ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: 6 ಮಕ್ಕಳಿದ್ದರೆ ವೋಟ್ ಹಾಕುವಂತಿಲ್ಲವೇ? ಚುನಾವಣಾ ಆಯೋಗದ ವಿರುದ್ಧ ಸಿಡಿದೆದ್ದ ಓವೈಸಿ! Asaduddin Owaisi

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: 6 ಮಕ್ಕಳಿದ್ದರೆ ವೋಟ್ ಹಾಕುವಂತಿಲ್ಲವೇ? ಚುನಾವಣಾ ಆಯೋಗದ ವಿರುದ್ಧ ಸಿಡಿದೆದ್ದ ಓವೈಸಿ!
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: 6 ಮಕ್ಕಳಿದ್ದರೆ ವೋಟ್ ಹಾಕುವಂತಿಲ್ಲವೇ? ಚುನಾವಣಾ ಆಯೋಗದ ವಿರುದ್ಧ ಸಿಡಿದೆದ್ದ ಓವೈಸಿ!
Published on
ಹೈದರಾಬಾದ್: ಆರು ಮಕ್ಕಳಿರುವ ವ್ಯಕ್ತಿ ಮತದಾನ ಮಾಡುವಂತಿಲ್ಲ ಎಂದು ದೇಶದ ಯಾವುದೇ ಕಾನೂನಿನಲ್ಲಿ ಬರೆದಿಲ್ಲ. ಹೀಗಿರುವಾಗ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಹೆಸರಿನಲ್ಲಿ ಜನರ ಹಕ್ಕುಗಳನ್ನು ಕಸಿಯಲು ಸಂಚು ನಡೆಯುತ್ತಿದೆಯೇ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದ್-ಉಲ್-ಮುಸ್ಲಿಮೀನ್ (AIMIM) ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ(Asaduddin Owaisi) ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತರಲಾಗಿರುವ ಲಾಜಿಕಲ್ ಡಿಸ್ಕ್ರಿಪೆನ್ಸಿ (Logical Discrepancy) ಎಂಬ ಹೊಸ ವರ್ಗೀಕರಣದ ವಿರುದ್ಧ ಓವೈಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹೈದರಾಬಾದ್‌ನಲ್ಲಿ ಎಐಎಂಐಎಂ ಹಮ್ಮಿಕೊಂಡಿರುವ ಮನೆ-ಮನೆ ಪ್ರಚಾರ ಆಂದೋಲನದ ವೇಳೆ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
6 ಮಕ್ಕಳಿದ್ದರೆ 5 ಜನರಿಗೆ ಮಾತ್ರವೇ ಮತದಾನದ ಹಕ್ಕಾ?
ಚುನಾವಣಾ ಆಯೋಗದ ಹೊಸ ನಿಯಮಗಳ ಅಸಂಗತತೆಯನ್ನು ಎತ್ತಿ ತೋರಿಸಿದ ಓವೈಸಿ, ಒಬ್ಬ ವ್ಯಕ್ತಿಗೆ ಆರು ಮಕ್ಕಳಿದ್ದರೆ, ಆಯೋಗವು ಕೇವಲ ಐದು ಮಕ್ಕಳನ್ನು ಮಾತ್ರ ಪಟ್ಟಿಗೆ ಸೇರಿಸುತ್ತೇವೆ ಎಂದು ಹೇಳುತ್ತಿದೆ. ಇನ್ನು ಕೆಲವೆಡೆ ತಂದೆ ಮತ್ತು ಮಗನ ವಯಸ್ಸಿನ ನಡುವೆ ಕೇವಲ 15 ವರ್ಷಗಳ ವ್ಯತ್ಯಾಸವಿದ್ದರೆ, ಅದನ್ನು ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂದು ಗುರುತಿಸಿ ಮತದಾರರ ಪಟ್ಟಿಯಿಂದ ದೂರ ಇಡಲಾಗುತ್ತಿದೆ. ಇಂತಹ ನಿಯಮಗಳನ್ನು ಜಾರಿಗೆ ತರಲು ಆಯೋಗಕ್ಕೆ ಯಾವ ಕಾನೂನು ಅಧಿಕಾರ ನೀಡಿದೆ ಎಂದು ಪ್ರಶ್ನಿಸಿದರು.
2002ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಆದರೆ 2024ರ ಲೋಕಸಭಾ ಚುನಾವಣೆಯ ಪಟ್ಟಿಯಲ್ಲಿದ್ದವರ ತಂದೆ, ತಾಯಿ, ತಾತ, ಅಜ್ಜಿ ಸೇರಿದಂತೆ ಇಡೀ ವಂಶಾವಳಿಯನ್ನೇ ಮ್ಯಾಪಿಂಗ್ ಮಾಡಲಾಗುತ್ತಿದೆ. ಒಂದು ವೇಳೆ 2002ರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸಾರ್ವಜನಿಕರು ತಕ್ಷಣವೇ ತಮ್ಮ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಓವೈಸಿ ಜನರಿಗೆ ಕರೆ ನೀಡಿದ್ದಾರೆ.

ದೇಶಾದ್ಯಂತ ರಾಜಕೀಯ ಬಿರುಗಾಳಿ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿವಾದ

ಚುನಾವಣಾ ಆಯೋಗದ ಈ ಲಾಜಿಕಲ್ ಡಿಸ್ಕ್ರಿಪೆನ್ಸಿ ವರ್ಗೀಕರಣವು ಕೇವಲ ತೆಲಂಗಾಣ ಮಾತ್ರವಲ್ಲದೆ ಇಡೀ ದೇಶದಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮತ್ತು ತಮಿಳುನಾಡಿನ ಡಿಎಂಕೆ ಪಕ್ಷಗಳು ಆಯೋಗದ ಈ ತಾರತಮ್ಯದ ನೀತಿಯನ್ನು ಕಠಿಣವಾಗಿ ವಿರೋಧಿಸಿವೆ.
ಈ ಗಂಭೀರ ವಿಷಯವು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಚುನಾವಣಾ ಆಯೋಗಕ್ಕೆ ಖಡಕ್ ನಿರ್ದೇಶನ ನೀಡಿದೆ. ಲಾಜಿಕಲ್ ಡಿಸ್ಕ್ರಿಪೆನ್ಸಿ ಪಟ್ಟಿಯಲ್ಲಿ ಯಾರ್ಯಾರ ಹೆಸರುಗಳನ್ನು ಸೇರಿಸಲಾಗಿದೆಯೋ, ಆ ಎಲ್ಲಾ ಹೆಸರುಗಳನ್ನು ಪ್ರತಿಯೊಂದು ಗ್ರಾಮ ಪಂಚಾಯತ್ ಭವನ, ತಾಲೂಕು ಕಚೇರಿಗಳು ಮತ್ತು ನಗರ ಪ್ರದೇಶಗಳ ವಾರ್ಡ್ ಕಚೇರಿಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಸಾರ್ವಜನಿಕರು ತಕ್ಷಣವೇ ಎಚ್ಚೆತ್ತುಕೊಂಡು ತಮ್ಮ ದಾಖಲೆಗಳನ್ನು ಮರುಪರಿಶೀಲಿಸಿಕೊಳ್ಳಬೇಕು ಎಂದು ಓವೈಸಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net