ಬಿಜು ಪಟ್ನಾಯಕ್ ಬಗ್ಗೆ ಹೇಳಿಕೆ; ಮೆಂಟಲ್ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಬೇಕು; ನಿಶಿಕಾಂತ್ ದುಬೆ ವಿರುದ್ಧ ಮಾಜಿ ಸಿಎಂ ನವೀನ್ ಪಟ್ನಾಯಕ್ ವಾಗ್ದಾಳಿ | Naveen Patnaik

ಮಾಜಿ ಸಿಎಂ ನವೀನ್ ಪಟ್ನಾಯಕ್ ಮತ್ತು ಸಂಸದ ನಿಶಿಕಾಂತ್ ದುಬೆ
ಮಾಜಿ ಸಿಎಂ ನವೀನ್ ಪಟ್ನಾಯಕ್ ಮತ್ತು ಸಂಸದ ನಿಶಿಕಾಂತ್ ದುಬೆ
Published on
ಭುವನೇಶ್ವರ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅಮೆರಿಕದ ಸಿಐಎ ನಡುವೆ ಬಿಜು ಪಟ್ನಾಯಕ್ ಏಜೆಂಟ್ ಆಗಿದ್ದರು ಎಂಬ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ನವೀನ್ ಪಟ್ನಾಯಕ್, ಬಿಜೆಪಿ ಸಂಸದನಿಗೆ ಮೆಂಟಲ್ ಡಾಕ್ಟರ್ ಬಳಿ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸೋಮವಾರ(ಮಾ. 30) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜು ಬಾಬು ಬಗ್ಗೆ ಹೇಳಲಾದ ಅತಿರೇಕದ ಮಾತುಗಳನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಚೀನಾದ ಸಂಘರ್ಷದ ಸಮಯದಲ್ಲಿ ಕಾರ್ಯತಂತ್ರಕ್ಕೆ ಸಹಾಯ ಮಾಡಲು ಪ್ರಧಾನಿ ಜವಾಹರಲಾಲ್ ನೆಹರು ಅವರು ಒಡಿಶಾದ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಯಲ್ಲಿ ತಮ್ಮ ಪಕ್ಕದಲ್ಲಿ ಒಂದು ಕಚೇರಿಯನ್ನು ನೀಡಿದ್ದರು ಎಂದು ಅವರಿಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ.
ಆಗ ನನಗೆ ಸುಮಾರು 13 ವರ್ಷ, ಆದರೆ ಚೀನಾದ ದಾಳಿಯಿಂದ ಬಿಜು ಬಾಬು ಎಷ್ಟು ಕೋಪಗೊಂಡಿದ್ದರು ಮತ್ತು ಅದನ್ನು ಹಿಮ್ಮೆಟ್ಟಿಸಲು ಅವರು ಎಷ್ಟು ಮಾಡಿದರು ಎಂದು ನನಗೆ ನೆನಪಿದೆ. ಅಂತಹ ಅತಿರೇಕದ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಸಂಸದರಿಗೆ ಮಾನಸಿಕ ವೈದ್ಯರ ಗಮನ ಬೇಕು ಎಂದು ನಾನು ಭಾವಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
ಮಾರ್ಚ್ 27ರಂದು ಮಾತನಾಡಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, 1960ರ ದಶಕದ ಚೀನಾದೊಂದಿಗಿನ ಯುದ್ಧದ ಸಮಯದಲ್ಲಿ ಒಡಿಶಾದ ಸಿಎಂ ಆಗಿದ್ದ ಬಿಜು ಪಟ್ನಾಯಕ್ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಸಿಐಎ ನಡುವಿನ ಕೊಂಡಿಯಾಗಿದ್ದರು ಎಂದು ಹೇಳಿದ್ದರು.
ದುಬೆ ಅವರ ಹೇಳಿಕೆಗೆ ಒಡಿಶಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ದಿವಂಗತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಸಿಎಂ ಬಿಜು ಪಟ್ನಾಯಕ್ ಹೆಸರು ಎಳೆದು ತಂದು ಒಡಿಶಾದ ಹೆಮ್ಮೆಯನ್ನು ಅವಮಾನಿಸಿದ್ದಾರೆ ಎಂದು ಟೀಕಿಸಿದ್ದಾರೆ. ಏತನ್ಮದ್ಯೆ, ಬಿಜೆಡಿ ಸಂಸದ ಸಸ್ಮಿತ್ ಪಾತ್ರ ದುಬೆ ನೇತೃತ್ವದ ಸಂಸದೀಯ ಸಮಿತಿಗೆ ರಾಜೀನಾಮೆ ನೀಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net