ಅನಾರೋಗ್ಯ ಹಿನ್ನೆಲೆ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ | Sonia Gandhi

ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Published on
ನವದೆಹಲಿ: ಹಠಾತ್ ಅನಾರೋಗ್ಯ ಹಿನ್ನೆಲೆ ತಡರಾತ್ರಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು(Sonia Gandhi) ದೆಹಲಿ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಆಸ್ಪತ್ರೆಗೆ ತೆರಳಿದ್ದರು ಎಂದು ವರದಿಯಾಗಿದೆ.
ಸೋನಿಯಾ ಗಾಂಧಿಯವರ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ನಿಖರವಾದ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ. ಆದರೆ ಜನವರಿಯಲ್ಲಿ ಇದೇ ಆಸ್ಪತ್ರೆಗೆ ತೀವ್ರ ಉಸಿರಾಟ ಸಮಸ್ಯೆಯಿಂದ ಅವರನ್ನು ದಾಖಲಿಸಲಾಗಿತ್ತು. ಆಗ ವೈದ್ಯರು ದೆಹಲಿಯ ಚಳಿಗಾಲ ಮತ್ತು ವಾಯು ಮಾಲಿನ್ಯದಿಂದಾಗಿ ಅವರ ಶ್ವಾಸನಾಳದ ಆಸ್ತಮಾ ಸ್ವಲ್ಪ ಉಲ್ಬಣಗೊಂಡಿದೆ ಎಂದು ತಿಳಿಸಿದ್ದರು.
ಕಳೆದ ವರ್ಷ ಅನಾರೋಗ್ಯದಿಂದ ಸೋನಿಯಾ ಗಾಂಧಿಯವರು ಮೂರು ಬಾರಿ ವಿವಿಧ ಕಾರಣಗಳಿಗೆ ಆಸ್ಪತ್ರೆಗೆ ದಾಖಲಾಗಿದ್ದರು. 2025 ಜೂನ್​ನಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಅದೇ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದಕ್ಕೂ ಮೊದಲು ಫೆಬ್ರವರಿಯಲ್ಲೂ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿಂದ ತಪಾಸಣೆಗೆ ಶಿಮ್ಲಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ವರ್ಷ ಡಿಸೆಂಬರ್​ನಲ್ಲಿ ಸೋನಿಯಾ ಗಾಂಧಿಯವರಿಗೆ 79 ವರ್ಷ ತುಂಬಿವೆ. ಪ್ರಸ್ತುತ ರಾಜ್ಯಸಭೆ ಸಂಸದರಾಗಿರುವ ಅವರು, ಈ ಹಿಂದೆ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. 20004ರಿಂದ 2014ರ ಯುಪಿಎ ಆಡಳಿತದಲ್ಲಿ ಪ್ರಮುಖ ಹುದ್ದೆಯನ್ನು ಹೊಂದಿದ್ದರು. ಜೊತೆಗೆ ಎರಡೂ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಸುಧೀರ್ಘ ಕಾಲ ಪಕ್ಷವನ್ನು ನಡೆಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net