ಬಂಡಾಯ ಬಣ ಸೇರಿದ ಹಿರಿಯ ನಾಯಕ ಸುದೀಪ್ ಬಂಡೋಪಾಧ್ಯಾಯ; ಟಿಎಂಸಿ ಬಿಕ್ಕಟ್ಟಿಗೆ ದೆಹಲಿಯಲ್ಲಿ ಹೊಸ ಟ್ವಿಸ್ಟ್! | Sudip Bandyopadhyay

Sudip Bandyopadhyay
Sudip Bandyopadhyay
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಬಂಡಾಯದ ಕಿಡಿ ಈಗ ದೆಹಲಿ ತಲುಪಿದ್ದು, ಶನಿವಾರದಂದು ಹಿರಿಯ ನಾಯಕ ಸುದೀಪ್ ಬಂಡೋಪಾಧ್ಯಾಯ (Sudip Bandyopadhyay) ಮತ್ತು ಸಂಸದೆ ಶತಾಬ್ದಿ ರಾಯ್ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ. ಇವರಿಬ್ಬರೂ ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿರುವುದು ಭಾರಿ ರಾಜಕೀಯ ಸಂಚಲನ ಮೂಡಿಸಿದೆ.
ತಮಗೆ 19 ಲೋಕಸಭಾ ಸಂಸದರ ಬೆಂಬಲವಿದೆ ಎಂದು ಪ್ರತಿಪಾದಿಸುತ್ತಿರುವ ಈ ಬಂಡಾಯ ಬಣವು, ಸೋಮವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಲು ಸಜ್ಜಾಗಿದೆ. ಸಂಸತ್ತಿನಲ್ಲಿ ತಮಗೆ ಪ್ರತ್ಯೇಕ ಬಣವಾಗಿ ಮಾನ್ಯತೆ ನೀಡಬೇಕು ಮತ್ತು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸಂಸದರ ಜೊತೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಅವರು ಸ್ಪೀಕರ್‌ಗೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಬಂಡಾಯ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ, ತಾವು ಈಗಾಗಲೇ ಸ್ಪೀಕರ್ ಕಚೇರಿಗೆ ಪತ್ರ ಸಲ್ಲಿಸಿದ್ದು, ಸೋಮವಾರ ಅಧಿಕೃತವಾಗಿ ಹಕ್ಕು ಮಂಡಿಸುವುದಾಗಿ ತಿಳಿಸಿದ್ದಾರೆ. ಜೂನ್ 8 ರಿಂದಲೇ ಸಂಸದರ ಸಹಿ ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಒಟ್ಟು 19 ಸಂಸದರು ಇದಕ್ಕೆ ಸಹಿ ಹಾಕಿದ್ದಾರೆ. ತಾವೇ ಅಸಲಿ ಟಿಎಂಸಿ ಸಂಸದೀಯ ಮಂಡಳಿ ಎಂದು ಪರಿಗಣಿಸುವಂತೆ ಸ್ಪೀಕರ್ ಅವರನ್ನು ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸೋಮವಾರದ ಸಭೆಗೂ ಮುನ್ನ ಸುಮಾರು 20 ಕ್ಕೂ ಹೆಚ್ಚು ಸಂಸದರು ದೆಹಲಿ ತಲುಪಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರ ನೇತೃತ್ವದಲ್ಲಿ ಈ ಪ್ರತ್ಯೇಕ ಸಂಸದೀಯ ಬಣ ರಚನೆಯಾಗಿದ್ದು, ತಮ್ಮ ಸ್ವತಂತ್ರ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಲು ಇವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದ್ರೋಹಿಗಳೇ ರಾಜೀನಾಮೆ ಕೊಡಿ ಎಂದು ಸವಾಲ್​

ಬಂಡಾಯಗಾರರ ಈ ಹಕ್ಕು ಮಂಡನೆಗೆ ಯಾವುದೇ ಕಾನೂನು ಆಧಾರವಿಲ್ಲ ಎಂದು ಟಿಎಂಸಿ ಪಕ್ಷ ತೀವ್ರವಾಗಿ ತಿರುಗೇಟು ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ, ಪಕ್ಷಾಂತರ ನಿಷೇಧ ಕಾಯ್ದೆಯ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ಅನರ್ಹತೆಯಿಂದ ಬಚಾವಾಗಬಹುದು ಎಂಬ ರೆಬೆಲ್ ಸಂಸದರ ಆಲೋಚನೆ ತಪ್ಪು ಎಂದು ಕುಟುಕಿದ್ದಾರೆ. 2003ರ ಸಂವಿಧಾನದ 91ನೇ ತಿದ್ದುಪಡಿಯ ಪ್ರಕಾರ ಪಕ್ಷದ ಒಡಕು ಅಥವಾ ಪ್ರತ್ಯೇಕ ಬಣ ರಚನೆಗೆ ಇದ್ದ ಅವಕಾಶವನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಭಿನ್ನಮತೀಯರನ್ನು ದ್ರೋಹಿಗಳು ಎಂದು ಕರೆದಿರುವ ಮೋಯಿತ್ರಾ, ಧೈರ್ಯವಿದ್ದರೆ ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್ ಮೇಲೆ ಮರುಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ. ಸಂಸದರ ಸಂಖ್ಯೆ ಏನೇ ಇದ್ದರೂ, ಮೂಲ ರಾಜಕೀಯ ಪಕ್ಷದ ಮೂರನೇ ಎರಡರಷ್ಟು (2/3) ಭಾಗದಷ್ಟು ಜನರು ಮತ್ತೊಂದು ಪಕ್ಷದೊಂದಿಗೆ ಸಂಪೂರ್ಣವಾಗಿ ವಿಲೀನಗೊಂಡರೆ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ. ಹೀಗಾಗಿ ಈ 19 ಮಂದಿ ಸಂಸದರು ರಾಜೀನಾಮೆ ನೀಡುವುದೊಂದೇ ದಾರಿ ಎಂದು ಅವರು ಪ್ರತಿಪಾದಿಸಿದ್ದಾರೆ.

ಆಪರೇಷನ್ ಫೇಲ್​ ಎಂದ ಆಜಾದ್

ಮತ್ತೊಂದೆಡೆ, ಟಿಎಂಸಿ ಸಂಸದ ಕೀರ್ತಿ ಆಜಾದ್ ಈ ಬೆಳವಣಿಗೆಯ ಹಿಂದೆ ಬಿಜೆಪಿಯ ಹಸ್ತಕ್ಷೇಪವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಗೃಹ ಸಚಿವ ಅಮಿತ್​ ಷಾ ಮಾರ್ಗದರ್ಶನದಲ್ಲಿ ಪಶ್ಚಿಮ ಬಂಗಾಳದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ. ಆದರೆ ಅದು ಇದುವರೆಗೆ ಯಶಸ್ವಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ನಾಯಕರಾದ ನಿಶಿಕಾಂತ್ ದುಬೆ ಮತ್ತು ಸುವೇಂದು ಅಧಿಕಾರಿ ಅವರು ಟಿಎಂಸಿ ಸಂಸದರನ್ನು ಭೇಟಿಯಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಪಕ್ಷವನ್ನು ದುರ್ಬಲಗೊಳಿಸಲು ಸಂಘಟಿತ ಪಿತೂರಿ ನಡೆಯುತ್ತಿದೆ ಎಂದು ದೂರಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net