ಇಸ್ರೋ ಸೇರಿ 16 ಸರ್ಕಾರಿ ಕೆಲಸ ಸಿಕ್ಕರೂ ತಿರಸ್ಕರಿಸಿ ತನ್ನ ಗುರಿ ಸಾಧಿಸಿದ ಮಹಿಳೆಯ ಯಶೋಗಾಥೆ ಇದು! Success Story ​

ಐಪಿಎಸ್​ ಅಧಿಕಾರಿ ತೃಪ್ತಿ ಭಟ್​
ಐಪಿಎಸ್​ ಅಧಿಕಾರಿ ತೃಪ್ತಿ ಭಟ್​
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ ಸುಲಭದ ಮಾತಲ್ಲ
  • ಜವಾನನ ಕೆಲಸಕ್ಕೂ ಕೂಡ ಇಂಜಿಯರ್​ ಓದಿದವರು ಅರ್ಜಿ ಸಲ್ಲಿಸುತ್ತಾರೆ
  • ಹೀಗಾಗಿ ಸರ್ಕಾರಿ ಕೆಲಸ ಗಿಟ್ಟಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ
  • ಕೆಲ ಪ್ರತಿಭೆಗಳು ಮಾತ್ರ ಯಶಸ್ಸಿನ ಶಿಖರವನ್ನು ಏರುತ್ತಾರೆ
Success Story ​: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ ಸುಲಭದ ಮಾತಲ್ಲ. ಜವಾನನ ಕೆಲಸಕ್ಕೂ ಕೂಡ ಇಂಜಿಯರ್​ ಓದಿದವರು ಅರ್ಜಿ ಸಲ್ಲಿಸುತ್ತಾರೆ. 100 ಹುದ್ದೆ ಇದ್ದರೆ ಅದಕ್ಕೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ. ಇಷ್ಟೊಂದು ಸ್ಪರ್ಧೆ ಇರುವಾಗ ಸರ್ಕಾರಿ ಕೆಲಸ ಗಿಟ್ಟಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಆದರೆ, ಒಂದಲ್ಲ 16 ಸರ್ಕಾರಿ ಕೆಲಸ ಗಿಟ್ಟಿಸುವುದೆಂದರೆ ತಮಾಷೆಯ ಮಾತಲ್ಲ. ಇಂತಹ ಪ್ರತಿಭೆಗಳು ತುಂಬಾ ಅಪರೂಪವಾಗಿ ಕಾಣಸಿಗುತ್ತವೆ. ಅಂತಹ ವ್ಯಕ್ತಿಗಳಲ್ಲಿ ಉತ್ತರಾಖಂಡದ ತೃಪ್ತಿ ಭಟ್​ ಕೂಡ ಒಬ್ಬರು.
ತೃಪ್ತಿ ಭಟ್ ಅವರು ಉತ್ತರಾಖಂಡದ ಅಲ್ಮೋರಾದಲ್ಲಿ ಶಿಕ್ಷಕ ಕುಟುಂಬದಲ್ಲಿ ಜನಿಸಿದರು. ತಾವು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವುದಾಗಿ ಸಂದರ್ಶನವೊಂದರಲ್ಲಿ ಸ್ವತಃ ತೃಪ್ತಿ ಭಟ್ ಅವರೇ​ ಹೇಳಿದ್ದಾರೆ. ನಾಲ್ಕು ಮಕ್ಕಳಲ್ಲಿ ತೃಪ್ತಿ ಹಿರಿಯವಳು. ಆಕೆ, ಬಾಲ್ಯದಿಂದಲೇ ಉನ್ನತ ಸ್ಥಾನಕ್ಕೇರಬೇಕೆಂಬ ಗುರಿ ಹೊಂದಿದ್ದಳು. ಆಕೆಯ ಗುರಿಗೆ ಪಾಲಕರು ಕೂಡ ನೀರೆರೆದು ಪ್ರೋತ್ಸಾಹ ನೀಡಿದರು. ಬಾಲ್ಯದಲ್ಲಿ ಅಲ್ಮೋರಾದಲ್ಲಿ ಶಿಕ್ಷಣವನ್ನು ಮುಗಿಸಿದ ತೃಪ್ತಿ, ಪಂತ್ ನಗರ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದರು. ಇದಾದ ನಂತರ, ಅನೇಕ ಉದ್ಯೋಗಗಳಿಗೆ ಆಯ್ಕೆಯಾದರು. ಅವರು NTPC ಮತ್ತು ISRO ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಬಾಲ್ಯದಿಂದಲೂ ಐಪಿಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದ ತೃಪ್ತಿ ಭಟ್, ತನಗೆ ಸಿಕ್ಕ ಎಲ್ಲಾ ಒಳ್ಳೆಯ ಕೆಲಸಗಳನ್ನು ತ್ಯಜಿಸಿದರು. ತನ್ನ ಗುರಿಗೆ ಅನುಗುಣವಾಗಿ, ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸಾಗಿ ಐಪಿಎಸ್ ಅಧಿಕಾರಿಯಾದರು. ಅವರು ಒಟ್ಟು 16 ಸರ್ಕಾರಿ ಉದ್ಯೋಗಗಳನ್ನು ಪಡೆದರು. ಆದರೆ, ಅಂತಿಮವಾಗಿ ಐಪಿಎಸ್ ಅಧಿಕಾರಿಯಾಗಿ ತಮ್ಮ ಗುರಿ ಸಾಧಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಕೆಲಸ ಸಿಗುವುದೆಂದರೆ ಸಾಮಾನ್ಯ ಸಂಗತಿಯಲ್ಲ ಆದರೆ, ತೃಪ್ತಿ ಆ ಅವಕಾಶವನ್ನು ಕೂಡ ತ್ಯಜಿಸಿದರು.
ತೃಪ್ತಿ ಭಟ್ ಒಂಬತ್ತನೇ ತರಗತಿಯಲ್ಲಿದ್ದಾಗ, ಮಾಜಿ ರಾಷ್ಟ್ರಪತಿ ಮತ್ತು ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಸ್ವತಃ ಕಲಾಂ ಅವರೇ ತೃಪ್ತಿ ಭಟ್ ಅವರಿಗೆ ಕೈಬರಹದ ಪತ್ರವನ್ನು ನೀಡಿದರು. ಅದರಲ್ಲಿ ಅನೇಕ ಸ್ಪೂರ್ತಿದಾಯಕ ವಿಷಯಗಳಿದ್ದವು. ಕಲಾಂ ಅವರಿಂದ ಸ್ಫೂರ್ತಿ ಪಡೆದು ತೃಪ್ತಿ ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದರು.
2013ರಲ್ಲಿ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗುವ ಮೊದಲ ಪ್ರಯತ್ನದಲ್ಲಿ 165ನೇ ರ‍್ಯಾಂಕ್ ಗಳಿಸಿದ ನಂತರ ಅವರು ಐಪಿಎಸ್ ಸೇರಲು ನಿರ್ಧರಿಸಿದರು. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಡೆಹ್ರಾಡೂನ್‌ನಲ್ಲಿ ಎಸ್‌ಪಿಯಾಗಿ ತಮ್ಮ ವೃತ್ತಿ ಜೀವನದ ಪ್ರಯಾಣವನ್ನು ಪ್ರಾರಂಭಿಸಿದರು. ತೆಹ್ರಿ ಗರ್ವಾಲ್‌ನಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್) ಕಮಾಂಡರ್ ಆಗಿ ಕೆಲಸ ಮಾಡುವ ಮೊದಲು ಅವರು ಚಮೋಲಿಯಲ್ಲಿ ಎಸ್‌ಪಿಯಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಅವರು ಡೆಹ್ರಾಡೂನ್‌ನ ಗುಪ್ತಚರ ಮತ್ತು ಭದ್ರತಾ ವಿಭಾಗದಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತೃಪ್ತಿ ಅವರು ಅಧ್ಯಯನದಲ್ಲಿ ಮಾತ್ರವಲ್ಲದೆ ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಮ್ಯಾರಥಾನ್ ಮತ್ತು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ, ಟೇಕ್ವಾಂಡೋ ಮತ್ತು ಕರಾಟೆಯಲ್ಲೂ ಪರಿಣಿತಳೆಂದು ಸಾಬೀತುಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net