ಸ್ಥಿರತೆ-ಪ್ರಗತಿಯ ಪಾಲುದಾರಿಕೆ

Stability-Progress Partnership
Stability-Progress Partnership
Published on
ನರೇಂದ್ರ ಮೋದಿ-ಮ್ಯಾಕ್ರನ್ ಮಾತುಕತೆ | 21 ಒಪ್ಪಂದಗಳಿಗೆ ಭಾರತ-ಫ್ರಾನ್ಸ್ ಸಹಿ
ಮುಂಬೈ: ಭಾರತ ಮತ್ತು ಫ್ರಾನ್ಸ್ ಪಾಲುದಾರಿಕೆಗೆ ಯಾವುದೇ ಗಡಿಗಳಿಲ್ಲ. ಇದು ಆಳವಾದ ಸಾಗರದಿಂದ ಹಿಡಿದು ಎತ್ತರದ ಪರ್ವತಗಳವರೆಗೆ ತಲುಪಬಲ್ಲದು. ಜಾಗತಿಕ ರಾಜಕೀಯ ಅಸ್ಥಿರತೆ ನಡುವೆ ಭಾರತ-ಫ್ರಾನ್ಸ್ ಸಂಬಂಧ ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಗೆ ಏರಿದ್ದು, ಇದು ಜಾಗತಿಕ ಸ್ಥಿರತೆಗೆ ಶಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತದ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜತೆ ಪ್ರಧಾನಿ ಮೋದಿ ಮುಂಬೈನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಮೋದಿ, ‘ವಿಶ್ವ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಇಂಥ ವೇಳೆ ಭಾರತದ ಸಾಮರ್ಥ್ಯದ ಜತೆ ಫ್ರಾನ್ಸ್​ನ ಪರಿಣತಿ ಒಗ್ಗೂಡಿಸುತ್ತಿದ್ದೇವೆ. ಎರಡೂ ದೇಶಗಳು ಅತ್ಯಂತ ವಿಶೇಷ ಸಂಬಂಧ ಹೊಂದಿದ್ದು, ಭಾರತದ ಅತ್ಯಂತ ಹಳೇ ಕಾರ್ಯತಂತ್ರದ ಪಾಲುದಾರರಲ್ಲಿ ಫ್ರಾನ್ಸ್ ಕೂಡ ಒಂದಾಗಿದೆ. ನಮ್ಮ ನಡುವಿನ ಪಾಲುದಾರಿಕೆ ಕೇವಲ ಕಾರ್ಯತಂತ್ರಕ್ಕೆ ಸೀಮಿತವಾಗಿಲ್ಲ. ಇಂದಿನ ಅಸ್ಥಿರ ಯುಗದಲ್ಲಿ ಜಾಗತಿಕ ಸ್ಥಿರತೆ ಮತ್ತು ಜಾಗತಿಕ ಪ್ರಗತಿಯ ಪಾಲುದಾರಿಕೆ ಆಗಿದೆ’ ಎಂದು ತಿಳಿಸಿದರು.
ಕೆಲವೇ ದಿನಗಳ ಹಿಂದೆ ನಾವು ಐರೋಪ್ಯ ಒಕ್ಕೂಟದೊಂದಿಗೆ ಅತ್ಯಂತ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಈ ಮುಕ್ತ ವ್ಯಾಪಾರ ಒಪ್ಪಂದ ಭಾರತ-ಫ್ರಾನ್ಸ್ ಸಂಬಂಧಗಳಿಗೂ ವೇಗ ನೀಡಲಿದೆ. ಪರಸ್ಪರ ಹೂಡಿಕೆ ಉತ್ತೇಜಿಸಲು ಇಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದ ನಮ್ಮ ಜನರು ಮತ್ತು ಕಂಪನಿಗಳು ಎರಡು ಬಾರಿ ತೆರಿಗೆ ಪಾವತಿಸುವ ವ್ಯವಸ್ಥೆ ಕೊನೆಗೊಳ್ಳಲಿದೆ. ಎಲ್ಲ ಉಪಕ್ರಮಗಳು ಪರಸ್ಪರ ವ್ಯಾಪಾರ, ಹೂಡಿಕೆ ಮತ್ತು ಚಲನಶೀಲತೆಗೆ ಹೊಸ ವೇಗ ನೀಡುತ್ತವೆ ಎಂದು ಮೋದಿ ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಮ್ಯಾಕ್ರನ್, ‘ಭಾರತವು ಫ್ರಾನ್ಸ್​ನ ಅತ್ಯಂತ ವಿಶ್ವಾಸಾರ್ಹ ಪಾಲುದಾರರಲ್ಲಿ ಒಂದಾಗಿದೆ. ರಫೇಲ್ ಜೆಟ್​ಗಳಿಂದ ಹಿಡಿದು ಜಲಾಂತರ್ಗಾಮಿ ನೌಕೆಗಳವರೆಗೆ ನಾವು ಭಾರತದೊಂದಿಗೆ ರಕ್ಷಣಾ ಸಹಕಾರ ವಿಸ್ತರಿಸುತ್ತಿದ್ದೇವೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಭಾರತಕ್ಕೆ ಸಹಕಾರ ನೀಡುವುದನ್ನು ಮುಂದುವರಿಸುತ್ತೇವೆ’ ಎಂದರು.

ಮೂರು ದಿನಗಳ ಪ್ರವಾಸ

ಪ್ರಧಾನಿ ಮೋದಿ ಆಹ್ವಾನದ ಮೇರೆಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ 3 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದಾರೆ. ಮಂಗಳವಾರ ಮುಂಬೈನಲ್ಲಿ ಭಾರತ-ಫ್ರಾನ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಮ್ಯಾಕ್ರನ್, ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಫೆ.19ರಂದು ಭಾಗಿಯಾಗಲಿದ್ದಾರೆ.
ಮೃತಪಟ್ಟವರಿಗೆ ಗೌರವ
ಮುಂಬೈ ಮೇಲೆ 2008ರ ನ.26ರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮೃತಪಟ್ಟವರಿಗೆ ಮ್ಯಾಕ್ರನ್ ಮತ್ತು ಫ್ರಾನ್ಸ್​ನ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ದಕ್ಷಿಣ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್​ನಲ್ಲಿ ಗೌರವ ಸಲ್ಲಿಸಿದರು.

ಏನೇನು ಒಡಂಬಡಿಕೆ..?

ಭಾರತ ಮತ್ತು ಫ್ರಾನ್ಸ್ ರಕ್ಷಣೆ, ನಿರ್ಣಾಯಕ ಖನಿಜಗಳು, ಉನ್ನತ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಮತ್ತು ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು 21 ಒಪ್ಪಂದಗಳು ಮತ್ತು ದಾಖಲೆಗಳಿಗೆ ಸಹಿ ಹಾಕಿವೆ. ಭಾರತದಲ್ಲಿ ಹ್ಯಾಮರ್ ಕ್ಷಿಪಣಿ ಉತ್ಪಾದಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಫ್ರಾನ್ಸ್​ನ ಸಾಫ್ರಾನ್ ಕಂಪನಿ ನಡುವೆ ಜಂಟಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತೀಯ ಸೇನೆ ಮತ್ತು ಫ್ರೆಂಚ್ ಭೂಸೇನೆಗಳ ನಡುವೆ ಅಧಿಕಾರಿಗಳ ಪರಸ್ಪರ ನಿಯೋಜನೆಗಾಗಿ ಪ್ರತ್ಯೇಕ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ನಾವೀನ್ಯತೆ ವರ್ಷದ ಉದ್ಘಾಟನೆ

ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಮಂಗಳವಾರ ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ ಉದ್ಘಾಟಿಸಿದರು. ಈ ಪ್ರಯುಕ್ತ ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸುವ ವಿಶೇಷ ಕಾರ್ಯಕ್ರಮಗಳನ್ನು ಎರಡೂ ದೇಶಗಳ ನಗರಗಳಲ್ಲಿ ಆಯೋಜಿಸಲಾಗುವುದು. ಇವು ಎರಡೂ ದೇಶಗಳ ಸ್ಟಾರ್ಟಪ್ಸ್, ಶಿಕ್ಷಣ ತಜ್ಞರು, ಸೃಜನಶೀಲರನ್ನು ಒಂದೇ ವೇದಿಕೆಯಡಿ ತರಲಿವೆೆ. ಈ ನಾವೀನ್ಯತೆ ವರ್ಷ ಕೈಗಾರಿಕಾ ಸಹಯೋಗ, ಜನರ ನಡುವಿನ ಸಂಪರ್ಕವನ್ನು ಉತ್ತೇಜಿಸಲಿದೆ.

ಮುಂಬೈನಲ್ಲಿ ಮ್ಯಾಕ್ರನ್ ಜಾಗಿಂಗ್

ಸೋಮವಾರ ರಾತ್ರಿ ಮುಂಬೈಗೆ ಆಗಮಿಸಿದ್ದ ಮ್ಯಾಕ್ರನ್ ಮಂಗಳವಾರ ಬೆಳಗ್ಗೆ ಮುಂಬೈನ ಮರೀನ್ ಡ್ರೈವನಲ್ಲಿ ವಾಯುವಿಹಾರಕ್ಕೆ ಬಂದಿದ್ದವರಿಗೆ ಜಾಗಿಂಗ್ ಮೂಲಕ ಅಚ್ಚರಿ ಮೂಡಿಸಿದರು. 2025ರ ಡಿಸೆಂಬರ್​ನಲ್ಲಿ ಚೀನಾಗೆ ಭೇಟಿ ನೀಡಿದ್ದ ಮ್ಯಾಕ್ರನ್ ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡುವಿನಲ್ಲಿ ಜಾಗಿಂಗ್ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net