೆಯ ಎಐ ಮಾದರಿ ಯಾವುದೇ ದೂರು ಅಥವಾ ಯಾರದೋ ಕರೆಯ ನಿರೀಕ್ಷೆ ಮಾಡದೆ, ತಾನಾಗಿಯೇ ಅಪಾಯವನ್ನು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡುತ್ತದೆ. ಪೊಲೀಸರು ಸಹ ಇದನ್ನು ಕೇವಲ ಇಲಾಖೆಯ ಕೆಲಸವೆಂದು ನೋಡದೆ, ಜೀವ ಉಳಿಸುವ ಪರಮ ಕರ್ತವ್ಯವೆಂದು ಭಾವಿಸಿ ಕೂಡಲೇ ಸ್ಪಂದಿಸುತ್ತಿದ್ದಾರೆ.
ಖಿನ್ನತೆ ಮತ್ತು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದಾಗ ಯಾರಿಗಾದರೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವೇದಿಕೆ ಬೇಕಿರುತ್ತದೆ. ಇಂತಹ ಸಂದರ್ಭದಲ್ಲಿ ಡಿಜಿಟಲ್ ಜಗತ್ತಿನಲ್ಲಿ ಮೂಡುವ ಆರ್ತನಾದವನ್ನು ಗುರುತಿಸಿ, ನಿಜವಾದ ಜಗತ್ತಿನಲ್ಲಿ ಬಂದು ಕೈಹಿಡಿಯುವ ಈ ವ್ಯವಸ್ಥೆಯು ಇಡೀ ದೇಶದ ಇತರ ರಾಜ್ಯಗಳ ಪೊಲೀಸ್ ಇಲಾಖೆಗಳಿಗೂ ಅತ್ಯುತ್ತಮ ಮಾದರಿಯಾಗಿದೆ.
ಈ ತಂತ್ರಜ್ಞಾನದಲ್ಲಿ ಮುಖ್ಯವಾದ ಸವಾಲೆಂದರೆ ವೈಯಕ್ತಿಕ ಗೌಪ್ಯತೆ. ಆದರೆ, ಜೀವ ಉಳಿಸುವ ಇಂತಹ ತುರ್ತು ಸಂದರ್ಭಗಳಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ತಕ್ಷಣವೇ ಲೊಕೇಶನ್ ಹಂಚಿಕೊಳ್ಳಲು ಮೆಟಾ ಸೇರಿದಂತೆ ಜಾಗತಿಕ ಸಂಸ್ಥೆಗಳು ವಿಶೇಷ ವಿನಾಯಿತಿ ಮತ್ತು ಆದ್ಯತೆಯನ್ನು ನೀಡಿವೆ. ಭಾರತದಾದ್ಯಂತ ಈ ಡಿಜಿಟಲ್ ಸುರಕ್ಷಾ ಜಾಲವು ವಿಸ್ತರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ರಾಜ್ಯಗಳ ಪೊಲೀಸ್ ಕಂಟ್ರೋಲ್ ರೂಮನ್ನು ಇಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ನೇರವಾಗಿ ಜೋಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.
ಉತ್ತರ ಪ್ರದೇಶದ ಮಾದರಿಯಲ್ಲೇ ಭಾರತದ ಇತರ ರಾಜ್ಯಗಳಲ್ಲೂ ಆತ್ಮಹತ್ಯೆ ತಡೆಗಾಗಿ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗಾಗಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಮಾತ್ರವಲ್ಲದೆ, ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳು ಹಾಗೂ ಆರೋಗ್ಯ ಇಲಾಖೆಗಳು ಜಿಪಿಎಸ್ ಟ್ರಾ್ಯಕಿಂಗ್ ಮತ್ತು ಅತ್ಯಾಧುನಿಕ ಸಹಾಯವಾಣಿಗಳನ್ನು ಅಳವಡಿಸಿಕೊಂಡಿವೆ.
ತೆಲಂಗಾಣ: ‘ತೆಲಂಗಾಣ ಸ್ಟೇಟ್ ಸೈಬರ್ ಸೆಕ್ಯೂರಿಟಿ ಬ್ಯೂರೋ’ (ಟಿಜಿಸಿಎಸ್ಬಿ) ಇತ್ತೀಚಿನ ದಿನಗಳಲ್ಲಿ ವೇಗವಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಕಾರ್ಯವೈಖರಿ: ಮೆಟಾ ಸಂಸ್ಥೆಯ ಎಐ ಅಲ್ಗಾರಿದಮ್ ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ನಲ್ಲಿ ಕೀವರ್ಡ್ಗಳನ್ನಷ್ಟೇ ಅಲ್ಲದೆ, ವಿಡಿಯೋದಲ್ಲಿರುವ ದನಿ, ಹಾವಭಾವ ಹಾಗೂ ಬಳಕೆದಾರರ ಹಿಂದಿನ ಆನ್ಲೈನ್ ನಡವಳಿಕೆಯನ್ನು ವಿಶ್ಲೇಷಿಸಿ ತಕ್ಷಣವೇ ಸೈಬರ್ ಪೊಲೀಸರಿಗೆ ಮಾಹಿತಿಯನ್ನು ರವಾನಿಸುತ್ತವೆ.
ಫಲಿತಾಂಶ: ತೆಲಂಗಾಣದಲ್ಲಿ ಇತ್ತೀಚಿನ ಕೇವಲ 5 ತಿಂಗಳ ಅವಧಿಯಲ್ಲಿ 106 ಜೀವಗಳನ್ನು ರಕ್ಷಿಸಲಾಗಿದೆ. ವಾರಕ್ಕೆ ಸರಾಸರಿ 2ರಿಂದ 3 ಇಂತಹ ತುರ್ತು ಅಲರ್ಟ್ಗಳು ಪೊಲೀಸರಿಗೆ ತಲುಪುತ್ತಿದ್ದು, ವಾರಂಗಲ್ ಮತ್ತು ಮಹಬೂಬ್ನಗರದಲ್ಲಿ ವಿಷ ಸೇವಿಸಲು ಯತ್ನಿಸಿದ ಯುವಕರನ್ನು ಜಿಪಿಎಸ್ ಸಹಾಯದಿಂದ ನಿಮಿಷಗಳಲ್ಲೇ ಪತ್ತೆಹಚ್ಚಿ ಬದುಕಿಸಲಾಗಿದೆ.
ಗೂಗಲ್ ಜೊತೆಗೂಡಿ ಈ ಮಹಾನಗರಗಳ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಯಾರಾದರೂ ಇಂಟರ್ನೆಟ್ನಲ್ಲಿ ‘ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ?’ ‘ಆತ್ಮಹತ್ಯಗೆ ಸರಳ ವಿಧಾನಗಳು ಯಾವವು?’ ಅಥವಾ ‘ವಿಷ ಎಲ್ಲಿ ಸಿಗುತ್ತದೆ?’ ಎಂದು ಸರ್ಚ್ ಮಾಡಿದರೆ, ಗೂಗಲ್ ತನ್ನ ಸರ್ಚ್ ರಿಸಲ್ಟ್ಗಳ ಮೇಲ್ಭಾಗದಲ್ಲೇ ಉಚಿತ ರಾಷ್ಟ್ರೀಯ ಸಹಾಯವಾಣಿಗಳು ಮತ್ತು ಸ್ಥಳೀಯ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸುತ್ತದೆ. ಮುಂಬೈ ಪೊಲೀಸರ ಸೈಬರ್ ಸೆಲ್, ಲೈವ್ ಸ್ಟ್ರೀಮಿಂಗ್ ವೇಳೆ ಹಾನಿ ಮಾಡಿಕೊಳ್ಳುವವರನ್ನು ಪತ್ತೆಹಚ್ಚಲು ಪ್ರತ್ಯೇಕ ಸಾಫ್ಟ್ವೇರ್ ಬಳಸುತ್ತಿದೆ.
ಕರ್ನಾಟಕ: ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ತಂತ್ರಜ್ಞಾನವನ್ನು ಕೌನ್ಸೆಲಿಂಗ್ ಮತ್ತು ಡೇಟಾ ಬೇಸ್ ನಿರ್ವಹಣೆಗೆ ಹೆಚ್ಚಾಗಿ ಬಳಸಿಕೊಳ್ಳುತ್ತಿದೆ.
ಇ-ಮಾನಸ್: ಇದು ಕರ್ನಾಟಕ ಸರ್ಕಾರದ ಡಿಜಿಟಲ್ ಮಾನಸಿಕ ಆರೋಗ್ಯ ವೇದಿಕೆಯಾಗಿದೆ. ಇದರ ಮೂಲಕ ರಾಜ್ಯದಾದ್ಯಂತ ಇರುವ ಮಾನಸಿಕ ರೋಗಿಗಳ ಮತ್ತು ಖಿನ್ನತೆಯಿಂದ ಬಳಲುತ್ತಿರುವವರ ಕೇಸ್ ಹಿಸ್ಟರಿಯನ್ನು ಡಿಜಿಟಲೈಸ್ ಮಾಡಲಾಗುತ್ತದೆ. ಇದು ಯಾರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂಬುದನ್ನು ಮುನ್ಸೂಚನೆ ನೀಡಲು ವೈದ್ಯರಿಗೆ ನೆರವಾಗುತ್ತದೆ.
ಟೆಲಿ-ಮಾನಸ್: ನಿಮ್ಹಾನ್ಸ್ ಸಂಸ್ಥೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಟೆಲಿ-ಮಾನಸ್ ಹೆಲ್ಪ್ಲೈನ್ (14416) ಕರ್ನಾಟಕದಲ್ಲಿ ಸಕ್ರಿಯವಾಗಿದೆ. ಇಲ್ಲಿಗೆ ಬರುವ ಕರೆಗಳನ್ನು ಸ್ವಯಂಚಾಲಿತವಾಗಿ ವಿಂಗಡಿಸಲು ಮತ್ತು ಕರೆ ಮಾಡುವವರ ಧ್ವನಿಯ ತೀವ್ರತೆಯ ಆಧಾರದ ಮೇಲೆ ತುರ್ತು ಪರಿಸ್ಥಿತಿಯನ್ನು ಗುರುತಿಸಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಕೇರಳ: ಕೇರಳ ಪೊಲೀಸರ ಅತ್ಯಾಧುನಿಕ ತಾಂತ್ರಿಕ ಸಂಶೋಧನಾ ಕೇಂದ್ರವಾದ ‘ಸೈಬರ್ ಡೋಮ್ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸೈಬರ್ ಡೋಮ್ ತಂತ್ರಜ್ಞಾನವು ಇಂಟರ್ನೆಟ್ನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಗ್ರೂಪ್ಗಳು, ಚಾಟ್ ರೂಮ್ಳು ಅಥವಾ ಡಾರ್ಕ್ ವೆಬ್ ಪುಟಗಳನ್ನು ನಿರಂತರವಾಗಿ ಸ್ಕಾ್ಯನ್ ಮಾಡುತ್ತದೆ. ಯಾರಾದರೂ ಅತಿಹೆಚ್ಚು ಖಿನ್ನತೆಯ ಪೋಸ್ಟ್ಗಳನ್ನು ಹಾಕುತ್ತಿದ್ದರೆ ಅವರ ಐಪಿ ಅಡ್ರೆಸ್ ಮೂಲಕ ಸ್ಥಳವನ್ನು ಪತ್ತೆಹಚ್ಚಿ ಸ್ಥಳೀಯ ಕೌನ್ಸೆಲರ್ಗಳಿಗೆ ಮಾಹಿತಿ ನೀಡಲಾಗುತ್ತದೆ.