ಗೋಶಾಲೆಗೆ ಬರೋಬ್ಬರಿ 22 ಲಕ್ಷ ರೂ. ದೇಣಿಗೆ ನೀಡಿದ ಸೋನು ಸೂದ್​​! sonu sood

sonu sood
sonu sood
Published on
ಮುಂಬೈ: ಬಾಲಿವುಡ್‌ನ ಖ್ಯಾತ ನಟ ಮತ್ತು ಮಾನವೀಯತೆಯ ಪ್ರತೀಕ ಎನಿಸಿಕೊಂಡಿರುವ ಸೋನು ಸೂದ್ (Sonu Sood) ಅವರು ಗುಜರಾತ್‌ನ ಪಾಟನ್ ಜಿಲ್ಲೆಯ ವಾರಾಹಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಪ್ರಾಣಿ ಕಲ್ಯಾಣ ಕಾರ್ಯಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುವುದಲ್ಲದೆ, ಬೃಹತ್ ಮೊತ್ತದ ಆರ್ಥಿಕ ನೆರವು ಘೋಷಿಸಿದ್ದಾರೆ.
ಸೋನು ಸೂದ್ ಅವರು ಶನಿವಾರ ಗುಜರಾತ್‌ನ ಪಾಟನ್ ಜಿಲ್ಲೆಯ ಸಾಂತಲ್‌ಪುರ ತಹಸಿಲ್‌ನಲ್ಲಿರುವ ವಾರಾಹಿ ಗೋಶಾಲೆಗೆ ಭೇಟಿ ನೀಡಿದರು. ಅಲ್ಲಿನ ಹಸುಗಳಿಗೆ ಮೇವು ತಿನ್ನಿಸಿ, ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಸೋನು ಸೂದ್ ಬರುವುದನ್ನು ತಿಳಿದ ಸಾವಿರಾರು ಅಭಿಮಾನಿಗಳು ಅವರನ್ನು ನೋಡಲು ಅಲ್ಲಿ ಜಮಾಯಿಸಿದ್ದರು. ಕೇವಲ ಕೆಲವು ಹಸುಗಳಿಂದ ಆರಂಭವಾಗಿ ಇಂದು ಸುಮಾರು 7,000 ಪ್ರಾಣಿಗಳಿಗೆ ಆಶ್ರಯ ನೀಡುತ್ತಿರುವ ಗೋಶಾಲೆಯ ಬೆಳವಣಿಗೆಯನ್ನು ನೋಡಿ ಸೋನು ಸೂದ್ ಸಂತಸ ವ್ಯಕ್ತಪಡಿಸಿದರು.
ಸೋನು ಸೂದ್ ಮಾತನಾಡಿ, ಇಲ್ಲಿ ಹಸುಗಳನ್ನು ನೋಡಿಕೊಳ್ಳುತ್ತಿರುವ ರೀತಿ ಇಡೀ ಭಾರತಕ್ಕೆ ಮಾದರಿಯಾಗಬೇಕು. ಗ್ರಾಮಸ್ಥರ ಮತ್ತು ಟ್ರಸ್ಟಿಗಳ ಶ್ರಮ ಪ್ರಶಂಸನೀಯ. ಇಲ್ಲಿನ ಜನರ ಪ್ರೀತಿ ನನಗೆ ತುಂಬಾ ಹೆಮ್ಮೆ ತಂದಿದೆ. ನಾನು ಮತ್ತೆ ಇಲ್ಲಿಗೆ ಬರಲು ಇಷ್ಟಪಡುತ್ತೇನೆ. ನನ್ನ ಕಡೆಯಿಂದ ಮತ್ತು ನಮ್ಮ ಸೂದ್ ಚಾರಿಟಿ ಫೌಂಡೇಶನ್ ವತಿಯಿಂದ 22 ಲಕ್ಷ ರೂಪಾಯಿಗಳನ್ನು ಈ ಸಂಸ್ಥೆಗೆ ದೇಣಿಗೆ ನೀಡುತ್ತಿದ್ದೇವೆ. ಈ ಅದ್ಭುತ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಅವರು ಘೋಷಿಸಿದರು.
ಬೀದಿ ನಾಯಿಗಳ ರಕ್ಷಣೆಯ ಬಗ್ಗೆ ಈ ಹಿಂದೆ ಧ್ವನಿ ಎತ್ತಿದ್ದ ಸೋನು ಸೂದ್, ಈಗ ಗೋವುಗಳ ರಕ್ಷಣೆಗೆ ಧಾವಿಸುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟನಾಗಿ ಮಿಂಚುತ್ತಿದ್ದಾರೆ. ಖಳನಾಯಕನ ಪಾತ್ರದ ಜೊತೆಗೆ, ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಸೋನು ಸೂದ್ ತಮ್ಮ ಮುಂದಿನ ಯೋಜನೆಯನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net