ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಇದು ಪ್ರಜಾಪ್ರಭುತ್ವ ಹಾಗೂ ಶಾಂತಿ-ತಾಳ್ಮೆಯ ಗೆಲುವು ಎಂದ ಸೋನಮ್ ವಾಂಗ್ಚುಕ್! | Sonam Wangchuk

Sonam Wangchuk | ಇದು ಪ್ರಜಾಪ್ರಭುತ್ವ ಹಾಗೂ ಶಾಂತಿ-ತಾಳ್ಮೆಯ ಗೆಲುವು ಎಂದ ಸೋನಮ್ ವಾಂಗ್ಚುಕ್!
Sonam Wangchuk | ಇದು ಪ್ರಜಾಪ್ರಭುತ್ವ ಹಾಗೂ ಶಾಂತಿ-ತಾಳ್ಮೆಯ ಗೆಲುವು ಎಂದ ಸೋನಮ್ ವಾಂಗ್ಚುಕ್!
Published on
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಬಳಿಕ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ (Sonam Wangchuk) ತಮ್ಮ ಮೊದಲ ಪ್ರತಿಕ್ರಿಯೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಪ್ರಜಾಪ್ರಭುತ್ವದ ಗೆಲುವು ಎಂದು ಬರೆದುಕೊಂಡಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಕಾಕ್ರೋಚ್ ಜನತಾ ಪಾರ್ಟಿ ಜೂನ್ 28 ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸೋನಮ್ ವಾಂಗ್ಚುಕ್​ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ತಮ್ಮ ಎಕ್ಸ್​ ಖಾತೆಯಲ್ಲಿ V (ವಿಕ್ಟರಿ) ಸಂಕೇತವನ್ನು ತೋರಿಸುತ್ತಿರುವ ಫೋಟೋವನ್ನು ಹಂಚಿಕೊಂಡ ವಾಂಗ್ಚುಕ್, ನೇರ ಪ್ರಜಾಪ್ರಭುತ್ವ. ನೇರವಾಗಿ ರಸ್ತೆಗಳಿಂದ. ಇದು ಶಾಂತಿ, ತಾಳ್ಮೆ ಮತ್ತು ಪರಿಶ್ರಮದ ಗೆಲುವು ಎಂದು ಬರೆದಿದ್ದಾರೆ. ಕಳೆದೊಂದು ತಿಂಗಳಿನಿಂದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಜೆಪಿ ಮತ್ತು ದೇಶದ ಜೆನ್-ಜೀ ಯುವಜನತೆಯನ್ನು ಅಭಿನಂದಿಸಿದ ವಾಂಗ್ಚುಕ್, ಭಯವನ್ನು ತೊರೆದು ದೇಶದ ಪ್ರತಿಯೊಂದು ಮೂಲೆಯಿಂದಲೂ ಜಾಗೃತರಾದ ಎಲ್ಲಾ ನಾಗರಿಕರಿಗೆ ಧನ್ಯವಾದ ಅರ್ಪಿಸುತ್ತಾ, ಈಗ ಪ್ರಧಾನ್ ರಾಜೀನಾಮೆ ನೀಡಿರುವುದರಿಂದ, ಚರ್ಚೆಯು ಜವಾಬ್ದಾರಿ, ಹೊಣೆಗಾರಿಕೆಯಿಂದ ಸುಧಾರಣೆಗಳ ಕಡೆಗೆ ಸಾಗಲಿದೆ ಎಂದು ವಾಂಗ್ಚುಕ್ ಹೇಳಿದ್ದಾರೆ.
ಸಂಸತ್ತಿನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆ, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ, ವಾಂಗ್ಚುಕ್ ಗುರುವಾರ ರಾತ್ರಿ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

ಧರ್ಮೇಂದ್ರ ಪ್ರಧಾನ್​ ರಾಜೀನಾಮೆ!...

ಸರ್ಕಾರ ಮತ್ತು ಕಾಕ್ರೋಚ್ ಜನತಾ ಪಾರ್ಟಿ ನಡುವಿನ ಮೂರನೇ ಹಂತದ ಮಾತುಕತೆಗೆ ಕೆಲವು ಗಂಟೆಗಳ ಮೊದಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಎರಡು ಪುಟಗಳ ಸುದೀರ್ಘ ಹೇಳಿಕೆಯನ್ನು ಹಂಚಿಕೊಂಡಿರುವ ಪ್ರಧಾನ್, ಕಳೆದ ಹತ್ತು ದಿನಗಳಲ್ಲಿ ನಡೆದ ಘಟನೆಗಳಿಂದ ತಮಗೆ ತೀವ್ರ ಬೇಸರವಾಗಿದೆ ಎಂದಿದ್ದಾರೆ.
ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ ಎಂದು ಪ್ರಧಾನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಮೇ 3, 2026 ರಂದು ನಡೆದು, ಪೇಪರ್ ಸೋರಿಕೆಯ ಕಾರಣದಿಂದ ಜೂನ್ 21 ಕ್ಕೆ ಮರುಪರಿಶೀಲನೆಗೊಂಡ ನೀಟ್-ಯುಜಿ (NEET-UG) ಪರೀಕ್ಷೆಯ ಅಕ್ರಮಗಳ ಕುರಿತು ಮಾತನಾಡಿದ ಅವರು, ಮೊದಲ ದಿನದಿಂದಲೂ ನಾನು ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದೇನೆ ಮತ್ತು ಪರಿಸ್ಥಿತಿಯಿಂದ ಎಂದಿಗೂ ಹಿಂದೆ ಸರಿದಿಲ್ಲ. ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಪರೀಕ್ಷಾ ಮಾಫಿಯಾದಿಂದ ಹಾಳಾಗಲು ಬಿಡುವುದಿಲ್ಲ ಅಥವಾ ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ನಾನು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ ಹೇಳಿದ್ದೇನು...?

ಪ್ರಧಾನ್ ರಾಜೀನಾಮೆ ಸಲ್ಲಿಸಿದ ತಕ್ಷಣ ಕಾಕ್ರೋಚ್​ ಜನತಾ ಪಾರ್ಟಿ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ವಿದ್ಯಾರ್ಥಿ ಶಕ್ತಿ ಚಿರಾಯುವಾಗಲಿ ಎಂದು ಪೋಸ್ಟ್ ಮಾಡಿದೆ. ಅಲ್ಲದೆ, ಪ್ರಧಾನ್ ರಾಜೀನಾಮೆಯ ಸುದ್ದಿ ತಿಳಿಯುತ್ತಿದ್ದಂತೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಸಂತಸ ವ್ಯಕ್ತಪಡಿಸುತ್ತಿರುವ ವಿಡಿಯೋವನ್ನು ಪೋಸ್ಟ್​​ ಮಾಡಿದೆ.
ಇದೇ ಪ್ರಜಾಪ್ರಭುತ್ವ. ಅವರು ರಾಜೀನಾಮೆ ನೀಡಿದ್ದಾರೆ. ನೆನಪಿಡಿ, ಕಾಕ್ರೋಚ್ ಜೊತೆ ಎಂದಿಗೂ ಆಟವಾಡಬೇಡಿ ಎಂದಿದ್ದು, ತಮ್ಮ ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆಗಳು ಇನ್ನೂ ಈಡೇರದೆ ಉಳಿದಿರುವುದರಿಂದ ಕಾಕ್ರೋಚ್​​ಗಳು (ಪ್ರತಿಭಟನಾಕಾರರು) ತಕ್ಷಣವೇ ನಿರ್ಗಮಿಸುವುದಿಲ್ಲ ಎಂದು ಸಿಜೆಪಿ ಸ್ಪಷ್ಟಪಡಿಸಿದೆ.

ಸಿಜೆಪಿಯ ಬಾಕಿ ಇರುವ ಬೇಡಿಕೆಗಳು

1. ನೀಟ್​ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡುವುದು.
2. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡುವುದು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net