

ಯುವರಂಗದ ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯನ್ನು ದೇಶದ ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ‘ಸ್ಟಾರ್ಟಪ್ ಇಂಡಿಯಾ’ ಕಾರ್ಯಕ್ರಮ ದಶಕವನ್ನು ಪೂರೈಸಿದ್ದು, ಈ ಕ್ಷೇತ್ರದ ಬೆಳವಣಿಗೆ ಆಶಾವಾದ ಮೂಡಿಸಿದೆ. ಭಾರತದಲ್ಲಿ ನವೋದ್ಯಮಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದ್ದು, ಈ ಮೂಲಕ ಉದ್ಯೋಗಸೃಷ್ಟಿಯ ಪ್ರಮಾಣವೂ ಹೆಚ್ಚಳಗೊಂಡಿದೆ. ಈ ಬೆಳವಣಿಗೆ ಕುರಿತಾದ ಅವಲೋಕನ ಇಲ್ಲಿದೆ.
ದೇಶದಲ್ಲಿ 2026ರ ನವೆಂಬರ್ ವೇಳೆಗೆ ನವೋದ್ಯಮಗಳ ಸಂಖ್ಯೆ 2.62 ಲಕ್ಷಕ್ಕೆ ತಲುಪಿದೆ. ಈ ಮೂಲಕ ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2026ರ ಅಕ್ಟೋಬರ್ ವೇಳೆಗೆ ನವೋದ್ಯಮಗಳು 25 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ನೀಡಿವೆ. ಒಂದೇ ವರ್ಷದಲ್ಲಿ ದೇಶದಲ್ಲಿ 55,200ಕ್ಕೂ ಹೆಚ್ಚು ಹೊಸ ಸ್ಟಾರ್ಟಪ್ಗಳು ಪ್ರಾರಂಭವಾಗಿವೆ.
‘ಸ್ಟಾರ್ಟಪ್ ಇಂಡಿಯಾ ಅಭಿಯಾನ’ ಪ್ರಾರಂಭವಾದ ನಂತರ ಒಂದೇ ಆರ್ಥಿಕ ವರ್ಷದಲ್ಲಿ ದಾಖಲಾದ ಅತಿ ದೊಡ್ಡ ಸಂಖ್ಯೆ ಇದಾಗಿದೆ. ದೇಶದ 1.07 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್ಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ಪಾಲುದಾರರಿದ್ದಾರೆ. ಇದು ಒಟ್ಟು ಸ್ಟಾರ್ಟಪ್ಗಳ ಸುಮಾರು 48%ರಷ್ಟಿದೆ. ಭಾರತದ ಅರ್ಧದಷ್ಟು ಸ್ಟಾರ್ಟಪ್ಗಳು ಟೈಯರ್ 2-3 ನಗರಗಳಿಂದ ಬರುತ್ತಿವೆ. 19,400ಕ್ಕೂ ಹೆಚ್ಚು ಪೇಟೆಂಟ್ಗಳಿಗಾಗಿ ಸ್ಟಾರ್ಟಪ್ಗಳು ಅರ್ಜಿ ಸಲ್ಲಿಸಿವೆ. 2025-26ರ ಆರ್ಥಿಕ ವರ್ಷದಲ್ಲಿ 4,480ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
2016ರಲ್ಲಿ ಆರಂಭವಾದ ಸ್ಟಾರ್ಟಪ್ ಇಂಡಿಯಾ ಅಭಿಯಾನ ಮತ್ತು 2026ರ ಫೆಬ್ರವರಿಯಲ್ಲಿ ಪರಿಷ್ಕರಿಸಲಾದ ನವೋದ್ಯಮ ನಿಯಮಗಳು ಈ ಬೆಳವಣಿಗೆಗೆ ದೊಡ್ಡ ಬಲವನ್ನು ನೀಡಿವೆ.
ಫಂಡ್ ಆಫ್ ಫಂಡ್ಸ್ (ಎಫ್ಎಫ್ಎಸ್): ಈ ಯೋಜನೆಯಡಿ 166 ಪರ್ಯಾಯ ಹೂಡಿಕೆ ನಿಧಿಗಳಿಗೆ ರೂ 12,623 ಕೋಟಿ ಮೀಸಲಿಡಲಾಗಿದ್ದು, ಈ ಅಕ್ಟೋಬರ್ ವೇಳೆಗೆ 1,475 ನವೋದ್ಯಮಗಳಲ್ಲಿ ರೂ 28,254 ಕೋಟಿ ಹೂಡಿಕೆ ಮಾಡಲಾಗಿದೆ. ಇದರ ಮುಂದುವರಿದ ಭಾಗವಾಗಿ ರೂ 10,000 ಕೋಟಿ ಮೊತ್ತದ ‘ಫಂಡ್ ಆಫ್ ಫಂಡ್ಸ್ 2.0’ ಅನ್ನು ಸಹ ಘೊಷಿಸಲಾಗಿದೆ.
ಸ್ಟಾರ್ಟಪ್ ಇಂಡಿಯಾ ಸೀಡ್ ಫಂಡ್ (ಎಸ್ಐಎಸ್ಎಫ್ಎಸ್): ಮೂವತ್ತೆರಡು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ 244 ಇನ್ಕ್ಯುಬೇಟರ್ಗಳ ಮೂಲಕ 4,194 ನವೋದ್ಯಮಗಳಿಗೆ ರೂ775.67 ಕೋಟಿ ಆರಂಭಿಕ ಬಂಡವಾಳ ಅನುಮೋದಿಸಲಾಗಿದೆ. ಇದರಲ್ಲಿ 2,147 ಮಹಿಳಾ ನೇತೃತ್ವದ ಹಾಗೂ 2,356 ಟೈಯರ್-2 ಮತ್ತು ಟೈಯರ್-3 ನಗರಗಳ ನವೋದ್ಯಮಗಳು ಸೇರಿವೆ.
ಕ್ರೆಡಿಟ್ ಗ್ಯಾರಂಟಿ ಯೋಜನೆ (ಸಿಜಿಎಸ್ಎಸ್): ಪ್ರತಿ ಸಾಲಗಾರನಿಗೆ ಖಾತರಿ ಮಿತಿಯನ್ನು ರೂ 20 ಕೋಟಿಗೆ ದ್ವಿಗುಣಗೊಳಿಸಲಾಗಿದೆ. 2026ರ ಅಕ್ಟೋಬರ್ ವೇಳೆಗೆ 532 ಸಾಲಗಳಿಗೆ ಒಟ್ಟು ರೂ 1,662.71 ಕೋಟಿ ಖಾತರಿ ನೀಡಲಾಗಿದ್ದು, ಈ ಸಂಸ್ಥೆಗಳು 41,637 ಜನರಿಗೆ ಉದ್ಯೋಗ ನೀಡಿವೆ.
ಸರ್ಕಾರಿ ಇ-ಮಾರುಕಟ್ಟೆ: ಸಾರ್ವಜನಿಕ ಖರೀದಿ ವೇದಿಕೆಯಾದ ಮೂಲಕ ನವೋದ್ಯಮಗಳಿಗೆ ದೊಡ್ಡ ಮಾರುಕಟ್ಟೆ ಸಿಕ್ಕಿದ್ದು, 2025-26ರಲ್ಲಿ -ಠಿ;19,190 ಕೋಟಿಗೂ ಅಧಿಕ ಮೌಲ್ಯದ 1.40 ಲಕ್ಷಕ್ಕೂ ಹೆಚ್ಚು ಆರ್ಡರ್ಗಳನ್ನು ನವೋದ್ಯಮಗಳಿಗೆ ನೀಡಲಾಗಿದೆ.
ಮಹಿಳಾ ಸಬಲೀಕರಣ: ದೇಶದ 1.07 ಲಕ್ಷಕ್ಕೂ ಹೆಚ್ಚು ಮಾನ್ಯತೆ ಪಡೆದ ನವೋದ್ಯಮಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿ ಅಥವಾ ಪಾಲುದಾರರಿದ್ದಾರೆ (ಸುಮಾರು 48%). ಗ್ರಾಮೀಣ ಉದ್ಯಮಶೀಲತಾ ಕಾರ್ಯಕ್ರಮ (Job Seekers to Job Creators) ಮತ್ತು ಸ್ವಾವಲಂಬಿನಿ ಯೋಜನೆಗಳು ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಉದ್ಯಮಿಗಳಿಗೆ ಆರ್ಥಿಕ ಶಕ್ತಿ ತುಂಬುತ್ತಿವೆ.
ಮೆಟ್ರೋ ನಗರಗಳ ಆಚೆಗೆ ವಿಸ್ತರಣೆ: ದೇಶದ ಅರ್ಧದಷ್ಟು ನವೋದ್ಯಮಗಳು ಬೆಂಗಳೂರು, ಮುಂಬೈ, ದೆಹಲಿಯಂತಹ ಮೆಟ್ರೋ ನಗರಗಳಲ್ಲಿ ಮತ್ತು ಇನ್ನು ಶೇ.50ರಷ್ಟು ನವೋದ್ಯಮಗಳು ಟೈಯರ್-2 ಮತ್ತು ಟೈಯರ್-3 ನಗರಗಳಿಂದ ಕಾರ್ಯನಿರ್ವಹಿಸುತ್ತಿವೆ. ಅಟಲ್ ಇನ್ನೋವೇಶನ್ ಮಿಷನ್ (AIM 2.0) ಮತ್ತು MeitY ಸ್ಟಾರ್ಟಪ್ ಹಬ್ (6,149+ ಸ್ಟಾರ್ಟಪ್ಗಳು ಮತ್ತು 518 ಇನ್ಕ್ಯುಬೇಟರ್ಗಳು) ಸಣ್ಣ ಪಟ್ಟಣಗಳ ನಾವೀನ್ಯತೆಗೆ ವೇದಿಕೆಯಾಗಿವೆ.
ಬೌದ್ಧಿಕ ಆಸ್ತಿ: ಭಾರತೀಯ ನವೋದ್ಯಮಗಳು ಸೇವಾ ವಲಯಕ್ಕೆ ಸೀಮಿತವಾಗದೆ, ಕೃತಕ ಬುದ್ಧಿಮತ್ತೆ (ಎಐ), ಬಯೋಟೆಕ್ನಾಲಜಿ, ಬಾಹ್ಯಾಕಾಶ, ರಕ್ಷಣೆ ಮತ್ತು ಹಸಿರು ಇಂಧನದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿವೆ. ಇದುವರೆಗೆ ಸಲ್ಲಿಕೆಯಾದ 19,400ಕ್ಕೂ ಹೆಚ್ಚು ಪೇಟೆಂಟ್ ಅರ್ಜಿಗಳಲ್ಲಿ ಕಳೆದ ಒಂದೇ ವರ್ಷದಲ್ಲಿ (2025-26) 4,480ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಭಾರತವು ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಬೆಳೆಯುತ್ತಿರುವುದನ್ನು ದೃಢಪಡಿಸುತ್ತದೆ.
ಭಾರತದ ನವೋದ್ಯಮಗಳು 2026ರ ಅಕ್ಟೋಬರ್ ಅಂತ್ಯದ ವೇಳೆಗೆ 25 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿವೆ. 2024-25ರ ಆರ್ಥಿಕ ವರ್ಷದಲ್ಲಿ 3,66,870ಕ್ಕೂ ಹೆಚ್ಚು ನೇರ ಉದ್ಯೋಗಗಳು ಸೃಷ್ಟಿಯಾಗಿದ್ದರೆ, 2025-26ರ ಆರ್ಥಿಕ ವರ್ಷವೊಂದರಲ್ಲೇ 4,99,400ಕ್ಕೂ ಹೆಚ್ಚು ಹೊಸ ಉದ್ಯೋಗಗಳು ಸೇರ್ಪಡೆಯಾಗಿವೆ (ಶೇಕಡ 36.1ರಷ್ಟು ಬೆಳವಣಿಗೆ). ದೇಶದ ಜನಸಂಖ್ಯೆಯ 65%ರಷ್ಟು ಭಾಗ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಯುವಜನತೆ ‘ಉದ್ಯೋಗ ಅರಸುವವರಿಂದ ಉದ್ಯೋಗ ನೀಡುವವರಾಗಿ’ (ಒಟಚಿ ಖಛಿಛಿkಛ್ಟಿಠ ಠಿಟ ಒಟಚಿ ಇಛಿಚಠಿಟ್ಟಠ) ಬದಲಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಉದಯೋನ್ಮುಖ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದ್ದು, 2030ರ ಏಪ್ರಿಲ್ 1ರ ಮೊದಲು ಸ್ಥಾಪನೆಯಾಗುವ ಅರ್ಹ ಸ್ಟಾರ್ಟಪ್ಗಳು ಸತತ ಮೂರು ವರ್ಷಗಳವರೆಗೆ ತೆರಿಗೆ ಪೋ›ತ್ಸಾಹವನ್ನು ಪಡೆಯಲಿವೆ. ದೇಶದಲ್ಲಿ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಅಹಮದಾಬಾದ್, ಚೆನ್ನೈ ನಗರಗಳು ಹೆಚ್ಚಿನ ಸಂಖ್ಯೆಯ ನವೋದ್ಯಮಗಳನ್ನು ಹೊಂದಿವೆ. ‘ಭಾರತ ನವೋದ್ಯಮಕ್ಕೆ ಪ್ರಶಸ್ತ ತಾಣ’ ಎಂದು ಹಲವು ವರದಿಗಳು ಉಲ್ಲೇಖಿಸಿವೆ. ಮುಖ್ಯವಾಗಿ, ಯುವಕರು ನವೋದ್ಯಮಕರ್ತರಾಗಲು ಬಯಸುತ್ತಿದ್ದು ಈ ನಿಟ್ಟಿನಲ್ಲಿ ಸ್ಟಾರ್ಟಪ್ಗಳನ್ನು ಸ್ಥಾಪಿಸುತ್ತಿದ್ದಾರೆ. ಭಾರತ ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ಇ-ಕಾಮರ್ಸ್ಗೆ
ಸಂಬಂಧಿಸಿದ ಸ್ಟಾರ್ಟಪ್ಗಳನ್ನು ಹೊಂದಿದೆ. ಭಾರತದಲ್ಲಿ ಗ್ರಾಹಕರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಇಂಟರ್ನೆಟ್ನ ತಲುಪುವಿಕೆ ವ್ಯಾಪ್ತಿಯೂ ಹೆಚ್ಚಳವಾಗಿದೆ. ಈ ಎರಡು ಸಂಗತಿಗಳು ಸ್ಟಾರ್ಟಪ್ ರಂಗಕ್ಕೆ ಬಲ ತುಂಬಿವೆ. ಈ ರಂಗ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವು ಸಾಮಾಜಿಕ ಸಮಸ್ಯೆಗಳಿಗೂ ಪರಿಹಾರ ಒದಗಿಸಲು ನೆರವಾಗುತ್ತಿದೆ. ಐಐಟಿ, ಐಐಎಂನಲ್ಲಿ ಉನ್ನತ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪೈಕಿ ಸಾಕಷ್ಟು ಜನರು ಎಂಎನ್ಸಿ ಕಂಪನಿಗಳ ದೊಡ್ಡ ಸಂಬಳದ ಕೆಲಸಕ್ಕೆ ಹೋಗದೆ ಸ್ವಂತದ್ದಾದ ಸ್ಟಾರ್ಟಪ್ಗಳನ್ನು ಆರಂಭಿಸಿ, ಗಮನ ಸೆಳೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಸ್ಟಾರ್ಟಪ್ಗಳು ಭಾರತದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಲಿವೆ ಎಂದು ವಿಶ್ಲೇಷಿಸಲಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತ ಸೃಜನಶೀಲತೆ ಮತ್ತು ತಂತ್ರಜ್ಞಾನದ ಬಲದಿಂದ ಹೊಸ ಮೈಲಿಗಲ್ಲು ಸಾಧಿಸಲು ಇದು ಸಕಾಲ.
ವಹಿವಾಟು ಮಿತಿ 200 ಕೋಟಿ ರೂ.ಗೆ ಏರಿಕೆ: ಸ್ಟಾರ್ಟಪ್ಗಳ ಮಾನ್ಯತೆಯ ಮಾನದಂಡಗಳನ್ನು ಕೇಂದ್ರ ಸರ್ಕಾರ ಇದೇ ವರ್ಷದ ಫೆಬ್ರವರಿಯಲ್ಲಿ ಪರಿಷ್ಕರಿಸಿದೆ. ಸ್ಟಾರ್ಟಪ್ ಎಂದು ಪರಿಗಣಿಸಲು ಇದ್ದ ವಾರ್ಷಿಕ ವಹಿವಾಟಿನ ಮಿತಿಯನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ 100 ಕೋಟಿ ರೂ.ನಿಂದ 200 ಕೋಟಿ ರೂ.ಗೆ ಏರಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುವ ಸಂಸ್ಥೆಗಳಿಗಾಗಿ ‘ಡೀಪ್ ಟೆಕ್ ಸ್ಟಾರ್ಟಪ್’ ಎಂಬ ಹೊಸ ವಿಭಾಗವನ್ನು ಪರಿಚಯಿಸಲಾಗಿದೆ. ಇಂತಹ ಉದ್ಯಮಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಸಮಯ ಬೇಕಾಗುವುದರಿಂದ, ಅವುಗಳ ವಯೋಮಿತಿಯನ್ನು 10 ವರ್ಷದಿಂದ 20 ವರ್ಷಕ್ಕೆ ಮತ್ತು ವಹಿವಾಟಿನ ಮಿತಿಯನ್ನು 300 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಸಹಕಾರ ಸಂಘಗಳಿಗೂ ಅವಕಾಶ: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ, ಸ್ಟಾರ್ಟಪ್ ಮಾನ್ಯತೆ ಪಡೆಯಲು ಈಗ ಸಹಕಾರ ಸಂಘಗಳಿಗೂ ಸರ್ಕಾರ ಅವಕಾಶ ನೀಡಿದೆ. ಈ ಬದಲಾವಣೆಗಳಿಂದಾಗಿ ಹೆಚ್ಚಿನ ಉದ್ಯಮಗಳು ಆದಾಯ ತೆರಿಗೆ ವಿನಾಯಿತಿ ಮತ್ತು ಸರ್ಕಾರದ ಇತರ ಸೌಲಭ್ಯಗಳನ್ನು ಪಡೆಯಲು ಅರ್ಹವಾಗಲಿವೆ.
2.1 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗ ಗಳನ್ನು ಸೃಷ್ಟಿಸುವ ಮೂಲಕ ಮಾಹಿತಿ ತಂತ್ರಜ್ಞಾನ ಸೇವೆಗಳು ನವೋದ್ಯಮಗಳ ಉದ್ಯೋಗ ಸೃಷ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ಸಾಫ್ಟ್ವೇರ್ ಅಭಿವೃದ್ಧಿ, ಕ್ಲೌಡ್ ಸೇವೆಗಳು ಮತ್ತು ಎಐ ಆಧಾರಿತ ಕಂಪನಿಗಳು ಇದಕ್ಕೆ ಪ್ರಮುಖ ಕಾರಣ.
ಆರೋಗ್ಯ ರಕ್ಷಣೆ ಮತ್ತು ಜೀವವಿಜ್ಞಾನವು ಎರಡನೇ ಅತಿ ದೊಡ್ಡ ಉದ್ಯೋಗದಾತ ರಂಗವಾಗಿದ್ದು, 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಟೆಲಿಮೆಡಿಸಿನ್, ಔಷಧ ಸಂಶೋಧನೆ ಮತ್ತು ವೈದ್ಯಕೀಯ ತಂತ್ರಜ್ಞಾನ ನವೋದ್ಯಮಗಳು ವೇಗವಾಗಿ ಬೆಳೆಯುತ್ತಿವೆ.
ಆಹಾರ ಮತ್ತು ಪಾನೀಯ ನವೋದ್ಯಮಗಳು 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ. ಆಹಾರ ಸಂಸ್ಕರಣೆ, ಪ್ಯಾಕೇಜ್ಡ್ ಆಹಾರ, ಕ್ಲೌಡ್ ಕಿಚನ್ಗಳ ವಿಸ್ತರಣೆ ಇದಕ್ಕೆ ಪೂರಕವಾಗಿದೆ.
ವೃತ್ತಿಪರ ಮತ್ತು ವಾಣಿಜ್ಯ ಸೇವೆಗಳು 1 ಲಕ್ಷದ ಆಸುಪಾಸಿನಲ್ಲಿ ಉದ್ಯೋಗಾವಕಾಶಗಳನ್ನು ನೀಡಿವೆ. ಸಲಹಾ ಸೇವೆಗಳು, ಮಾನವ ಸಂಪನ್ಮೂಲ ಮತ್ತು ಬಿಜಿನೆಸ್ ಸಪೋರ್ಟ್ ನವೋದ್ಯಮಗಳು ಇದರಲ್ಲಿ ಸೇರಿವೆ.
ನಿರ್ವಣ ಮತ್ತು ರಿಯಲ್ ಎಸ್ಟೇಟ್ನ ನವೋದ್ಯಮಗಳು 95,000ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿವೆ.
ಕರ್ನಾಟಕ ನಂ.2
ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನವೋದ್ಯಮಗಳು ವ್ಯಾಪಿಸಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. 2026ರ ಮಾರ್ಚ್ 31ರ ಅಂಕಿಅಂಶಗಳ ಪ್ರಕಾರ, ಅತಿ ಹೆಚ್ಚು ನವೋದ್ಯಮಗಳು, ಉದ್ಯೋಗ ಸೃಷ್ಟಿಸಿರುವ ಅಗ್ರ 5 ರಾಜ್ಯಗಳು.