ಮೊದಲು ದೇವಸ್ಥಾನಗಳಿಂದಲೇ ಶುರುಮಾಡಿ..ಮಸೀದಿಗಳ ಸಮೀಕ್ಷೆ ವಿರುದ್ಧ ಮೆಹಬೂಬಾ ಮುಫ್ತಿ ಕೆಂಡಾಮಂಡಲ | Mehbooba Mufti

 Mehbooba Mufti | ಮಾಜಿ ಮುಖ್ಯಮಂತ್ರಿ ನಾಯಕಿ ಮೆಹಬೂಬಾ ಮುಫ್ತಿ
Mehbooba Mufti | ಮಾಜಿ ಮುಖ್ಯಮಂತ್ರಿ ನಾಯಕಿ ಮೆಹಬೂಬಾ ಮುಫ್ತಿ
Published on
ಶ್ರೀನಗರ: ಕಾಶ್ಮೀರದಲ್ಲಿನ ಮಸೀದಿಗಳ ವಿವರ ಸಂಗ್ರಹಿಸುವ ಮೊದಲು ದೇವಾಲಯಗಳು ಮತ್ತು ಹಿಂದೂ ಅರ್ಚಕರ ಮಾಹಿತಿ ಸಂಗ್ರಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ನಾಯಕಿ ಮೆಹಬೂಬಾ ಮುಫ್ತಿ ತಿರುಗೇಟು ನೀಡಿದ್ದು, ಮಸೀದಿಗಳು ಮತ್ತು ಇಮಾಮ್‌ಗಳ ಕುರಿತು ನಡೆಯುತ್ತಿರುವ ಮಾಹಿತಿ ಸಂಗ್ರಹಿಸುವಿಕೆಯನ್ನು ಟೀಕಿಸಿದ್ದಾರೆ.
ಸರ್ಕಾರ ಈ ಕ್ರಮದ ಮೂಲಕ ಮುಸ್ಲಿಮರ ಮೇಲಿನ ದ್ವೇಷ ಮತ್ತು ಭಯದ ಮನೋರೋಗವನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಧಾರ್ಮಿಕ ಸ್ಥಳಗಳ ಪ್ರೊಫೈಲ್ ಮಾಡಬೇಕಾದರೆ ದೇವಾಲಯಗಳಿಂದ ಪ್ರಾರಂಭಿಸಬೇಕು, ಯಾವ ದೇವಾಲಯವು ದಲಿತರಿಗೆ ಪ್ರವೇಶವನ್ನು ಅನುಮತಿಸುತ್ತದೆ ಮತ್ತು ಯಾವುದು ಬ್ರಾಹ್ಮಣರಿಗೆ ಅವಕಾಶ ನೀಡುತ್ತದೆ ಎನ್ನುವುದನ್ನು ಮೊದಲು ಪತ್ತೆ ಹಚ್ಚಲಿ, ದಲಿತರಿಗೆ ಪ್ರವೇಶ ನೀಡಲು ಪುರೋಹಿತರು ಹಣ ಪಡೆಯುತ್ತಿರುವ ದೇವಾಲಯಗಳ ಪ್ರೊಫೈಲ್ ಅನ್ನು ನೀವು ಪ್ರಾರಂಭಿಸಬೇಕು ಎಂದು ಮುಫ್ತಿ ಸವಾಲ್​ ಹಾಕಿದರು.
ವಕ್ಫ್ ಕಾನೂನನ್ನು ತಿದ್ದುಪಡಿ ಮಾಡಿದ ಬಳಿಕ ಸರ್ಕಾರ ಈಗ ಮಸೀದಿಗಳಿಗಾಗಿ ತಂತ್ರ ಹೆಣೆದಿದೆ, ಈ ಮಾದರಿಯನ್ನು ದೇಶ್ಯಾದ್ಯಂತ ಜಾರಿಗೆ ತರುವ ಷಡ್ಯಂತ್ರ ನಡೆಯುತ್ತಿದ್ದು, ಪ್ರೊಫೈಲ್ ಮಾಡುವ ಮೂಲಕ ಮಸೀದಿಗಳನ್ನು ಅಪರಾಧ ಸ್ಥಳಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರ್ಯಾಚರಣೆಯನ್ನು ದೇವಾಲಯಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳಂತಹ ಇತರ ಧಾರ್ಮಿಕ ಸ್ಥಳಗಳ ವಿಷಯದಲ್ಲಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾಶ್ಮೀರದಲ್ಲಿರುವ ಎಲ್ಲಾ ಮಸೀದಿಗಳು ತಾವು ಅನುಸರಿಸುತ್ತಿರುವ ಚಿಂತನೆಯ ಪಂಥದ ವಿವರಗಳನ್ನು, ಅದರ ಇಮಾಮ್ ಮತ್ತು ಧರ್ಮೋಪದೇಶಕರ ರುಜುವಾತುಗಳನ್ನು ಮತ್ತು ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಪೊಲೀಸರು ಕೇಳಿರುವುದಾಗಿ ವರದಿಯಾಗಿದೆ. ಮಸೀದಿ ನಿರ್ಮಿಸಲಾಗಿರುವ ಭೂಮಿಯ ಕಂದಾಯ ದಾಖಲೆಗಳು ಮತ್ತು ನಿರ್ವಹಣಾ ಸಮಿತಿಯ ಸದಸ್ಯರ ರುಜುವಾತುಗಳು. ಅದೇ ರೀತಿ, ಎಲ್ಲಾ ಸೆಮಿನರಿಗಳು ಮತ್ತು ಮದರಸಾಗಳು ಸಹ ಈ ವಿವರಗಳನ್ನು ಒದಗಿಸುವಂತೆ ಕೇಳಲಾಗಿದೆ.
ಶ್ರೀನಗರದ ಮಸೀದಿಯ ಇಮಾಮ್ ಆಗಿದ್ದ ಮೌಲ್ವಿ ಇರ್ಫಾನ್ ಅಹ್ಮದ್ ವಾಗೆ ಅವರನ್ನು ನವೆಂಬರ್ 10 ರಂದು ನಡೆದ ವೈಟ್-ಕಾಲರ್ ಭಯೋತ್ಪಾದನಾ ಘಟಕ ಮತ್ತು ದೆಹಲಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸಿದ ಬಳಿಕ ಮಸೀದಿಗಳು ಮತ್ತು ಇಮಾಮ್‌ಗಳ ಪ್ರೊಫೈಲ್ ಸಂಗ್ರಹಿಸುವ ಕಾರ್ಯ ಪ್ರಾರಂಭವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶ್ರೀನಗರ ಸಂಸದ ಅಗಾ ರುಹುಲ್ಲಾ ಕಿಡಿ

ಶ್ರೀನಗರ ಸಂಸದ ಅಗಾ ರುಹುಲ್ಲಾ ಈ ಕ್ರಮವನ್ನು ಖಂಡಿಸಿದ್ದು, ಇದು ನಂಬಿಕೆ ಕೇಂದ್ರಗಳನ್ನು ನಿಯಂತ್ರಿಸುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ. ಇದು ಇಮಾಮ್‌ಗಳನ್ನು ಬೆದರಿಸುವ ಮತ್ತು ಧಾರ್ಮಿಕ ಆಚರಣೆಗಳನ್ನು ನಿಯಂತ್ರಿಸುವ ಪ್ರಯತ್ನವಾಗಿದೆ. ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ನಿಂದ ಪರಿಶೀಲನೆಯ ನಂತರವೇ ಇಮಾಮ್‌ಗಳಿಗೆ ಧರ್ಮೋಪದೇಶ ನೀಡಲು ಅವಕಾಶ ನೀಡಲಾಗುವುದು ಎಂದು ತೋರುತ್ತದೆ. ಇದು ಧರ್ಮದ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಸ್ಪಷ್ಟ ಪ್ರಯತ್ನವಾಗಿದೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net