Sonali Hinge Police Influencer: ಸ್ಕೂಲ್ ಪ್ರಿನ್ಸಿಪಾಲ್‌ಗೆ ಬೆದರಿಕೆ ಹಾಕಿ 7 ಲಕ್ಷ ಲೂಟಿ ಮಾಡಿದ ಇನ್‌ಫ್ಲುಯೆನ್ಸರ್ ಪೊಲೀಸ್ ಮಹಿಳೆ!

Sonali Hinge Police Influencer
Sonali Hinge Police Influencer
Published on
ಪುಣೆ: ಸುಳ್ಳು ಫೋಕ್ಸೋ (POCSO) ಕೇಸ್‌ನಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿ ಶಾಲೆಯ ಮುಖ್ಯೋಪಾಧ್ಯಾಯರಿಂದ 7 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಮಹಿಳಾ ಪೊಲೀಸ್ ಸೇರಿದಂತೆ ಮೂವರ ವಿರುದ್ಧ ಮಹಾರಾಷ್ಟ್ರದ ಪುಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳನ್ನು ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಫಾಲೋಯರ್ಸ್ ಹೊಂದಿರುವ ಸೋನಾಲಿ ಹಿಂಗೆ(Sonali Hinge Police Influencer), ಸೈಬರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಜಿತ್ ಬಾಡೆ ಮತ್ತು ಕಾನ್ಸ್‌ಟೇಬಲ್ ಸುದಾಮ್ ತಯಾಡೆ ಎಂದು ಗುರುತಿಸಲಾಗಿದೆ. ಸೋನಾಲಿ ಹಿಂಗೆ ಪುಣೆ ಪೊಲೀಸರ ಪ್ರತಿಷ್ಠಿತ 'ದಾಮಿನಿ ಸ್ಕ್ವಾಡ್'ನ ಸದಸ್ಯೆಯಾಗಿದ್ದರು ಎಂಬುದು ವಿಶೇಷ.

ಸ್ಕೆಚ್ ಹಾಕಿದ್ದು ಹೇಗೆ?

ಘಟನೆಯ ಹಿನ್ನೆಲೆ ಅತ್ಯಂತ ಆಘಾತಕಾರಿಯಾಗಿದೆ. ಈ ಮೂವರು ಪೊಲೀಸರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ 'ಗುಡ್ ಟಚ್ ಮತ್ತು ಬ್ಯಾಡ್ ಟಚ್' (Good touch and Bad touch) ಬಗ್ಗೆ ಜಾಗೃತಿ ಮೂಡಿಸುವ ನೆಪದಲ್ಲಿ ಶಾಲೆಯ 55 ವರ್ಷದ ಮುಖ್ಯೋಪಾಧ್ಯಾಯರನ್ನು ಟಾರ್ಗೆಟ್ ಮಾಡಿದ್ದಾರೆ. ಬಳಿಕ ಅವರ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ, ಫೋಕ್ಸೋ ಕಾಯ್ದೆಯಡಿ ಬಂಧಿಸುವುದಾಗಿ ಬೆದರಿಸಿದ್ದಾರೆ.

ಮಾನಹಾನಿಗೆ ಹೆದರಿ ಹಣ ನೀಡಿದ ಪ್ರಿನ್ಸಿಪಾಲ್

ಸಮಾಜದಲ್ಲಿ ತಮಗಿರುವ ಘನತೆ ಮತ್ತು ಶಾಲೆಯ ಹೆಸರಿಗೆ ಧಕ್ಕೆ ಬರುತ್ತದೆ ಎಂದು ಹೆದರಿದ ಮುಖ್ಯೋಪಾಧ್ಯಾಯರು, ವಿಷಯವನ್ನು ಅಲ್ಲಿಗೇ ಮುಕ್ತಾಯಗೊಳಿಸಲು (Settlement) ಆರೋಪಿಗಳು ಕೇಳಿದಂತೆ 7 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಆದರೆ, ನಂತರ ಪೊಲೀಸರ ನಡೆ ಮೇಲೆ ಅನುಮಾನಗೊಂಡ ಅವರು ಧೈರ್ಯ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕಮಿಷನರ್ ಆದೇಶದ ಮೇರೆಗೆ ಎಫ್‌ಐಆರ್

ದೂರನ್ನು ಗಂಭೀರವಾಗಿ ಪರಿಗಣಿಸಿದ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಪೊಲೀಸರ ಸುಲಿಗೆಯ ಕೃತ್ಯ ಸಾಬೀತಾದ ಬೆನ್ನಲ್ಲೇ ಮೂವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸುಲಿಗೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ಇಲಾಖೆ ಎಚ್ಚರಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net