ನೆಡುಮಂಗಾಡ್: 'ರೂಟ್ ಕೆನಾಲ್' ಚಿಕಿತ್ಸೆಗೆಂದು ದಂತವೈದ್ಯರ ಬಳಿ ಹೋಗಿದ್ದ ಬಾಲಕಿಯೊಬ್ಬಳು, ಅಲ್ಲಿಂದ ಬಂದ ಕೆಲವೇ ಸಮಯದಲ್ಲಿ ವಿಪರೀತ ಹೊಟ್ಟೆ ನೋವೆಂದು ಆಸ್ಪತ್ರೆ ಪಾಲಾದ ಘಟನೆ ಕೇರಳದ ನೆಡುಮಂಗಾಡ್ನಲ್ಲಿ ವರದಿಯಾಗಿದೆ.
ರೂಟ್ ಕೆನಾಲ್ ಚಿಕಿತ್ಸೆ ಪಡೆಯಲು ದಂತ ವೈದ್ಯರ ಬಳಿ ಹೋಗಿದ್ದ ಬಾಲಕಿ, ಟ್ರೀಟ್ಮೆಂಟ್ ಪಡೆಯುವಾಗ ವೈದ್ಯರ ಕೈಯಿಂದ ಸೂಜಿಯೊಂದು ಜಾರಿ, ಆಕೆಯ ಗಂಟಲಿನಲ್ಲಿ ಸಿಲುಕಿ, ನಂತರ ಹೊಟ್ಟೆಯೊಳಗೆ ಸೇರಿಕೊಂಡಿದೆ. ಬಳಿಕ ತಾಳಲಾರದ ಹೊಟ್ಟೆ ನೋವಿನಿಂದ ಆಸ್ಪತ್ರೆ ದಾಖಲಾಗಿದ್ದಾಳೆ. ಕೂಡಲೇ ಎಕ್ಸ್‌ರೇ ಪರೀಕ್ಷೆ ಮಾಡಿದ ವೈದ್ಯರಿಗೆ ಆಕೆಯ ಹೊಟ್ಟೆಯಲ್ಲಿ ಸೂಜಿ ಇರುವುದು ದೃಢವಾಗಿದೆ. ಈ ವಿಷಯ ತಿಳಿದ ಪೋಷಕರಿಗೆ ಡೆಂಟಲ್ ವೈದ್ಯನ ಎಡವಟ್ಟು ಬೆಳಕಿಗೆ ಬಂದಿದೆ.
ಅಕ್ಟೋಬರ್ 31ರ ಸಂಜೆ ಅರುವಿಕ್ಕರದ ಖಾಸಗಿ ಡೆಂಟಲ್ ಕ್ಲಿನಿಕ್ನಲ್ಲಿ 'ರೂಟ್ ಕೆನಾಲ್' ಚಿಕಿತ್ಸೆ ಮಾಡಿಸುವಾಗ ಈ ಘಟನೆ ಸಂಭವಿಸಿದೆ. ವೈದ್ಯರ ಕೈಯಿಂದ ಸೂಜಿ ಜಾರಿದೆ ಎಂದು ವಿವರಿಸಲಾಗಿದೆ. ಆರಂಭದಲ್ಲಿ, ಯುವತಿಯನ್ನು ಅರುವಿಕ್ಕರ ಮತ್ತು ಕಾರಕುಲಂನಲ್ಲಿರುವ ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು, ಅಲ್ಲಿ ಎಕ್ಸ್‌ರೇ ಪರೀಕ್ಷೆಗಳನ್ನು ನಡೆಸಲಾಗಿದೆ. ಸ್ಕ್ಯಾನ್ ವರದಿಯಲ್ಲಿ ಸೂಜಿ ಹೊಟ್ಟೆಯೊಳಗೆ ಇರುವುದು ಪತ್ತೆಯಾಗಿದೆ. ವಿಷಯ ಪೋಷಕರಿಗೆ ತಿಳಿಸಿದ ಬಳಿಕವೇ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ತಿರುವನಂತಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಯುವತಿಯ ತಾಯಿ ಅರುವಿಕ್ಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ದೂರು ನೀಡಿ ಒಂದು ವಾರ ಕಳೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರೋಪಿಸಿದ್ದಾರೆ. ಇತ್ತ, ಸೂಜಿ ಬಿಟ್ಟು ಎಡವಟ್ಟು ಮಾಡಿರುವ ವೈದರು ಮತ್ತು ಡೆಂಟಲ್ ಕ್ಲಿನಿಕ್ ಆಡಳಿತ ಮಂಡಳಿಯು ಹೊಣೆಯೊರಲು ಹಿಂದೇಟು ಹಾಕಿದ್ದು. ಬಾಲಕಿಯೇ ಸ್ವತಃ ಸೂಜಿಯನ್ನು ನುಂಗಿದ್ದಾಳೆ ಎಂಬ ಹೇಳಿರುವುದು ಸದ್ಯ ಪಾಲಕರನ್ನು ಅಕ್ಷರಶಃ ಕೆರಳಿಸಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅರುವಿಕ್ಕರ ಪೊಲೀಸರು ತಿಳಿಸಿದ್ದಾಗಿ ವರದಿಯಾಗಿದೆ,(ಏಜೆನ್ಸೀಸ್).