ಷೇರು ಮಾರುಕಟ್ಟೆ ಸತತ 5ನೇ ದಿನವೂ ಕುಸಿತ; ಟ್ರಂಪ್ ಶೇ. 500 ತೆರಿಗೆ ಬೆದರಿಕೆ ಕಾರಣ

ಷೇರುಪೇಟೆ
ಷೇರುಪೇಟೆ
Published on

ಮುಂಬೈ: ಅಮೆರಿಕದ ಸಂಭವನೀಯ ಆಮದು ಸುಂಕ ಹೆಚ್ಚಳದ ಆತಂಕ ಮತ್ತು ಜಾಗತಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಐದನೇ ದಿನವೂ ಕುಸಿತ ಕಂಡಿವೆ. ಶುಕ್ರವಾರದ ವಹಿವಾಟಿನ ಒಂದು ಹಂತದಲ್ಲಿ 778 ಅಂಕ ಇಳಿಕೆ ಕಂಡಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 604.72 ಅಂಕ ಕುಸಿದು 83,576.24ಕ್ಕೆ ತಲುಪಿತು.

ನಿಫ್ಟಿ 193.55 ಅಂಕ ಇಳಿಕೆಯಾಗಿ 25,683.30ಕ್ಕೆ ತಲುಪಿತು. ವಿದೇಶಿ ಬಂಡವಾಳದ ನಿರಂತರ ಹೊರಹರಿವು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಕಳೆದ ಐದು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 2,185 ಅಂಕ ಕುಸಿದಿದೆ.

ರಿಲಯನ್ಸ್ ಜಿಯೋ ಐಪಿಒ ಸಿದ್ಧತೆ

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ 2026ರ ಮೊದಲಾರ್ಧದಲ್ಲಿ ತನ್ನ ಬಹುನಿರೀಕ್ಷಿತ ಐಪಿಒ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಜಿಯೋ ಪ್ಲಾಟ್​ಫಾರ್ಮ್​ ತನ್ನ ಶೇ. 2.5ರಷ್ಟು ಪಾಲನ್ನು ಮಾರುಕಟ್ಟೆಗೆ ನೀಡಲು ಉದ್ದೇಶಿಸಿದ್ದು, ಇದರ ಒಟ್ಟು ಮೌಲ್ಯ ಸುಮಾರು 33,000 ಕೋಟಿ ರೂ.ಗೂ ಹೆಚ್ಚಿರಲಿದೆ. ಜಿಯೋದ ಪ್ರಸ್ತುತ ಮೌಲ್ಯ 16.22 ಲಕ್ಷ ಕೋಟಿ ರೂ.ಗಳಿಂದ 21.63 ಲಕ್ಷ ಕೋಟಿ ರೂ.ಗಳಷ್ಟಿರಬಹುದು ಎಂದು ಹೂಡಿಕೆ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಒಂದು ವೇಳೆ ಈ ಐಪಿಒ ಯಶಸ್ವಿಯಾದರೆ, ಇದು ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಆಗಲಿದೆ. ಇದಕ್ಕಾಗಿ ರಿಲಯನ್ಸ್ ಕಂಪನಿಯು ಕೋಟಕ್ ಮಹೀಂದ್ರಾ ಮತ್ತು ಮೋರ್ಗನ್ ಸ್ಟಾನ್ಲಿಯಂತಹ ಪ್ರಮುಖ ಬ್ಯಾಂಕ್​ಗಳೊಂದಿಗೆ ಮಾತುಕತೆ ನಡೆಸುತ್ತಿದೆ. 50 ಕೋಟಿಗಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ, ಈ ಐಪಿಒ ಮೂಲಕ ಜಾಗತಿಕ ಹೂಡಿಕೆದಾರರನ್ನು ಸೆಳೆಯಲು ಮುಂದಾಗಿದೆ.

ಕೋಕಿಂಗ್ ಕೋಲ್ ಐಪಿಒಗೆ ಭರ್ಜರಿ ಪ್ರತಿಕ್ರಿಯೆ

ಕೋಲ್ ಇಂಡಿಯಾದ ಅಂಗಸಂಸ್ಥೆಯಾದ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್​ನ ಐಪಿಒ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. 8.1 ಪಟ್ಟು ಅಧಿಕ ಚಂದಾದಾರಿಕೆ ಪಡೆದಿದೆ. ವಿಶೇಷವಾಗಿ ಚಿಲ್ಲರೆ ಹೂಡಿಕೆದಾರರ ವಿಭಾಗ 9.26 ಪಟ್ಟು ಮತ್ತು ಸಾಂಸ್ಥಿಕೇತರ ಹೂಡಿಕೆದಾರರ ವಿಭಾಗ 16.39 ಪಟ್ಟು ಚಂದಾದಾರಿಕೆ ಕಂಡಿವೆ. ಈ ಐಪಿಒ ಮೂಲಕ ಕೋಲ್ ಇಂಡಿಯಾ 1,071 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಜ. 13ರಂದು ಈ ಐಪಿಒ ಚಂದಾದಾರಿಕೆ ಮುಕ್ತಾಯಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net