ನೀವು ಭಾರತೀಯರೇ ಆದ್ರೂ ಈ 4 ರಾಜ್ಯಕ್ಕೆ ಎಂಟ್ರಿ ಅಷ್ಟು ಸುಲಭವಲ್ಲ! ಅನುಮತಿ ಪತ್ರವಿದ್ರೆ ಮಾತ್ರ ಅವಕಾಶ

ಸಾಂದರ್ಭಿಕ ಚಿತ್ರ (AI)
ಸಾಂದರ್ಭಿಕ ಚಿತ್ರ (AI)
Published on
ILP Rules: ಸಾಮಾನ್ಯವಾಗಿ, ನಾವು ಭಾರತೀಯರು ಎಂದಮೇಲೆ ನಮ್ಮ ದೇಶದ ಯಾವುದೇ ರಾಜ್ಯ ಅಥವಾ ಪ್ರದೇಶಗಳಿಗೆ ಯಾರ ಅಪ್ಪಣೆಯೂ ಇಲ್ಲದೆ ಹೋಗಬಹುದು ಎಂಬುದು ಹಲವರ ಅಭಿಪ್ರಾಯ. ಇಂದಿಗೂ ಅದೆಷ್ಟೋ ಮಂದಿ ಅದೇ ನಿಜ ಎಂದು ಭಾವಿಸಿದ್ದಾರೆ. ಆದ್ರೆ, ಅಸಲಿಗೆ ಅದು ಸುಳ್ಳು ಎಂಬುದು ನಿಮಗೆ ಗೊತ್ತಿರಲಿ. ಭಾರತದ ಯಾವ ಮೂಲೆಗೆ ಬೇಕಾದರೂ ನೀವು ಹೋಗಬಹುದು. ಆದರೆ, ಈ ನಾಲ್ಕು ರಾಜ್ಯಗಳಿಗೆ ಹೋಗುವುದು ಮಾತ್ರ ಅಷ್ಟು ಸುಲಭವಲ್ಲ.
ದೇಶದ 4 ರಾಜ್ಯಗಳನ್ನು ಪ್ರವೇಶಿಸಲು ಪೂರ್ವಾನುಮತಿ ಕಡ್ಡಾಯವಾಗಿದೆ. ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರಕ್ಕೆ ಭೇಟಿ ಕೊಡಲು ಅಥವಾ ಆ ಮಾರ್ಗ ಪ್ರಯಾಣಿಸುವ ಮೊದಲು ಇನ್ನರ್ ಲೈನ್ ಪರ್ಮಿಟ್ (ILP) ಪಡೆಯುವುದು ಕಡ್ಡಾಯ. ಅಷ್ಟಕ್ಕೂ ಈ ಐಎಲ್​ಪಿ ಎಂದರೇನು? ಯಾವ ಕಾರಣಕ್ಕೆ ಇದು ಅವಶ್ಯ? ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ ಬನ್ನಿ.

ಏನಿದು ಇನ್ನರ್ ಲೈನ್ ಪರ್ಮಿಟ್?

ಸರಳವಾಗಿ ಹೇಳುವುದಾದರೆ, ಐಎಲ್​ಪಿ ಅಧಿಕೃತ ಪರವಾನಗಿಯಾಗಿದೆ. ರಾಜ್ಯೇತರ ನಾಗರಿಕರು ನಿರ್ದಿಷ್ಟ ಸಮಯದವರೆಗೆ ಅಲ್ಲಿಗೆ ಪ್ರಯಾಣಿಸಲು ಇದು ಉಪಯುಕ್ತ. ಆದಾಗ್ಯೂ, ಈ ಲೈಸನ್ಸ್​ ಅವಧಿ, ಶುಲ್ಕಗಳು ಮತ್ತು ಅರ್ಜಿ ಪ್ರಕ್ರಿಯೆಯು 4 ರಾಜ್ಯಗಳಲ್ಲಿ (ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರ) ವಿಭಿನ್ನವಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಆಯಾ ರಾಜ್ಯಗಳು ಪ್ರಸ್ತುತ ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸೌಲಭ್ಯವನ್ನು ಇನ್ನಷ್ಟು ಸುಲಭವಾಗಿಸಿದೆ.

ಈ ವ್ಯವಸ್ಥೆ ಏಕೆ ಜಾರಿ?

ಈ ಅನುಮತಿ ವ್ಯವಸ್ಥೆಯ ಬೇರುಗಳು ಬ್ರಿಟಿಷರ ಕಾಲದ 'ಬೆಂಗಾಲ್ ಈಸ್ಟರ್ನ್ ಫ್ರಾಂಟಿಯರ್ ರೆಗ್ಯುಲೇಶನ್ - 1873' ಕಾಯ್ದೆಯಲ್ಲಿದೆ. ಆ ಸಮಯದಲ್ಲಿ, ಬ್ರಿಟಿಷ್ ಸರ್ಕಾರವು ಬಯಲು ಸೀಮೆಯ ಜನರು ಮುಕ್ತವಾಗಿ ಗುಡ್ಡಗಾಡು ಪ್ರದೇಶಗಳಿಗೆ ಹೋಗುವುದನ್ನು ತಡೆಯಲು ಈ 'ಇನ್ನರ್ ಲೈನ್' ನಿಬಂಧನೆಯನ್ನು ಪರಿಚಯಿಸಿತು. ಸ್ಥಳೀಯ ಬುಡಕಟ್ಟುಗಳೊಂದಿಗೆ ಘರ್ಷಣೆಯನ್ನು ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿತ್ತು. ಆದಾಗ್ಯೂ, ಸ್ವಾತಂತ್ರ್ಯದ ಬಳಿಕ ಈ ಕಾನೂನು ತನ್ನ ಸ್ವರೂಪವನ್ನು ಬದಲಾಯಿಸಿತು. ಈಶಾನ್ಯ ಭಾರತದಲ್ಲಿ ದಶಕಗಳಿಂದ ಅಸ್ತಿತ್ವದಲ್ಲಿದ್ದ ಬುಡಕಟ್ಟು ಬುಡಕಟ್ಟುಗಳ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭೂಮಿಯನ್ನು ರಕ್ಷಿಸಲು ಈ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.

ಅನುಮತಿ ನಿಯಮಗಳು ಹೇಗೆ? (ರಾಜ್ಯವಾರು)

ಅರುಣಾಚಲ ಪ್ರದೇಶ: ಈ ರಾಜ್ಯಕ್ಕೆ ಪ್ರಯಾಣಿಸಲು 'eILP' ಅಗತ್ಯವಿದೆ. ಇದು ಗರಿಷ್ಠ 14 ದಿನಗಳ ವಾಸ್ತವ್ಯವನ್ನು ಅನುಮತಿಸುತ್ತದೆ. ಸ್ಥಳೀಯರಲ್ಲದವರು 3 ದಿನಗಳವರೆಗೆ 300 ರೂ. ಮತ್ತು 14 ದಿನಗಳವರೆಗೆ 500 ರೂ. ರೂ. ಪಾವತಿಸಿ ಪಡೆಯಬೇಕು.

ನಾಗಾಲ್ಯಾಂಡ್

ಇತರೆ ರಾಜ್ಯಗಳಿಂದ ಬರುವ ಪ್ರವಾಸಿಗರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 30 ದಿನಗಳವರೆಗೆ ಮಾನ್ಯವಾಗಿರುವ ಪರವಾನಗಿಯ ಶುಲ್ಕವು 200 ರೂ. ರಸ್ತೆ ಮಾರ್ಗವಾಗಿ ಬರುವ ಪ್ರವಾಸಿಗರಿಗೆ ವಿಶೇಷ ಕೌಂಟರ್‌ಗಳೂ ಅಲ್ಲಲ್ಲಿ ಲಭ್ಯವಿವೆ.

ಮಿಜೋರಾಂ

ಈ ರಾಜ್ಯಕ್ಕೆ ಭೇಟಿ ಕೊಡುವ ಪ್ರವಾಸಿಗರಿಗೆ ಸಾಮಾನ್ಯವಾಗಿ ಸರ್ಕಾರದಿಂದ 15 ದಿನಗಳ ತಾತ್ಕಾಲಿಕ ಪರವಾನಗಿ ನೀಡಲಾಗುತ್ತದೆ. ಇದನ್ನು ಇನ್ನೂ 15 ದಿನಗಳವರೆಗೆ ವಿಸ್ತರಿಸಬಹುದು. ಅಗತ್ಯಕ್ಕೆ ಅನುಗುಣವಾಗಿ ಈ ರಾಜ್ಯದಲ್ಲಿ 6 ತಿಂಗಳ ಮಾನ್ಯತೆಯೊಂದಿಗೆ ನಿಯಮಿತ ಲೈಸನ್ಸ್​ ಸಹ ಲಭ್ಯವಿವೆ.

ಮಣಿಪುರ

ಮಣಿಪುರವನ್ನು ಡಿಸೆಂಬರ್ 2019ರಿಂದ ಈ ಐಎಲ್​ಪಿ ವ್ಯಾಪ್ತಿಗೆ ತರಲಾಗಿದೆ. ಈ ರಾಜ್ಯಕ್ಕೆ ಅಲ್ಪಾವಧಿಯ ಸಂದರ್ಶಕರಿಗೆ 30 ದಿನಗಳ ತಾತ್ಕಾಲಿಕ ಪರವಾನಗಿಯನ್ನು ನೀಡಲಾಗುತ್ತದೆ. ಇದಕ್ಕಾಗಿ 100 ರೂ. ಪಾವತಿಸಬೇಕು. ಈ ILP ಅನ್ನು ಇಂಫಾಲ್ ವಿಮಾನ ನಿಲ್ದಾಣ, ಮಾವೋ ಗೇಟ್ ಮತ್ತು ಜಿರಿಬಾಮ್ ಗೇಟ್‌ನಲ್ಲಿಯೂ ಪಡೆಯಬಹುದಾಗಿದೆ.

ಅಗತ್ಯವಿರುವ ಪ್ರಮಾಣಪತ್ರಗಳು

ಈ 4 ರಾಜ್ಯಗಳಿಗೆ ಹೋಗುವಾಗ ಅಥವಾ ಮಾರ್ಗ ಮೂಲಕ ಸಾಗುವಾಗ ಐಎಲ್​ಪಿಗೆ ಅರ್ಜಿ ಸಲ್ಲಿಸಲು ನೀವು ಅಧಿಕಾರಿಗಳಿಗೆ ಕೆಲವು ಪ್ರಮುಖ ದಾಖಲೆಗಳನ್ನು ನೀಡಬೇಕಿದೆ. ಫೋಟೋ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಪ್ರಯಾಣದ ವಿವರಗಳು ಮತ್ತು ಸ್ಥಳೀಯ ಪರಿಚಯಸ್ಥರಿದ್ದರೆ ಅವರ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಸೇರಿಸಬೇಕು. ಸಾಮಾನ್ಯವಾಗಿ, ಪ್ರವಾಸಕ್ಕೆ ಕೆಲವು ದಿನಗಳ ಮೊದಲು ನೀವು ಆಯಾ ರಾಜ್ಯಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ನಿಯಮಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿದರೆ ಉತ್ತಮ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net