15 ವರ್ಷದ ಹಿಂದೆ ಕಣ್ಮರೆಯಾಗಿದ್ದ ವ್ಯಕ್ತಿ ಇದೀಗ ದಿಢೀರ್​ ಪ್ರತ್ಯಕ್ಷ! ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ ಹೆತ್ತವರಿಗೆ ಆನಂದಬಾಷ್ಪ

ಕಣ್ಮರೆಯಾಗಿದ್ದ ಬಲದೇವ್​ ಮತ್ತು ಅವರ ಕುಟುಂಬ
ಕಣ್ಮರೆಯಾಗಿದ್ದ ಬಲದೇವ್​ ಮತ್ತು ಅವರ ಕುಟುಂಬ
Published on

ಪ್ರಮುಖ ಮುಖ್ಯಾಂಶಗಳು

  • ಹಿಮಾಚಲದಲ್ಲಿ ಈ ಅಪರೂಪದ ಘಟನೆ ವರದಿ
  • 15 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪುತ್ರ ಮರಳಿ ಮನೆಗೆ
  • ಕುಟುಂಬಸ್ಥರಲ್ಲಿ ಮೂಡಿದ ಹಬ್ಬದ ಸಂಭ್ರಮ
ಹಿಮಾಚಲ ಪ್ರದೇಶ: 9 ತಿಂಗಳು ಹೊತ್ತು, ದೊಡ್ಡ ಮಕ್ಕಳನ್ನಾಗಿ ಬೆಳೆಸಿದ ಪೋಷಕರಿಗೆ ತಮ್ಮ ಮಕ್ಕಳು ಇನ್ನಿಲ್ಲ ಅಥವಾ ಕಣ್ಮರೆ ಎಂಬ ಸುದ್ದಿ ಹೇಗೆ ಅರಗಿಸಿಕೊಳ್ಳಲು ಸಾಧ್ಯ ಹೇಳಿ? 15 ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾದ ಪುತ್ರ, ಎಲ್ಲಿಯೂ ಸಿಗದ ಹಿನ್ನೆಲೆ ಆತ ಮೃತಪಟ್ಟಿರಬಹುದು ಎಂದು ಭಾವಿಸಿದ ಪೋಷಕರು, ಎಲ್ಲ ಭರವಸೆಗಳನ್ನು ಮೂಟೆಕಟ್ಟು ಎಸೆದು, ಅಂತ್ಯಕ್ರಿಯೆಯನ್ನೂ ಮಾಡಿ ಮುಗಿಸಿದ್ದರು. ಆದರೆ, ಮುಂದೊಂದು ದಿನ ಮಗ ಪವಾಡದಂತೆ ಕಣ್ಣೆದುರಿಗೆ ಬಂದು ನಿಲ್ಲುತ್ತಾನೆ ಎಂಬ ಊಹೆಯೂ ಅವರಿಗಿರಲಿಲ್ಲ. ಅಂತಹ ಅಪರೂಪದ ಘಟನೆ ಹಿಮಾಚಲ ಪ್ರದೇಶದ ಸುಜನ್​ಪುರ ಜಿಲ್ಲೆಯಲ್ಲಿ ವರದಿಯಾಗಿದೆ.
15 ವರ್ಷಗಳ ಬಳಿಕ ತನ್ನ ಮನೆಗೆ ಹಿಂತಿರುಗಿದ ವ್ಯಕ್ತಿಯನ್ನು ಬಲದೇವ್ ಕುಮಾರ್ ಎಂದು ಗುರುತಿಸಲಾಗಿದೆ. ಹಿಮಾಚಲ ಪ್ರದೇಶದ ಸುಜನ್‌ಪುರ ಜಿಲ್ಲೆಯ ಘರ್ಟೋಲಿ ಗ್ರಾಮದ ನಿವಾಸಿ. 15 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಮನೆಬಿಟ್ಟು ಹೋದ ಇವರು, ಎಷ್ಟು ವರ್ಷಗಳಾದರೂ ಮನೆಗೆ ವಾಪಾಸ್​ ಆಗಲಿಲ್ಲ. ನಾಪತ್ತೆ ಕೇಸ್​ನಡಿ ಬಲದೇವ್​ರನ್ನು ಶೋಧಿಸಿದ ಖಾಕಿಗೆ ಅವರ ಬಗ್ಗೆ ಮಾಹಿತಿ ಆಗಲಿ ಅಥವಾ ಯಾವುದೇ ಕುರುಹುಗಳು ಸಿಗಲಿಲ್ಲ. ಇದರಿಂದ, ಆತ ಸಾವಿಗೀಡಾಗಿರಬೇಕು ಎಂದೇ ಭಾವಿಸಲಾಗಿತ್ತು.

ವಿಡಿಯೋ ಸುಳಿವು

3 ದಿನಗಳ ಹಿಂದೆ, ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಗೌರವ್ ಜೈನ್ ಅವರ ಕುಟುಂಬವು ಬಲದೇವ್​ ಅವರನ್ನೊಳಗೊಂಡ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತು. ಈ ವ್ಯಕ್ತಿ ಯಾರು? ಈತನ ಹಿನ್ನೆಲೆ ಅಥವಾ ಗುರುತು ಹಿಡಿಯಲು ಸಾಧ್ಯವಾದರೆ ನಮಗೆ ಹೇಳಿ ಎಂದು ಕೇಳಿಕೊಂಡಿತ್ತು. ಒಂದಷ್ಟು ಹಂಚಿಕೆಗಳ ನಂತರ ಈ ವಿಡಿಯೊ ಕಡೆಗೂ ಹಿಮಾಚಲ ಪ್ರದೇಶದ ಸುಜನ್‌ಪುರದಲ್ಲಿರುವ ಸಪ್ನಾ ಕುಮಾರಿಯನ್ನು ತಲುಪಿತು. ಅವರು ಈ ದೃಶ್ಯವನ್ನು ಬಲದೇವ್ ಕುಮಾರ್ ಅವರ ಕುಟುಂಬಸ್ಥರಿಗೆ ಕಳುಹಿಸಿದರು.
ವಿಡಿಯೋದಲ್ಲಿ ಮಗನನ್ನು ಕಾಣುತ್ತಿದ್ದಂತೆ ಭಾವುಕಾರದ ಪೋಷಕರು, ಈತ ನಮ್ಮ ಮಗನೇ. 15 ವರ್ಷಗಳ ಹಿಂದೆ ಕಾಣೆಯಾಗಿದ್ದ ಎಂದು ನಿಖರವಾಗಿ ಗುರುತಿಸಿದ್ದಾರೆ. ತಕ್ಷಣ ಬಿಕಾನೇರ್‌ನಲ್ಲಿರುವ ಬಲದೇವ್ ಕುಮಾರ್ ಇದ್ದ ಸ್ಥಳಕ್ಕೆ ಹೋಗಿ, ಪುತ್ರನನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಬಲದೇವ್​ ಸಿಕ್ಕ ಖುಷಿಯಲ್ಲಿ ಕುಟುಂಬಸ್ಥರು ಮೊದಲು ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಸದ್ಯ ಈ ಫೋಟೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net