ಕೇರಳದ ಕೊಟ್ಟಕ್ಕಲ್ ಮೂಲದ ಶರೀಫಾ ಕಲಾತಿಂಕಲ್ ಅವರ ಯಶೋಗಾಥೆ ನಿಮ್ಮಲ್ಲರಿಗೂ ಸ್ಫೂರ್ತಿ ನೀಡುವುದರಲ್ಲಿ ಸಂದೇಹವೇ ಇಲ್ಲ. ಅಂದು ತೀವ್ರ ಹಸಿವಿನಿಂದ ಪಾರಾಗಲು ಒಂದು ಕೆಲಸವನ್ನು ಪ್ರಾರಂಭಿಸಿದರು. ಆದರೆ, ಇಂದು ಒಂದು ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಹೌದು, 2012 ರಲ್ಲಿ ಶರೀಫಾ ಅವರು ತಮ್ಮ ನೆರೆಹೊರೆಯವರಿಂದ 100 ರೂ.ಗಳನ್ನು ಸಾಲವಾಗಿ ಪಡೆದು, ಒಂದು ಕೆಲಸ ಆರಂಭಿಸಿದರು. ಕೆಲಸದ ಮೇಲಿನ ತಮ್ಮ ಬದ್ಧತೆಯಿಂದಾಗಿ ಇಂದು ಕುಟುಂಬಶ್ರೀಯ ಪ್ರೀಮಿಯಂ ಕೆಫೆ ಸೇರಿದಂತೆ ಎರಡು ರೆಸ್ಟೋರೆಂಟ್ಗಳು ಮತ್ತು ಅಡುಗೆ ಸಂಸ್ಥೆಯ ಮಾಲೀಕರಾಗಿದ್ದಾರೆ. ಈ ವರ್ಷ ರಾಜ್ಯದ ಅತ್ಯುತ್ತಮ ಕುಟುಂಬಶ್ರೀ ಉದ್ಯಮಿ ಪ್ರಶಸ್ತಿಯನ್ನು ಗೆದ್ದ ಶರೀಫಾ, 20 ಮಹಿಳೆಯರು ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತೆಯಾಗಿದ್ದಾರೆ.