ವಂದೇ ಮಾತರಂ ಗಾಯನ ನಿಲ್ಲಿಸಲು ಯತ್ನಿಸಿದ್ರಾ ಸೋನಿಯಾ ಗಾಂಧಿ..? ನೆಟ್ಟಿಗರ ಆಕ್ರೋಶಕ್ಕೆ ಕಾಂಗ್ರೆಸ್ ನೀಡಿದ ಸ್ಪಷ್ಟನೆ ಇಲ್ಲಿದೆ! | Vande Mataram Row

Vande Mataram Row > ವಂದೇ ಮಾತರಂ ಗಾಯನ ನಿಲ್ಲಿಸಲು ಯತ್ನಿಸಿದ್ರಾ ಸೋನಿಯಾ ಗಾಂಧಿ..? ನೆಟ್ಟಿಗರ ಆಕ್ರೋಶಕ್ಕೆ ಕಾಂಗ್ರೆಸ್ ನೀಡಿದ ಸ್ಪಷ್ಟನೆ ಇಲ್ಲಿದೆ!
Vande Mataram Row > ವಂದೇ ಮಾತರಂ ಗಾಯನ ನಿಲ್ಲಿಸಲು ಯತ್ನಿಸಿದ್ರಾ ಸೋನಿಯಾ ಗಾಂಧಿ..? ನೆಟ್ಟಿಗರ ಆಕ್ರೋಶಕ್ಕೆ ಕಾಂಗ್ರೆಸ್ ನೀಡಿದ ಸ್ಪಷ್ಟನೆ ಇಲ್ಲಿದೆ!
Published on

ಇಲ್ಲಿನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವಿಡಿಯೋವೊಂದು ವೈರಲ್​ ಆಗಿದ್ದು, ಇದು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಷ್ಟ್ರೀಯ ಗೀತೆ ವಂದೇ ಮಾತರಂ (Vande Mataram Row) ಗಾಯನವನ್ನು ನಿಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚಿಸುವ ರೀತಿಯಲ್ಲಿ ಸನ್ನೆ ಮಾಡುತ್ತಿರುವುದು ಕಂಡುಬಂದಿದೆ.

ಕೆಲವು ಕ್ಷಣಗಳ ಬಳಿಕ ರಾಹುಲ್ ಗಾಂಧಿ ಕೂಡ ಇದೇ ರೀತಿಯ ಸನ್ನೆ ಮಾಡುವುದು ವಿಡಿಯೋದಲ್ಲಿ ಸ್ಪಷ್ಟವಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಹಾಗೂ ಕಾಂಗ್ರೆಸ್​ನ ಹಿರಿಯ ನಾಯಕರುಗಳಿಗೆ ಈ ಗೀತೆಯ ಬಗ್ಗೆ ಮುಜುಗರವಿದೆ ಎಂಬ ಆರೋಪಗಳಿಗೆ ದಾರಿಮಾಡಿಕೊಟ್ಟಿದೆ.

ಕಾಂಗ್ರೆಸ್​ ನಾಯಕರು ಹೇಳಿದ್ದೇನು...?

ಇಂದಿರಾ ಭವನದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡುವಾಗ ಯಾವುದೇ ರೀತಿಯ ವಿವಾದ ನಡೆದಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸ್ಪಷ್ಟಪಡಿಸಿದ್ದಾರೆ. ಇಂದು ಇಂದಿರಾ ಭವನದಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಗಾಯನ ಮಾಡಲಾಗಿದೆ ಮತ್ತು ಅಲ್ಲಿ ಯಾವುದೇ ವಿವಾದ ನಡೆದಿಲ್ಲ. ಅದನ್ನು ನಿಲ್ಲಿಸಲು ಯಾವುದೇ ಪ್ರಯತ್ನವನ್ನು ಮಾಡಲಾಗಿಲ್ಲ. ಕಾಂಗ್ರೆಸ್ ಅಧ್ಯಕ್ಷರು (ಮಲ್ಲಿಕಾರ್ಜುನ ಖರ್ಗೆ) ಸುದೀರ್ಘ ಸಮಯದಿಂದ ನಿಂತುಕೊಂಡೇ ಇದ್ದುದರಿಂದ, ಸೋನಿಯಾ ಗಾಂಧಿಯವರು ಅವರಿಗಾಗಿ ಕುರ್ಚಿಯೊಂದನ್ನು ತಂದು ಕೊಡುವಂತೆ ಮಾತ್ರ ಸೂಚಿಸಿ ಸನ್ನೆ ಮಾಡಿದ್ದರು ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೂಕ್ತ ಶಿಷ್ಟಾಚಾರದ ಲೋಪವನ್ನು ಉಲ್ಲೇಖಿಸಿ ಬಹಿಷ್ಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂಬುದು ಗಮನಾರ್ಹ.

ಅಧಿಕೃತ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಬಳಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ರಾಜಕೀಯ ಕದನ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈ ಸಾಲು ಸಾಲು ವಿವಾದಗಳು ಎದುರಾಗಿವೆ. ಪ್ರಧಾನಿ ನರೇಂದ್ರ ಮೋದಿ ಈ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದು, ಪಕ್ಷವು ಐತಿಹಾಸಿಕವಾಗಿ ರಾಷ್ಟ್ರೀಯ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಉಳಿಸಿಕೊಂಡು ಗೀತೆಯನ್ನು ತುಂಡರಿಸಿದೆ ಎಂದು ಆರೋಪಿಸುತ್ತಿದ್ದಾರೆ.
ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಂದೇ ಮಾತರಂ ಅನ್ನು ಕತ್ತರಿಸಿದೆ ಎಂದು ಆರೋಪಿಸಿದ್ದರಲ್ಲದೆ, ಸ್ವಾತಂತ್ರ್ಯಕ್ಕೂ ಮುನ್ನ ಈ ಗೀತೆಯ ಕೆಲವು ಭಾಗಗಳಿಗೆ ಬಂದ ಪ್ರತಿರೋಧಗಳನ್ನು ಕಾಂಗ್ರೆಸ್ ನಿರ್ವಹಿಸಿದ ರೀತಿಯನ್ನು ಟೀಕಿಸಿದ್ದರು.

ವಂದೇ ಮಾತರಂ ಹಿನ್ನಲೆ!

ವಂದೇ ಮಾತರಂ ಗೀತೆಯನ್ನು ಬಂಕಿಮ ಚಂದ್ರ ಚಟರ್ಜಿ ಅವರು 1875 ರಲ್ಲಿ ರಚಿಸಿದರು ಮತ್ತು ನಂತರ ಅದನ್ನು ತಮ್ಮ ಆನಂದಮಠ ಕಾದಂಬರಿಯಲ್ಲಿ ಸೇರಿಸಿದರು. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಬಲ ಘೋಷಣೆಯಾಗಿ ಹೊರಹೊಮ್ಮಿತು. ಇದರ ಮೊದಲ ಎರಡು ಚರಣಗಳನ್ನು ನಂತರ ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಲಾಯಿತು. ಆದರೆ ಸುದೀರ್ಘ ಆವೃತ್ತಿಯು ಹೆಚ್ಚುವರಿ ಸಾಲುಗಳನ್ನು ಹೊಂದಿದ್ದು, ಅವುಗಳ ಧಾರ್ಮಿಕ ಚಿತ್ರಣ ಮತ್ತು ಹಿಂದೂ ಸಂಪ್ರದಾಯಗಳ ಉಲ್ಲೇಖಗಳ ಕಾರಣದಿಂದಾಗಿ ಐತಿಹಾಸಿಕವಾಗಿ ಚರ್ಚೆಯ ವಸ್ತುವಾಗಿವೆ.
ಈ ವಿಷಯವು ಕೇರಳದಲ್ಲೂ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಅಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಇತ್ತೀಚೆಗೆ ಶಾಲೆಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಧ್ವಜಾರೋಹಣ ಮತ್ತು ರಾಷ್ಟ್ರಗೀತೆ ಜನ ಗಣ ಮನ ಹಾಡುವುದಕ್ಕೆ ಮಾತ್ರ ಸೂಚನೆ ನೀಡಿತ್ತು ಹಾಗೂ ವಂದೇ ಮಾತರಂ ಹಾಡುವಂತೆ ಯಾವುದೇ ನಿರ್ದೇಶನ ನೀಡಿರಲಿಲ್ಲ. ರಾಷ್ಟ್ರೀಯ ಗೀತೆಯ ಕುರಿತು ಕೇಂದ್ರ ಸರ್ಕಾರದ ನಿರ್ದೇಶನಗಳ ನಡುವೆ ಬಂದ ಈ ಬೆಳವಣಿಗೆಯು ಬಿಜೆಪಿ ಕಡೆಯಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.
ಮತ್ತೊಂದೆಡೆ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಂದೇ ಮಾತರಂ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಪ್ರಧಾನಿ ಮೋದಿ ಅವರ ಕೆಂಪು ಕೋಟೆ ಸಮಾರಂಭದಲ್ಲಿ ರಾಷ್ಟ್ರಗೀತೆಗಿಂತ ಮೊದಲು ರಾಷ್ಟ್ರೀಯ ಗೀತೆಯನ್ನು ನುಡಿಸಲಾಯಿತು ಮತ್ತು ಈ ಘಟನೆಯು ಗೀತೆಯ 150 ವರ್ಷಗಳ ಪರಂಪರೆಯನ್ನು ಗುರುತಿಸಿತು. ಮಳೆಗಾಲದ ಅಧಿವೇಶನದ ಕೊನೆಯ ದಿನದಂದು ಸಂಸತ್ತಿನ ಕಲಾಪಗಳು ವಂದೇ ಮಾತರಂನೊಂದಿಗೆ ಮುಕ್ತಾಯಗೊಂಡವು. ಈ ಎಲ್ಲಾ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಘಟನೆಯು ಬಿಜೆಪಿ ಮತ್ತು ಇತರ ಟೀಕಾಕಾರರಿಗೆ ಹೊಸ ಆಹಾರವನ್ನು ನೀಡಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net