_1784311483598.webp?w=480&auto=format%2Ccompress&fit=max)
_1784311483598.webp?w=480&auto=format%2Ccompress&fit=max)
ನವದೆಹಲಿ: ಸಾಮಾಜಿಕ ಜಾಲತಾಣಗಳು, ಆನ್ಲೈನ್ ಗೇಮಿಂಗ್ ಮತ್ತು ಜನರೇಟಿವ್ ಎಐ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಯುವ ಬಳಕೆದಾರರನ್ನು ರಕ್ಷಿಸಲು ಸರ್ಕಾರಗಳು ತಕ್ಷಣವೇ ಸೂಕ್ತ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಒತ್ತಾಯಿಸಿದೆ.
ಅತಿಯಾದ ಡಿಜಿಟಲ್ ಬಳಕೆಯಿಂದ ಮಕ್ಕಳಲ್ಲಿ ಆತಂಕ, ಖಿನ್ನತೆ, ನಿದ್ರಾಹೀನತೆ, ಕೋಪ, ಒಂಟಿತನ ಮತ್ತು ಗಂಭೀರ ಪ್ರಕರಣಗಳಲ್ಲಿ ಆತ್ಮಹತ್ಯೆ ಪ್ರವೃತ್ತಿಗಳು ಹೆಚ್ಚಾಗುತ್ತಿವೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅದಾನೊಮ್ ಘೆಬ್ರೆಯೆಸಸ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಜಂಟಿ ಸಂದೇಶದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಆನ್ಲೈನ್ ಲೈಂಗಿಕ ಶೋಷಣೆ, ಎಐ-ಸೃಷ್ಟಿತ ನಿಂದನಾ ಚಿತ್ರಗಳು ಮತ್ತು ತಪ್ಪು ಮಾಹಿತಿಗಳ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಡಿಜಿಟಲ್ ಕೌಶಲ್ಯಗಳು ನೈಜ ಜೀವನದ ಏಕಾಗ್ರತೆ ಹೆಚ್ಚಿಸುವುದಿಲ್ಲ, ಬದಲಿಗೆ ಮಕ್ಕಳನ್ನು ನೈಜ ಪ್ರಪಂಚ ಮತ್ತು ಸಂಬಂಧಗಳಿಂದ ದೂರ ಮಾಡುತ್ತವೆ. ಆನ್ಲೈನ್ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ ಎಂದು ತಜ್ಞರು ಹೇಳಿದ್ದಾರೆ.
ಶೇ.74ರಷ್ಟು ಸಿಬಿಎಸ್ಇ ವಿದ್ಯಾರ್ಥಿಗಳು ಪಠ್ಯೇತರ ಉದ್ದೇಶಗಳಿಗಾಗಿ ದಿನಕ್ಕೆ 2 ಗಂಟೆಗಳಿಗೂ ಹೆಚ್ಚು ಕಾಲ ಸ್ಕ್ರೀನ್ ಬಳಸುತ್ತಾರೆ. ಶೇ.21 ಮಕ್ಕಳು 4 ಗಂಟೆಗಳಿಗೂ ಹೆಚ್ಚು ಕಾಲ ಮೊಬೈಲ್ಫೋನ್, ಗೇಮಿಂಗ್ಗೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ. ಭಾರತದಲ್ಲಿ 15ರಿಂದ 24 ವರ್ಷ ವಯಸ್ಸಿನ ಯುವಕರಲ್ಲಿ ಸಾಮಾಜಿಕ ಜಾಲತಾಣದ ಗೀಳು ವಿಪರೀತವಾಗಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ 32 ಲಕ್ಷಕ್ಕೂ ಅಧಿಕ ಕರೆಗಳು ಬಂದಿರುವುದು ಸಮೀಕ್ಷೆ ಒಂದರಿಂದ ತಿಳಿದುಬಂದಿದೆ.