ಚೇತರಿಸಿಕೊಂಡ ಷೇರುಪೇಟೆ; ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ!

ಷೇರುಪೇಟೆ, ಚಿನ್ನ-ಬೆಳ್ಳಿ ದರ
ಷೇರುಪೇಟೆ, ಚಿನ್ನ-ಬೆಳ್ಳಿ ದರ
Published on
ಮುಂಬೈ: ಆರ್​ಬಿಐ ಬಡ್ಡಿ ದರ ಬದಲಾಗದ ಕಾರಣ ಶುಕ್ರವಾರ ಆರಂಭದಲ್ಲಿ ಕುಸಿದಿದ್ದ ಷೇರು ಮಾರುಕಟ್ಟೆ, ದಿನದ ವಹಿವಾಟಿನ ಕೊನೆಯಲ್ಲಿ ಐಟಿಸಿ ಮತ್ತು ಬ್ಯಾಂಕಿಂಗ್ ಷೇರುಗಳ ಖರೀದಿ ಭರಾಟೆಯಿಂದಾಗಿ ಏರಿಕೆ ದಾಖಲಿಸಿದೆ.

ರಿಯಲ್ ಎಸ್ಟೇಟ್ ವಲಯಕ್ಕೆ ಹಣಕಾಸಿನ ನೆರವು ನೀಡಲು ಬ್ಯಾಂಕುಗಳಿಗೆ ರಿಯಲ್ ಎಸ್ಟೇಟ್ ಇನ್ವೆಸ್ಟ್​ಮೆಂಟ್ ಟ್ರಸ್ಟ್​ಗಳಿಗೆ (ಆರ್​ಇಐಟಿ) ಸಾಲ ನೀಡಲು ಅನುಮತಿ ನೀಡುವ ಪ್ರಸ್ತಾವನೆ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ದಿನದ ಅಂತ್ಯದಲ್ಲಿ ಕಂಡುಬಂದ ಭರ್ಜರಿ ಖರೀದಿ ನೆರವಿನಿಂದ ಸೆನ್ಸೆಕ್ಸ್ 266.47 ಅಂಕ ಏರಿಕೆ ಕಂಡು 83,580.40ರ ಮಟ್ಟದಲ್ಲಿ ಸ್ಥಿರವಾಯಿತು. ದಿನದ ಕನಿಷ್ಠ ಮಟ್ಟ 82,925.35ರಿಂದ 655.05 ಅಂಕಗಳಷ್ಟು ಚೇತರಿಕೆ ಕಂಡಿತು. ನಿಫ್ಟಿ 50.90 ಅಂಕಗಳ ಏರಿಕೆಯೊಂದಿಗೆ 25,693.70 ಮಟ್ಟದಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ.

ವಿನಿಮಯ ಕೇಂದ್ರದ ಮಾಹಿತಿ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 2,150.51 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಬೆಲೆ ಶೇ.1.20ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್​ಗೆ 68.34 ಡಾಲರ್​ಗೆ ತಲುಪಿದೆ.

ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ

ಚಿನ್ನ ಮತ್ತು ಬೆಳ್ಳಿ ಬೆಲೆಗಳು ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ತೀವ್ರ ಕುಸಿತ ಕಂಡಿವೆ. ಹೂಡಿಕೆದಾರರು ಸತತ ಎರಡನೇ ದಿನವೂ ಲಾಭದ ನಗದೀಕರಣಕ್ಕೆ (ಪ್ರಾಫಿಟ್ ಬುಕಿಂಗ್) ಮುಂದಾದ ಕಾರಣ, ಬೆಳ್ಳಿ ಬೆಲೆ ಸುಮಾರು ಶೇಕಡ 5ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 2.55 ಲಕ್ಷ ರೂ.ಗೆ ತಲುಪಿದೆ.

ಚಿನ್ನದ ಬೆಲೆಯೂ ಪ್ರತಿ 10 ಗ್ರಾಂಗೆ 1.57 ಲಕ್ಷ ರೂ.ಗೆ ಕುಸಿದಿದೆ. ಗುರುವಾರ ಕೆಜಿಗೆ 2,68,000 ರೂ. ಇದ್ದ ಬೆಳ್ಳಿ ಬೆಲೆ ಶುಕ್ರವಾರ 13,000 ರೂ.ಗಳಷ್ಟು (ಶೇ. 4.85) ಕುಸಿತ ಕಂಡು, ಪ್ರತಿ ಕೆಜಿಗೆ 2,55, 000 ರೂ.ಗೆ ತಲುಪಿದೆ. ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಗುರುವಾರ 1,60,600 ರೂ. ಇದ್ದದ್ದು ಶುಕ್ರವಾರ 3,400 ರೂ. (ಶೇ. 2.12) ಇಳಿಕೆಯಾಗಿ, ಪ್ರತಿ 10 ಗ್ರಾಂಗೆ 1,57,200 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net