JSSC ಪರೀಕ್ಷೆ ರದ್ದು: ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದ ವಿದ್ಯಾರ್ಥಿ ಮುಖಂಡ ಮಹತೋ | Devendra Nath Mahato

Devendra Nath Mahato
Devendra Nath Mahato
Published on

ವಿದ್ಯಾರ್ಥಿ ಮುಖಂಡ ದೇವೇಂದ್ರ ನಾಥ್ ಮಹತೋ ಅವರು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಿದ್ದಕ್ಕಾಗಿ ಜಾರ್ಖಂಡ್ ಸರ್ಕಾರ ಹಾಗೂ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಧನ್ಯವಾದ ಅರ್ಪಿಸಿದ್ದು, ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಸಿಕೊಂಡವರನ್ನು ಗುರಿಯಾಗಿಸಿಕೊಂಡು ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಪರೀಕ್ಷಾ ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ತೊಡೆದುಹಾಕುವ ಪ್ರಯತ್ನಗಳಿಗೆ ವಿದ್ಯಾರ್ಥಿಗಳು ಬೆಂಬಲ ನೀಡುವುದನ್ನು ಮುಂದುವರಿಸಲಿದ್ದಾರೆ ಮತ್ತು ಪ್ರಸ್ತುತ ನಡೆಯುತ್ತಿರುವ ಸುಧಾರಣಾ ಪ್ರಕ್ರಿಯೆಯಲ್ಲಿ ಸರ್ಕಾರದೊಂದಿಗೆ ಸಹಕರಿಸಲಿದ್ದಾರೆ ಎಂದು ಮಹತೋ ತಿಳಿಸಿದರು.
ಟಿಎಸ್‌ಆರ್ ಡಾಟಾ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ (TDPL) ಸಂಸ್ಥೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು, ಅಂದರೆ ನಡೆಸಿದ ಪರೀಕ್ಷೆಗಳು, ಪ್ರಕಟಿಸಿದ ಫಲಿತಾಂಶಗಳು ಮತ್ತು ಅಭ್ಯರ್ಥಿಗಳ ಆಯ್ಕೆಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಘೋಷಿಸಿದ ನಂತರ ಅವರ ಈ ಹೇಳಿಕೆಗಳು ಬಂದಿವೆ.
ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಮಹತೋ, ಈ ಚಳವಳಿಗೆ ಬೆಂಬಲ ನೀಡಿದ ಮತ್ತು ಸಹಕರಿಸಿದ ಎಲ್ಲಾ ವಿದ್ಯಾರ್ಥಿಗಳು, ಪೋಷಕರು, ಮಾಧ್ಯಮ ಮಿತ್ರರು, ಪೊಲೀಸ್ ಆಡಳಿತ, ಹಾಗೂ ಮುಖ್ಯವಾಗಿ ಜಾರ್ಖಂಡ್ ಸರ್ಕಾರ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ಬೇಡಿಕೆಗಳನ್ನು ಈಡೇರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ತನಿಖೆಯನ್ನು ಅತ್ಯಂತ ಸೂಕ್ಷ್ಮವಾಗಿ ನಡೆಸಲಾಗುತ್ತಿದ್ದು, ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಭ್ರಷ್ಟ ವ್ಯಕ್ತಿಯನ್ನು ಬಂಧಿಸಲಾಗುತ್ತಿದೆ. ಈ ಜಾಲಗಳ ಹಿಂದಿರುವ ನಿಜವಾದ ರೂವಾರಿಗಳನ್ನು ತಲುಪಲು ಅಧಿಕಾರಿಗಳು ಸಂಘಟಿತ ಪ್ರಯತ್ನ ನಡೆಸುತ್ತಿದ್ದಾರೆ ಎಂದ ಮಹತೋ, ಪರೀಕ್ಷಾ ಅಕ್ರಮಗಳ ಕುರಿತು ಸರ್ಕಾರದ ತನಿಖೆಗೆ ಬೆಂಬಲ ನೀಡುವುದಾಗಿ ಮತ್ತು ಭವಿಷ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳನ್ನು ತಡೆಯುವಂತಹ ವ್ಯವಸ್ಥೆಯನ್ನು ತಾವು ಬಯಸುವುದಾಗಿ ತಿಳಿಸಿದರು.

ದೇವೇಂದ್ರ ನಾಥ್ ಮಹತೋ ಹೇಳಿಕೆ!..

ನಾವು, ವಿದ್ಯಾರ್ಥಿಗಳು ಈ ತನಿಖೆಯನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಮತ್ತು ಈ ಭ್ರಷ್ಟ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೊಗೆಯುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುತ್ತೇವೆ, ಹಾಗೆಯೇ ಪ್ರಸ್ತುತ ನಡೆಯುತ್ತಿರುವ ಸುಧಾರಣಾ ಪ್ರಕ್ರಿಯೆಯ ಕುರಿತು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ನಮ್ಮ ಸಮಸ್ಯೆಗಳು ಬಗೆಹರಿದು ಬೇಡಿಕೆಗಳು ಈಡೇರಿದರೆ, ನಾವು ಮುಂದೆ ಪ್ರತಿಭಟನೆ ನಡೆಸುವ ಅಗತ್ಯವೇನಿದೆ..? ನಾವು ಪ್ರಸ್ತುತ ಅಧಿಕೃತ ಸೂಚನೆಗಾಗಿ ಕಾಯುತ್ತಿದ್ದೇವೆ. ನನ್ನ ಜೀವನದಲ್ಲಿ, ಸಿಬಿಐ ಅಥವಾ ಸಿಐಡಿ ತನಿಖೆಗೆ ಆದೇಶಿಸಿ ನಂತರ ಅದನ್ನು ರದ್ದುಗೊಳಿಸಿದ ಹಲವು ನಿದರ್ಶನಗಳನ್ನು ನೋಡಿದ್ದೇನೆ. ಭವಿಷ್ಯದಲ್ಲಿ ಮತ್ತೆಂದೂ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆಯುವುದಿಲ್ಲ ಎಂದು ಸರ್ಕಾರ ಗ್ಯಾರಂಟಿ ನೀಡುವ ವ್ಯವಸ್ಥೆ ನಮಗೆ ಬೇಕಾಗಿದೆ. ಅಂತಹ ವ್ಯವಸ್ಥೆಯ ಖಾತರಿ ನಮಗೆ ಅಗತ್ಯವಿದೆ. ಈ ಪ್ರಯತ್ನದಲ್ಲಿ ನಾವು ಸರ್ಕಾರದೊಂದಿಗೆ ಸಹಕರಿಸುತ್ತೇವೆ ಮತ್ತು ಸರ್ಕಾರವೂ ಇದೇ ರೀತಿಯಲ್ಲಿ ತನ್ನ ಬೆಂಬಲವನ್ನು ಮುಂದುವರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು.
ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (JSSC) ನಡೆಸಿದ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ವಿರೋಧಿಸಿ ರಾಂಚಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯು ಸೋಮವಾರಕ್ಕೆ 24ನೇ ದಿನಕ್ಕೆ ಕಾಲಿಟ್ಟಿತ್ತು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಮತ್ತು ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net