ಯಶಸ್ಸು ತಲೆಗೇರಿದೆ... ಅಕ್ಷಯ್ ಖನ್ನಾ ವರ್ತನೆ ಟಾಕ್ಸಿಕ್: ದೃಶ್ಯಂ ನಿರ್ಮಾಪಕ ಕುಮಾರ್ ಮಂಗತ್ ಕಿಡಿ | Akshaye Khanna

Akshaye Khanna
Akshaye Khanna
Published on
ಮುಂಬೈ: ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಖನ್ನಾ (Akshaye Khanna) ಅವರು ಬಹುನಿರೀಕ್ಷಿತ ದೃಶ್ಯಂ 3 ಚಿತ್ರದಿಂದ ಹೊರಬಂದಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಅಕ್ಷಯ್ ಅವರಿಗೆ ಯಶಸ್ಸು ತಲೆಗೇರಿದೆ ಎಂದು ಚಿತ್ರದ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಕಿಡಿಕಾರಿದ್ದಾರೆ.

ಏನಿದು ವಿವಾದ..?

ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ಅಕ್ಷಯ್ ಖನ್ನಾ ಈಗಾಗಲೇ ದೃಶ್ಯಂ 3 ಚಿತ್ರಕ್ಕಾಗಿ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಿದ್ದರು ಮತ್ತು ಮುಂಗಡ ಹಣವನ್ನೂ ಪಡೆದಿದ್ದರು. ಆದರೆ, ಚಿತ್ರದ ಚಿತ್ರೀಕರಣ ಆರಂಭವಾಗಲು ಕೇವಲ 10 ದಿನಗಳು ಬಾಕಿ ಇರುವಾಗ, ಅವರು ಕೇವಲ ಒಂದು ಟೆಕ್ಸ್ಟ್ ಮೆಸೇಜ್ ಕಳುಹಿಸುವ ಮೂಲಕ ಚಿತ್ರದಿಂದ ಹೊರಬರುವುದಾಗಿ ತಿಳಿಸಿದ್ದಾರೆ ಎಂದು ನಿರ್ಮಾಪಕ ಹೇಳಿದ್ದಾರೆ. 
ಮುಂದುವರೆದು ಮಾತನಾಡಿರುವ ನಿರ್ಮಾಪಕ ಮಂಗತ್​, ಧುರಂಧರ್ ಯಶಸ್ಸು ಅವರ ತಲೆಗೇರಿದೆ. ಅಲ್ಲದೆ, ಅವರು ತಮ್ಮನ್ನು ತಾವು ಸೂಪರ್‌ಸ್ಟಾರ್ ಎಂದು ಭಾವಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅವರು ಒಬ್ಬಂಟಿಯಾಗಿ ಸಿನಿಮಾ ಮಾಡಿದರೆ 50 ಕೋಟಿ ಕೂಡ ಗಳಿಸುವುದಿಲ್ಲ. ಅದರೆ, ದೃಶ್ಯಂ ಎನ್ನುವುದು ಅಜಯ್ ದೇವಗನ್ ಅವರ ಬ್ರ್ಯಾಂಡ್ ಆಗಿದೆ. ಅಕ್ಷಯ್ ಅವರ ವರ್ತನೆಯನ್ನು ಟಾಕ್ಸಿಕ್ ಮತ್ತು ಅನ್-ಪ್ರೊಫೆಷನಲ್ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ವಿಗ್ ಧರಿಸುವ ಹಠ

ಈ ನಿರ್ಧಾರಕ್ಕೆ ಮತ್ತೊಂದು ವಿಚಿತ್ರ ಕಾರಣವೆಂದರೆ, ಅಕ್ಷಯ್ ಖನ್ನಾ ಅವರು ಈ ಚಿತ್ರದಲ್ಲಿ ವಿಗ್ ಧರಿಸಲು ಹಠ ಹಿಡಿದಿದ್ದರು. ಆದರೆ, ದೃಶ್ಯಂ 3 ಎರಡನೇ ಭಾಗದ ಮುಂದುವರಿಕೆಯಾದ್ದರಿಂದ ಮತ್ತು ಕಂಟಿನ್ಯೂಟಿ ಕಾಪಾಡಿಕೊಳ್ಳಬೇಕಾದ್ದರಿಂದ, ಅವರ ಪಾತ್ರಕ್ಕೆ ಹಠಾತ್ತಾಗಿ ಕೂದಲು ಬರುವುದು ಅಸಹಜವಾಗಿ ಕಾಣುತ್ತದೆ ಎಂದು ನಿರ್ದೇಶಕ ಅಭಿಷೇಕ್ ಪಾಠಕ್ ವಿರೋಧಿಸಿದ್ದರು. ಆದರೂ ಅಕ್ಷಯ್ ತಮ್ಮ ಪಟ್ಟು ಸಡಿಲಿಸಲಿಲ್ಲ ಎನ್ನಲಾಗಿದೆ.

ಲೀಗಲ್ ನೋಟಿಸ್ ಮತ್ತು ಬದಲಿ ನಟ 

ಈ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಅಕ್ಷಯ್ ಖನ್ನಾಗೆ ಕಾನೂನು ನೋಟಿಸ್ ನೀಡಲಾಗಿದೆ. ಅಲ್ಲದೆ, ಅವರ ಜಾಗಕ್ಕೆ ಈಗ ಪ್ರತಿಭಾವಂತ ನಟ ಜೈದೀಪ್ ಅಹ್ಲಾವತ್ ಅವರನ್ನು ಚಿತ್ರತಂಡ ಅಧಿಕೃತವಾಗಿ ಆಯ್ಕೆ ಮಾಡಿಕೊಂಡಿದೆ. ಜೈದೀಪ್ ಅಕ್ಷಯ್‌ಗಿಂತ ಉತ್ತಮ ನಟ ಮತ್ತು ಉತ್ತಮ ಮನುಷ್ಯ ಎಂದು ಪಾಠಕ್ ಶ್ಲಾಘಿಸಿದ್ದಾರೆ.

ಧುರಂಧರ್ ಯಶಸ್ಸು ಮತ್ತು ಸಂಭಾವನೆ ಹೆಚ್ಚಳ

ಇತ್ತೀಚೆಗೆ ಬಿಡುಗಡೆಯಾದ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರ ರೆಹಮಾನ್ ಡಕಾಯ್ತ್ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಯಶಸ್ಸಿನ ಬಲದಿಂದ ಅಕ್ಷಯ್ ಅವರು ತಮ್ಮ ಸಂಭಾವನೆಯನ್ನು ಬರೋಬ್ಬರಿ 21 ಕೋಟಿ ರೂಪಾಯಿಗೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದು ದೃಶ್ಯಂ 2 ಗಾಗಿ ಅವರು ಪಡೆದ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚಾಗುತ್ತದೆ. 
ಈ ಚಿತ್ರವು 2026ರ ಅಕ್ಟೋಬರ್ 2 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅಕ್ಷಯ್ ಖನ್ನಾ ಅವರ ಕಡೆಯಿಂದ ಈ ಆರೋಪಗಳಿಗೆ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net