ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಇತ್ತೀಚೆಗೆ ಬಿಡುಗಡೆಯಾದ ಆತ್ಮಚರಿತ್ರೆಯಲ್ಲಿ 1984ರ ಸಿಖ್ ವಿರೋಧಿ ಗಲಭೆಯ ಕುರಿತು ಉಲ್ಲೇಖಿಸಿರುವ ವಿವರಗಳನ್ನು ವಿರೋಧಿಸಿ ಗುರುವಾರ ನವದೆಹಲಿಯಲ್ಲಿ ಪ್ರತಿಭಟನೆ ನಡೆದಿದೆ. 1984ರ ಹಿಂಸಾಚಾರದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರು ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಸದಸ್ಯರು ರಕಾಬ್ ಗಂಜ್ ಗುರುದ್ವಾರದ ಬಳಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ಪ್ರತಿಯನ್ನು ಸುಟ್ಟು (Sonia Gandhi Memoir Burned) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರದ ಘಟನೆಗಳನ್ನು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಮೆಲುಕು ಹಾಕಿದ್ದಾರೆ. ಇಂದಿರಾ ಗಾಂಧಿ ಹತ್ಯೆಯ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಮಧ್ಯಾಹ್ನದ ವೇಳೆಗೆ ನಗರದ ವಿವಿಧ ಭಾಗಗಳಲ್ಲಿ ಹಾಗೂ ಹೊರವಲಯದಲ್ಲಿ ಗಲಭೆಗಳು ಭುಗಿಲೆದ್ದವು. ಅಮಾಯಕ ಸಿಖ್ಖರ ಮೇಲೆ ಕ್ರೂರ ಹಿಂಸಾಚಾರ ನಡೆಸಲಾಯಿತು. ರಾಷ್ಟ್ರ ರಾಜಧಾನಿಯೊಂದರಲ್ಲೇ 2,000ಕ್ಕೂ ಹೆಚ್ಚು ಜನರು ಅತ್ಯಂತ ಭೀಕರವಾಗಿ ಪ್ರಾಣ ಕಳೆದುಕೊಂಡರು ಎಂದು ಅವರು ಬರೆದಿದ್ದಾರೆ.
ಇದೇ ವೇಳೆ ತಮ್ಮ ಪತಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿರುವ ಸೋನಿಯಾ, ರಾಜೀವ್ ಅವರ ಹೃದಯದಲ್ಲಿ ಯಾವುದೇ ದ್ವೇಷ ಅಥವಾ ಮತಾಂಧತೆ ಇರಲಿಲ್ಲ. ಆದರೆ, ಆಡಳಿತ ವ್ಯವಸ್ಥೆ ವಿಫಲವಾಗಿ ಅನಾಗರಿಕತೆಗೆ ದಾರಿ ಮಾಡಿಕೊಟ್ಟಿದ್ದ ಐತಿಹಾಸಿಕ ಸಂದಿಗ್ಧ ಕ್ಷಣದಲ್ಲಿ ಅವರನ್ನು ಅಧಿಕಾರಕ್ಕೆ ತಳ್ಳಲಾಯಿತು ಎಂದು ಉಲ್ಲೇಖಿಸಿದ್ದಾರೆ.
ಪುಸ್ತಕ ಬಿಡುಗಡೆಯಾದ ಬೆನ್ನಲ್ಲೇ ಬಿಜೆಪಿ ನಾಯಕರು, ಇದರಲ್ಲಿರುವ ಹಲವು ವಿವರಗಳು ಅಧಿಕೃತ ದಾಖಲೆಗಳು ಮತ್ತು ಐತಿಹಾಸಿಕ ಸತ್ಯಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದ್ದಾರೆ. 1984ರ ಸಿಖ್ ವಿರೋಧಿ ಗಲಭೆ ಮತ್ತು ಆಪರೇಷನ್ ಬ್ಲೂ ಸ್ಟಾರ್ ಹೊಣೆಗಾರಿಕೆಯಿಂದ ಗಾಂಧಿ ಕುಟುಂಬವನ್ನು ರಕ್ಷಿಸಲು ಸೋನಿಯಾ ಪ್ರಯತ್ನಿಸುತ್ತಿದ್ದಾರೆ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್ ಮತ್ತು ಹಿರಿಯ ವಕೀಲ ಎಚ್.ಎಸ್. ಫೂಲ್ಕಾ ಟೀಕಿಸಿದ್ದಾರೆ.
ಈ ಕುರಿತು ಲಿಖಿತ ಹೇಳಿಕೆ ಬಿಡುಗಡೆ ಮಾಡಿರುವ ಕೇವಲ್ ಸಿಂಗ್ ಧಿಲ್ಲೋನ್, ಈ ಆತ್ಮಚರಿತ್ರೆಯು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಪಾತ್ರವನ್ನು ದೋಷಮುಕ್ತಗೊಳಿಸುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ. 1984ರ ಜೂನ್ನಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ನಂತರದ ದೃಶ್ಯಗಳನ್ನು ನೋಡಿ ಇಂದಿರಾ ಗಾಂಧಿ ಅವರು ನೋವು ಮತ್ತು ಪಶ್ಚಾತ್ತಾಪದಿಂದ ಕಣ್ಣೀರು ಹಾಕಿದ್ದರು ಎಂಬ ಸೋನಿಯಾ ಅವರ ವಾದವನ್ನೂ ಧಿಲ್ಲೋನ್ ಪ್ರಶ್ನಿಸಿದ್ದಾರೆ
ಅವರಲ್ಲಿ ನಿಜವಾಗಿಯೂ ಪಶ್ಚಾತ್ತಾಪವಿದ್ದಿದ್ದರೆ, ದಶಕಗಳ ಕಾಲ ಸತ್ಯವನ್ನು ಏಕೆ ಮುಚ್ಚಿಡಲಾಯಿತು? ಎಂದು ಧಿಲ್ಲೋನ್ ಪ್ರಶ್ನಿಸಿದ್ದಾರೆ. ಸ್ವರ್ಣಮಂದಿರ ಸಂಕೀರ್ಣದ ಮೇಲಿನ ಸೇನಾ ಕಾರ್ಯಾಚರಣೆ ಮತ್ತು ನವೆಂಬರ್ 1984ರಲ್ಲಿ ಸಿಖ್ಖರ ಮೇಲೆ ನಡೆದ ಹಿಂಸಾಚಾರವನ್ನು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕೇವಲ ಒಂದು ವಿಷಾದನೀಯ ಅಧ್ಯಾಯ ಎಂದು ಬಣ್ಣಿಸಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪುಸ್ತಕದಲ್ಲಿ ಅವರು ಎರಡನೇ ಮಹಾಯುದ್ಧದ ನಂತರದ ಇಟಲಿಯಿಂದ ಹಿಡಿದು, ರಾಜೀವ್ ಗಾಂಧಿ ಅವರನ್ನು ಮದುವೆಯಾಗಿ ಭಾರತದ ಪ್ರಭಾವಿ ರಾಜಕೀಯ ಕುಟುಂಬವನ್ನು ಸೇರುವವರೆಗಿನ ತಮ್ಮ ಜೀವನದ ಪಯಣವನ್ನು ಹಂಚಿಕೊಂಡಿದ್ದಾರೆ. ರಾಜೀವ್ ಗಾಂಧಿ ಹತ್ಯೆಯ ನಂತರ ತಮ್ಮನ್ನು ರಾಜಕೀಯಕ್ಕೆ ತಂದ ವೈಯಕ್ತಿಕ ದುಃಖಗಳು ಹಾಗೂ 2004 ರಲ್ಲಿ ಪ್ರಧಾನಿ ಹುದ್ದೆಯನ್ನು ಬೇಡವೆಂದು ತಿರಸ್ಕರಿಸಿದ ನಿರ್ಧಾರದ ಬಗ್ಗೆಯೂ ಇದರಲ್ಲಿ ಬರೆದಿದ್ದಾರೆ.
ಅಲ್ಲದೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗಿನ ಅನುಭವ, ತಾವು ಹಿಂದಿ ಭಾಷೆ ಕಲಿತು ಭಾರತದ ಜೀವನ ಶೈಲಿಗೆ ಹೊಂದಿಕೊಂಡದ್ದು ಮತ್ತು ಸಂಜಯ್ ಗಾಂಧಿ ಸಾವು ಸೇರಿದಂತೆ ಕುಟುಂಬದಲ್ಲಾದ ದುರಂತಗಳ ಕುರಿತೂ ಸೋನಿಯಾ ಗಾಂಧಿ ಬೆಳಕು ಚೆಲ್ಲಿದ್ದಾರೆ. ಈ ಆತ್ಮಕಥೆಯನ್ನು ಬರೆಯುವುದು ತಮಗೆ ತುಂಬಾ ಕಷ್ಟಕರವಾಗಿತ್ತು ಎಂದಿರುವ ಸೋನಿಯಾ ಗಾಂಧಿ, ಇದು ತಮ್ಮ ಮನಸ್ಸಿನಾಳದಲ್ಲಿದ್ದ ಅನುಭವಗಳನ್ನು ತೆರೆದಿಡುವ ಮತ್ತು ಹಂಚಿಕೊಳ್ಳುವ ಪ್ರಯತ್ನವಾಗಿತ್ತು ಎಂದು ಹೇಳಿದ್ದಾರೆ(ಏಜೆನ್ಸೀಸ್).