ಪಂಜಾಬ್: ಇಲ್ಲಿನ ಹೆಸರಾಂತ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU) ಕ್ಯಾಂಪಸ್‌ನಲ್ಲಿ ಭಾನುವಾರ ತೀವ್ರ ಹಿಂಸಾಚಾರ ಹಾಗೂ ಲೂಟಿ ಹೊಡೆದ ಘಟನೆಗಳು ವರದಿಯಾಗಿವೆ. ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಅನಧಿಕೃತ ಸುದ್ದಿ ಹರಡಿದ ಬೆನ್ನಲ್ಲೇ ಈ ಗಲಾಟೆಗಳು ಜೋರಾಗಿವೆ ಎಂದು ವರದಿಯಾಗಿದೆ.
ಉದ್ವಿಗ್ನತೆ ಸೃಷ್ಟಿಯಾದ ಬೆನ್ನಲ್ಲೇ ಪ್ರತಿಭಟಿಸುವ ಸೋಗಿನಲ್ಲಿ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್‌ನ ಒಳಗಿರುವ ಯೂನಿ ಮಾಲ್ಗೆ ನುಗ್ಗಿ ದುಬಾರಿ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳು, ಲ್ಯಾಪ್‌ಟಾಪ್‌ಗಳು, ಶೂಗಳು ಹಾಗೂ ಆಹಾರ ಪದಾರ್ಥಗಳನ್ನು ದೋಚಿದ್ದಾರೆ. ಇನ್ನೂ ಕೆಲವರಂತು ಉಚಿತವಾಗಿ ಶಾಪಿಂಗ್ ಮಾಡಿದೆವು ಎಂದು ಹೇಳಿಕೊಂಡೇ ವಸ್ತುಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.
ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಕಟ್ಟಡಗಳ ಕೆಲವು ವಿಭಾಗಗಳಿಗೆ ಬೆಂಕಿ ಹಚ್ಚಿ ಆಸ್ತಿ-ಪಾಸ್ತಿ ಹಾನಿಗೊಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 44 ತಡೆದು ಧರಣಿ ನಡೆಸುತ್ತಿದ್ದಾಗ, ರಸ್ತೆ ತೆರವುಗೊಳಿಸಲು ಬಂದ ಪೊಲೀಸರ ಮೇಲೆಯೂ ದಾಳಿ ನಡೆಸಲಾಗಿದ್ದು, ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಹಲವರ ಮೇಲೆ ಎಫ್‌ಐಆರ್ ದಾಖಲಿಸಿದ್ದು, ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಫೋರೆನ್ಸಿಕ್ ಆಧಾರಗಳ ಮೂಲಕ ತನಿಖೆ ಮುಂದುವರಿದಿದೆ ಎಂದು ವರದಿಯಾಗಿದೆ.
ಯೂನಿವರ್ಸಿಟಿಯ ಹಾಸ್ಟೆಲ್‌ನಲ್ಲಿ ಉಳಿದಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಆವರಣದ ಒಳಗಡೆಯೇ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಮತ್ತು ಈ ಘಟನೆಯ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದೇ ಈ ತೀವ್ರ ಪ್ರತಿಭಟನೆಗೆ ಮುಖ್ಯ ಕಾರಣ ಎಂದು ವರದಿಗಳು ತಿಳಿಸಿವೆ.
ಈ ಘಟನೆಯ ಕುರಿತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಹಾಸ್ಟೆಲ್ ವಾರ್ಡನ್ ತಕ್ಷಣವೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಗಿಬಿದ್ದಿದ್ದಾರೆ. ಇದಕ್ಕೆ ಇನ್ನು ಪುಷ್ಠಿ ನೀಡಿದ್ದು, ಇತ್ತೀಚೆಗಷ್ಟೇ ತೆಲಂಗಾಣ ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಸೃಷ್ಟಿಯಾಗಿದ್ದ ಅಸಮಾಧಾನವು ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣ ಎನ್ನಲಾಗಿದೆ,(ಏಜೆನ್ಸೀಸ್).