ಭಿಕ್ಷೆ ಬೇಡಿ ಗೆದ್ದವರು ಇಂದು ಸಚಿವ ಸ್ಥಾನಕ್ಕಾಗಿ ಟಿವಿಕೆ ಕಾಲು ಹಿಡಿಯುತ್ತಿದ್ದಾರೆ!...ವಿಜಯ್​ ಬೆಂಬಲಿಸಿದವರ ವಿರುದ್ಧ ಎಐಎಡಿಎಂಕೆ ಕಿಡಿ | AIADMK Crisis

AIADMK Crisis | ವಿಜಯ್​ ಬೆಂಬಲಿಸಿದವರ ವಿರುದ್ಧ ಎಐಎಡಿಎಂಕೆ ಕಿಡಿ
AIADMK Crisis | ವಿಜಯ್​ ಬೆಂಬಲಿಸಿದವರ ವಿರುದ್ಧ ಎಐಎಡಿಎಂಕೆ ಕಿಡಿ
Published on
AIADMK Crisis: ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು, ಎಐಎಡಿಎಂಕೆಯ ಹಿರಿಯ ಶಾಸಕರಾದ ಎಸ್‌ಪಿ ವೇಲುಮಣಿ ಮತ್ತು ಸಿವಿ ಷಣ್ಮುಗಂ ನೇತೃತ್ವದ ಬಣವು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರವನ್ನು ಬೆಂಬಲಿಸಲು ನಿರ್ಧರಿಸಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಎಐಎಡಿಎಂಕೆ ಪಕ್ಷವು ಅಧಿಕೃತವಾಗಿ ತನ್ನ ಆಕ್ರೋಶ ಹೊರಹಾಕಿದ್ದು, ತಮ್ಮ ಸ್ವಂತ ಜಿಲ್ಲೆಗಳಲ್ಲೇ ಗೆಲುವು ಸಾಧಿಸಲು ಸಾಧ್ಯವಾಗದವರ ಮೈತ್ರಿಕೂಟವೊಂದು ಸುಳ್ಳಿನ ಸುರಿಮಳೆಯನ್ನು ಹರಿಸುತ್ತಿದೆ ಎಂದು ಕಟುವಾಗಿ ಟೀಕಿಸಿದೆ.

ಸಚಿವ ಸ್ಥಾನಕ್ಕಾಗಿ ಟಿವಿಕೆಯ ಕಾಲು ಹಿಡಿದಿದ್ದಾರೆ!..

ಪಕ್ಷದ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದ್ದು, ನಮ್ಮ ಪಕ್ಷಕ್ಕೆ, ನಮ್ಮ ಮೈತ್ರಿಕೂಟಕ್ಕೆ, ಎರಡೆಲೆ ಚಿಹ್ನೆಗೆ ಮತ್ತು ಜನರ ಮುಖ್ಯಮಂತ್ರಿ ಎಡಪ್ಪಾಡಿ ಫಳನಿಸ್ವಾಮಿ ಅವರಿಗೆ ರಾಜ್ಯದ 1,34,25,260 ಮತದಾರರು ಮತ ನೀಡಿದ್ದಾರೆ. ಈ ನಾಯಕರು ತಮ್ಮ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬೇಡಿಕೊಂಡವರು, ಇಂದು ತಮಗೆ ಆಶ್ರಯ ನೀಡಿದ ಮನೆಯ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಅಧಿಕಾರದಲ್ಲಿ ಉಳಿಯುವ ಏಕೈಕ ಉದ್ದೇಶಕ್ಕಾಗಿ ಪಕ್ಷದ ಕಾರ್ಯಕರ್ತರು ಮತ್ತು ಮಿತ್ರಪಕ್ಷಗಳಾದ ಬಿಜೆಪಿ, ಪಿಎಂಕೆ, ಎಎಂಎಂಕೆ ಹಾಗೂ ಅವರ ಕಾರ್ಯಕರ್ತರನ್ನು ಕೈಬಿಟ್ಟಿರುವುದು ಹೇಡಿತನದ ಪರಮಾವಧಿ ಎಂದು ಗುಡುಗಿದೆ.
ಇಷ್ಟು ದಿನ ಡಿಎಂಕೆ ಜೊತೆಗಿನ ಮೈತ್ರಿಯ ಬಗ್ಗೆ ಮಾಧ್ಯಮಗಳಲ್ಲಿ ಬಂದ ವದಂತಿಗಳನ್ನು ಇಟ್ಟುಕೊಂಡು ಮೆರವಣಿಗೆ ಮಾಡುವುದು ನಿಮ್ಮ ಸಂಚಾಗಿತ್ತೇ..? ಸಚಿವ ಸ್ಥಾನಕ್ಕಾಗಿ ಟಿವಿಕೆಯ ಪಾದಗಳಿಗೆ ಬಿದ್ದಿರುವುದನ್ನು ನೀವು ಒಪ್ಪಿಕೊಳ್ಳುತ್ತೀರಾ..? ಆಡಳಿತ ಪಕ್ಷದ ವಿರುದ್ಧ ಬಾಲ ಅಲ್ಲಾಡಿಸುತ್ತಿರುವ ನೀವು, ಡಿಎಂಕೆಯ ಸೆಂಥಿಲ್ ಬಾಲಾಜಿ ಅವರೊಂದಿಗೆ ನಿನ್ನೆ ಅರ್ಧ ಗಂಟೆ ಕಾಲ ಖಾಸಗಿಯಾಗಿ ಏನು ಚರ್ಚಿಸಿದ್ದೀರಿ ಎಂಬುದನ್ನು ತಿಳಿಸುತ್ತೀರಾ? ಪಕ್ಷ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂದು ನಿರ್ಧರಿಸಲು ನೀವೆಲ್ಲ ಯಾರು? ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.
ಈ ಪಕ್ಷವನ್ನು ಕಟ್ಟಿ ಬೆಳೆಸಿದವರು ಎಡಪ್ಪಾಡಿ ಪಳನಿಸ್ವಾಮಿ, ಕಾರ್ಯಕರ್ತರು ಅವರಿಗಾಗಿ ಶ್ರಮಿಸುತ್ತಿದ್ದಾರೆ. ಈ ಪಕ್ಷ ಕೆಲ ಶಾಸಕರ ಆಟದ ವಸ್ತುವಲ್ಲ, ಇದು ಕಾರ್ಮಿಕರ ಚಳುವಳಿಯಾಗಿದ್ದು, ಯಾವುದೇ ಸಮಸ್ಯೆ ಬಂದಾಗಲೂ ಕಾರ್ಯಕರ್ತರ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಟಿವಿಕೆಗೆ ನಮ್ಮ ಬೆಂಬಲ ಎಂದ ಷಣ್ಮುಗಂ ಬಣ

ಇನ್ನೊಂದೆಡೆ, ಸಿವಿ ಷಣ್ಮುಗಂ ಇಂದು ಮಧ್ಯಾಹ್ನ ಸಿಎಂ ವಿಜಯ್​​ರನ್ನು ಭೇಟಿ ಮಾಡಿ ಸರ್ಕಾರವನ್ನು ಬೆಂಬಲಿಸುವ ಪತ್ರವನ್ನು ನೀಡುವುದಾಗಿ ತಿಳಿಸಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿ ಡಿಎಂಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬಯಸಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಷಣ್ಮುಗಂ, ಡಿಎಂಕೆಯನ್ನು ಸೋಲಿಸುವ ಉದ್ದೇಶದಿಂದಲೇ ಎಐಎಡಿಎಂಕೆ ಸ್ಥಾಪನೆಯಾಗಿರುವುದರಿಂದ ಪಳನಿಸ್ವಾಮಿ ನಿರ್ಧಾರವನ್ನು ನಾವು ವಿರೋಧಿಸಿದ್ದೇವೆ ಎಂದು ಹೇಳಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net