ಸೋನಿಯಾ ಒಪ್ಪಿದ್ರೂ ರಾಹುಲ್ ಅಡ್ಡಗಾಲು! 2014ರ ಅಸ್ಸಾಂ ಸಿಎಂ ಪಟ್ಟ ಕೈತಪ್ಪಿದ್ದೇಕೆ..? ಸ್ಫೋಟಕ ಸತ್ಯ ರಿವೀಲ್ ಮಾಡಿದ ಹಿಮಂತ | Himanta Biswa Sarma

ಸೋನಿಯಾ ಒಪ್ಪಿದ್ರೂ ರಾಹುಲ್ ಅಡ್ಡಗಾಲು! 2014ರ ಅಸ್ಸಾಂ ಸಿಎಂ ಪಟ್ಟ ಕೈತಪ್ಪಿದ್ದೇಕೆ..? ಸ್ಫೋಟಕ ಸತ್ಯ ರಿವೀಲ್ ಮಾಡಿದ ಹಿಮಂತ
ಸೋನಿಯಾ ಒಪ್ಪಿದ್ರೂ ರಾಹುಲ್ ಅಡ್ಡಗಾಲು! 2014ರ ಅಸ್ಸಾಂ ಸಿಎಂ ಪಟ್ಟ ಕೈತಪ್ಪಿದ್ದೇಕೆ..? ಸ್ಫೋಟಕ ಸತ್ಯ ರಿವೀಲ್ ಮಾಡಿದ ಹಿಮಂತ
Published on
ಗುವಾಹಟಿ: 2014ರಲ್ಲೇ ಸೋನಿಯಾ ಗಾಂಧಿ ನನ್ನನ್ನು ಅಸ್ಸಾಂ ಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿದ್ದರು. ಆದರೆ ರಾಹುಲ್ ಗಾಂಧಿಯ ಹಸ್ತಕ್ಷೇಪದಿಂದಾಗಿ ಎಲ್ಲವೂ ಉಲ್ಟಾ ಆಯಿತು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

2014ರ ಹೈಡ್ರಾಮಾ: ಏನಿದು ಸತ್ಯ..?

2011ರ ಚುನಾವಣೆ ಬಳಿಕ ಅಂದಿನ ಸಿಎಂ ತರುಣ್ ಗೊಗೊಯ್ ವಿರುದ್ಧ ಅಸ್ಸಾಂ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಈ ಬಗ್ಗೆ ಮಾತನಾಡಿದ ಶರ್ಮಾ, ಅಂದು ಶೇ. 80ಕ್ಕೂ ಹೆಚ್ಚು ಶಾಸಕರು ನನ್ನ ಬೆಂಬಲಕ್ಕಿದ್ದರು. ಸೋನಿಯಾ ಗಾಂಧಿಯವರು ನನ್ನ ಹೆಸರನ್ನು ಅಂತಿಮಗೊಳಿಸಿ, ಪ್ರಮಾಣವಚನಕ್ಕೆ ದಿನಾಂಕ ನಿಗದಿಪಡಿಸುವಂತೆಯೂ ಸೂಚಿಸಿದ್ದರು. ಜೂನ್‌ನಲ್ಲಿ ಕಾಮಾಖ್ಯ ದೇವಸ್ಥಾನದಲ್ಲಿ ಅಧಿಕಾರ ಸ್ವೀಕಾರಕ್ಕೆ ಸಿದ್ಧತೆ ನಡೆದಿತ್ತು. ಆದರೆ ಅಮೆರಿಕದಲ್ಲಿದ್ದ ರಾಹುಲ್ ಗಾಂಧಿ ಒಂದು ಫೋನ್ ಕಾಲ್ ಮೂಲಕ ಇಡೀ ನಿರ್ಧಾರವನ್ನೇ ಬದಲಿಸಿದರು ಎಂದು ಬಹಿರಂಗಪಡಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೂ ತಿಳಿದಿತ್ತು!

ಅಂದಿನ ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸ್ಸಾಂಗೆ ಭೇಟಿ ನೀಡಿದ್ದರು. ನನ್ನ ಪರವಾಗಿ 58 ಶಾಸಕರಿದ್ದರೆ, ತರುಣ್ ಗೊಗೊಯ್ ಪರ ಕೇವಲ 12 ಶಾಸಕರಿದ್ದರು. ಈ ಸತ್ಯ ಖರ್ಗೆ ಅವರಿಗೂ ತಿಳಿದಿತ್ತು. ಶಾಸಕರು ಹಿಮಂತ ಜೊತೆಗಿದ್ದಾರೆ ಎಂದು ಅವರು ವಿರೋಧಿಗಳಿಗೆ ಹೇಳುತ್ತಿದ್ದರು. ಆದರೂ ನನಗೆ ನ್ಯಾಯ ಸಿಗಲಿಲ್ಲ ಎಂದು ಶರ್ಮಾ ಬೇಸರ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಗೆ ಧನ್ಯವಾದಗಳು

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ದೇವರ ಇಚ್ಛೆ ಎಂದು ಬಣ್ಣಿಸಿದ ಸಿಎಂ, ಒಂದು ವೇಳೆ ನಾನು ಅಂದು ಕಾಂಗ್ರೆಸ್ ಸಿಎಂ ಆಗಿದ್ದರೆ ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕುತ್ತಿದ್ದೆ. ಆದರೆ ಈಗ ಬಿಜೆಪಿಯಲ್ಲಿ ಅಸ್ಸಾಂ ಮತ್ತು ಸನಾತನ ಧರ್ಮದ ಸೇವೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಕಾರಣರಾದ ರಾಹುಲ್ ಗಾಂಧಿಗೆ ಧನ್ಯವಾದಗಳು ಎಂದು ಲೇವಡಿ ಮಾಡಿದ್ದಾರೆ. ಭವಿಷ್ಯದಲ್ಲಿ ಪುಸ್ತಕ ಬರೆದಾಗ ಕಾಂಗ್ರೆಸ್ ತೊರೆದ ಸಂಪೂರ್ಣ ರಹಸ್ಯಗಳನ್ನು ಬಿಚ್ಚಿಡುವುದಾಗಿ ಹಿಮಂತ ತಿಳಿಸಿದ್ದಾರೆ.

ಅಸ್ಸಾಂ ಕಾಂಗ್ರೆಸ್‌ಗೆ ಮತ್ತೊಂದು ಆಘಾತ: ಬೋರಾ ಬಿಜೆಪಿ ಸೇರ್ಪಡೆ

ಇದೇ ವೇಳೆ ಅಸ್ಸಾಂ ಕಾಂಗ್ರೆಸ್‌ಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಮಾಜಿ ಕೆಪಿಸಿಸಿ ಅಧ್ಯಕ್ಷ ಭೂಪನ್ ಬೋರಾ ಅವರು ಫೆಬ್ರವರಿ 22 ರಂದು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಂದ ಬೆಳೆದುಬಂದ ನಾಯಕರು ಕಾಂಗ್ರೆಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net